ಭಾರತಕ್ಕೆ ಬರುತ್ತಿದೆ ಹೊಚ್ಚ ಹೊಸ ಫೋಕ್ಸ್ ವ್ಯಾಗನ್ ಹ್ಯಾಚ್ ಬ್ಯಾಕ್ ಕಾರು
ದೇಶದೆಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿರುವಂತೆಯೇ ಜರ್ಮನಿಯ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಫೋಕ್ಸ್ ವ್ಯಾಗನ್ ಇಂಡಿಯಾ, ಅತಿ ನೂತನ 'ಪೊಲೊ ಆಲ್ ಸ್ಟಾರ್' ಹ್ಯಾಚ್ ಬ್ಯಾಕ್ ಕಾರನ್ನು ಅನಾವರಣಗೊಳಿಸಿದೆ. ಮೊದಲ ನೋಟದಲ್ಲಿ ಸೀಮಿತ ಆವೃತ್ತಿಯಂತಿರುವ ಫೋಕ್ಸ್ ವ್ಯಾಗನ್ ಪೊಲೊ ಆಲ್ ಸ್ಟಾರ್ ಹ್ಯಾಚ್ ಬ್ಯಾಕ್ ಕಾರು ಯಾವುದೇ ಕ್ಷಣ ಬೇಕಾದರೂ ಬಿಡುಗಡೆಯಾಗಬಹುದು. ಇದು ದೇಶಕ್ಕೆ ಜರ್ಮನಿಯ ಪ್ರತಿಷ್ಠಿತ ಸಂಸ್ಥೆಯು ನೀಡಲಿರುವ ಕೊಡುಗೆಯು ಆಗಿರಲಿದೆ.

ನೂತನ ಫೋಕ್ಸ್ ವ್ಯಾಗನ್ ಪೊಲೊ ಆಲ್ ಸ್ಟಾರ್ ಎಡಿಷನ್, ಎಮಿಯೊದಲ್ಲಿರುವುದಕ್ಕ ಸಮಾನವಾದ ಬ್ಲೂ ಸಿಲ್ಕ್ ಸೇರಿದಂತೆ ಐದು ವಿಶಿಷ್ಟ ಬಣ್ಣಗಳನ್ನು ಮೈಗೆ ಹಚ್ಚಿಕೊಂಡಿದೆ. ಅವುಗಳೆಂದರೆ, ಫ್ಲಾಶ್ ರೆಡ್, ಕ್ಯಾಂಡಿ ವೈಟ್, ಟಾಫಿ ಬ್ರೌನ್ ಮತ್ತು ರಿಫ್ಲೆಕ್ಸ್ ಸಿಲ್ವರ್.

ಪೊಲೊ ಹೈಲೈನ್ ತಳಹದಿಯಲ್ಲಿ ನಿರ್ಮಾಣಗೊಂಡಿರುವ ಪೊಲೊ ಆಲ್ ಸ್ಟಾರ್ ಕಾರು, ಸ್ಟ್ಯಾಂಡರ್ಡ್ ಪೊಲೊ ಆವೃತ್ತಿಗಿಂತಲೂ ಸರಿ ಸುಮಾರು 20,000 ರು.ಗಳಿಂದ 40,000 ರು.ಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ.

ನಿಮ್ಮ ಮಾಹಿತಿಗಾಗಿ, ಪೊಲೊ 1.2 ಎಂಪಿಐ ಹೈಲೈನ್ ಮತ್ತು ಪೊಲೊ 1.5 ಟಿಡಿಐ ಹೈಲೈನ್ ವೆರಿಯಂಟ್ ಗಳು ಅನುಕ್ರಮವಾಗಿ 7.02 ಹಾಗೂ 8.5 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಬದಲಾವಣೆಗಳು
ಕಾರಿನಲ್ಲಿ ಕಂಡುಬಂದಿರುವ ಪ್ರಮುಖ ಬದಲಾವಣೆಯೆಂದರೆ 15 ಇಂಚುಗಳ ಡೈಮಂಡ್ ಕಟ್ ಅಲಾಯ್ ಚಕ್ರ, ಬಿ ಪಿಲ್ಲರ್ ನಲ್ಲಿ ಆಲ್ ಸ್ಟಾರ್ ಲಾಂಛನ, ಅಲ್ಯೂಮಿನಿಯಂ ಡ್ರಿಲ್ಡ್ ಪೆಡಲ್ ನಲ್ಲಿ ಸ್ಕಫ್ ಪ್ಲೇಟ್ ಇತ್ಯಾದಿ ವೈಶಿಷ್ಟ್ಯಗಳಾಗಿವೆ.

ಕಾರಿನೊಳಗೆ ವಿಶೇಷ ಹೋದಿಕೆ, ಹೊಂದಾಣಿಸಬಹುದಾದ ಚಾಲಕ ಆರ್ಮ್ ರೆಸ್ಟ್, ರಿಯರ್ ಎಸಿ ವೆಂಟ್ಸ್ ಸೇವೆಗಳಿರಲಿದೆ.

ತಾಂತ್ರಿಕವಾಗಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದರಲ್ಲಿರುವ ನೈಸರ್ಗಿಕವಾಗಿ ಚೋಷಿತ 1.2 ಲೀಟರ್ ಪೆಟ್ರೋಲ್ ಎಂಜಿನ್ 75 ಅಶ್ವಶಕ್ತಿಯನ್ನು ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ 90 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇವೆರಡರ ಚಾಲನೆಯನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೋಡಿಕೊಳ್ಳಲಿದೆ.

ಅದೇ ಹೊತ್ತಿಗೆ ಹೆಚ್ಚು ಶಕ್ತಿಶಾಲಿ 1.0 ಟಿಎಸ್ ಐ ಟರ್ಬೊ ಪೆಟ್ರೋಲ್ ಎಂಜಿನ್ ಅಥವಾ 105 ಅಶ್ವಶಕ್ತಿ ಉತ್ಪಾದಿಸಬಲ್ಲ ಡೀಸೆಲ್ ಎಂಜಿನ್ ಆಯ್ಕೆಗಳಲ್ಲೂ ಆಲ್ ಸ್ಟಾರ್ ಎಡಿಷನ್ ಲಭ್ಯವಾಗುವ ಸಾಧ್ಯತೆಗಳಿವೆ.

ವಾಹನೋದ್ಯಮ ಮೂಲಗಳಿಂದ ನಮಗೆ ದೊರಕಿರುವ ಮಾಹಿತಿಗಳ ಪ್ರಕಾರ, ಪೊಲೊ ಸೇರಿದಂತೆ ವೆಂಟೊ ಪರಿಷ್ಕೃತ ಕಾರುಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಆಧುನಿಕ ಕಾರುಗಳಲ್ಲಿ ಹೆಚ್ಚು ಜನಪ್ರಿಯತೆಗೆ ಪಾತ್ರವಾಗಿರುವ ಹಾಗೂ ಎಮಿಯೊದಲ್ಲಿರುವುದಕ್ಕೆ ಸಮಾನವಾದ ಡೇಟೈಮ್ ರನ್ನಿಂಗ್ ಲೈಟ್, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಇವುಗಳಲ್ಲಿ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ಇವನ್ನೂ ಓದಿ:
01. ಭಾರತೀಯರಿಗಾಗಿ ಭಾರತದಲ್ಲೇ ನಿರ್ಮಿತ ಕಾರು - ಎಮಿಯೊ ವಿಮರ್ಶೆ
02. ಭಾರತಕ್ಕೆ ಕಾಲಿಟ್ಟ ಫೋಕ್ಸ್ ವ್ಯಾಗನ್ ಟೈಗ್ವಾನ್ - ಮುಂದಕ್ಕೆ ಓದಿ
03. ಫೋಕ್ಸ್‌ವ್ಯಾಗನ್ 'ಮಹಾ' ಮಾಲಿನ್ಯ ಮೋಸ; ಆಗಿದ್ದೇನು ?


Click it and Unblock the Notifications








