ಫೋಕ್ಸ್‌ವ್ಯಾಗನ್ ಮೋಸ; ದೇಶದಲ್ಲೂ 1.9 ಡೀಸೆಲ್ ಕಾರುಗಳಿಗೆ ಹಿಂದಕ್ಕೆ ಬುಲಾವ್
ಕಳೆದ ವರ್ಷ ನಡೆದ ಈ ಯುಗದ ಅತಿ ದೊಡ್ಡ ಫೋಕ್ಸ್ ವ್ಯಾಗನ್ ಮಾಲಿನ್ಯ ಮೋಸ ಪ್ರಕರಣವು ಇಡೀ ಆಟೋಮೊಬೈಲ್ ಕ್ಷೇತ್ರವನ್ನು ತಲ್ಲಣಗೊಳಿಸಿತ್ತು. ಇದಾದ ಬೆನ್ನಲ್ಲೇ ಜಗತ್ತಿನಾದ್ಯಂತ ಲಕ್ಷಗಟ್ಟಲೆ ಕಾರುಗಳಿಗೆ ಹಿಂದಕ್ಕೆ ಕರೆ ನೀಡಲಾಗಿತ್ತು.
ಅಮೆರಿಕ, ಯುರೋಪ್ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಫೋಕ್ಸ್ ವ್ಯಾಗನ್ ಅನುಸರಿಸಿರುವ ಡೀಸೆಲ್ ಕಾರುಗಳ ರಿಕಾಲ್ ಪ್ರಕ್ರಿಯೆಯನ್ನು ಭಾರತಕ್ಕೂ ವಿಸ್ತರಿಸಿದೆ. ಇದರೊಂದಿಗೆ 1.90 ಲಕ್ಷದಷ್ಟು ಡೀಸೆಲ್ ಕಾರುಗಳಿಗೆ ಹಿಂದಕ್ಕೆ ಕರೆ ನೀಡಲು ನಿರ್ಧರಿಸಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಫೋಕ್ಸ್ ವ್ಯಾಗನ್, ಭಾರತದಲ್ಲಿ ಜುಲೈ ತಿಂಗಳಲ್ಲಿ 1.90 ಲಕ್ಷ ಡೀಸೆಲ್ ಕಾರುಗಳಿಗೆ ತಾತ್ಕಾಲಿಕ ರಿಕಾಲ್ ನೀಡಲಾಗುವುದು ಎಂಬುದನ್ನು ಸ್ಪಷ್ಟಪಡಿಸಿದೆ.

ಎಮಿಷನ್ ಮೋಸಕ್ಕೆ ಸಂಬಂಧಪಟ್ಟಂತೆ ಫೋಕ್ಸ್ ವ್ಯಾಗನ್ ಸಂಸ್ಥೆಯ ವಿರುದ್ಧ ಭಾರತದಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಹಾಗಿದ್ದರೂ ಎಮಿಷನ್ ಸಾಫ್ಟ್ ವೇರ್ ದೋಷವನ್ನು ಬಗೆಹರಿಸಿ ಕೊಡಲಾಗುವುದು.

2015 ಸೆಪ್ಟೆಂಬರ್ ತಿಂಗಳಲ್ಲಿ ಫೋಕ್ಸ್ ವ್ಯಾಗನ್ ಮಾಲಿನ್ಯ ಮೋಸ ಪ್ರಕರಣವು ಬಯಲುಗೊಂಡಿತ್ತು. ಫೋಕ್ಸ್ ವ್ಯಾಗ್ ಸೇರಿದಂತೆ ಸಹ ಬ್ರಾಂಡ್ ಗಳಾದ ಆಡಿ, ಪೋರ್ಷೆ, ಸ್ಕೋಡಾ ಹಾಗೂ ಸಿಯೆಟ್ ಸೇರಿದಂತೆ 11 ದಶಲಕ್ಷದಷ್ಟು ಡೀಸೆಲ್ ಕಾರುಗಳಲ್ಲಿ ದೋಷ ಕಂಡುಬಂದಿತ್ತು.

ಅಮೆರಿಕ ಮಾಲಿನ್ಯ ತಪಾಸಣೆಯ (ಎಮಿಷನ್ ಟೆಸ್ಟ್) ವೇಳೆ ತಪಾಸಣೆಯ ಮಾನದಂಡವನ್ನು ಮರೆಮಾಚಲು ಫೋಕ್ಸ್ ವ್ಯಾಗನ್ ವಿಶೇಷ ರೀತಿಯ ಸಾಫ್ಟ್ ವೇರ್ ವೊಂದನ್ನು ಬಳಕೆ ಮಾಡಿತ್ತು. ಇದರಿಂದ ಇಂಧನ ವಿಸರ್ಜನೆ ಪರೀಕ್ಷೆಯಲ್ಲಿ ಕಾರುಗಳು ತೇರ್ಗಡೆ ಹೊಂದುತ್ತಿದ್ದವು. ನೈಜ ರಸ್ತೆ ಪರಿಸ್ಥಿತಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಿದ್ದರೂ ಅದನ್ನು ಪತ್ತೆಹಚ್ಚದಂತೆ ಈ ವಿಶೇಷ ಸಾಫ್ಟ್ ವೇರ್ ಬಳಕೆ ಮಾಡಲಾಗಿತ್ತು.

ಮಾಲಿನ್ಯ ಮೋಸ ಪ್ರಕರಣದಿಂದಾಗಿ ಫೋಕ್ಸ್ ವ್ಯಾಗನ್ ಮಾರಾಟದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಅಮೆರಿಕದಲ್ಲಿ ರಿಕಾಲ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗ ಭಾರತದಲ್ಲೂ ಇದಕ್ಕೆ ಸಮಾನವಾದ ಹಿಂದಕ್ಕೆ ಕರೆ ನೀಡಲಾಗುತ್ತಿದೆ. ಇದು ಜುಲೈನಿಂದ ಆರಂಭವಾಗಲಿದ್ದು ಮುಂದಿನ 10 ತಿಂಗಳುಗಳ ವರೆಗೆ ಮುಂದುವರಿಯಲಿದೆ.

ಈ ಸಂಬಂಧ ಫೋಕ್ಸ್ ವ್ಯಾಗನ್ ಸಂಸ್ಥೆಯೇ ಖುದ್ದಾಗಿ ಗ್ರಾಹಕರನ್ನು ಸಂಪರ್ಕಿಸಲಿದ್ದು, ಮಾಹಿತಿಯನ್ನು ನೀಡಲಿದೆ. ಇದೇ ವೇಳೆಯಲ್ಲಿ 'ಭಾರತ್ ಸ್ಟೇಜ್ 4' ದಂತೆ ದೇಶದಲ್ಲಿನ ಎಲ್ಲ ಮಾಲಿನ್ಯ ಮಾನದಂಡಗಳನ್ನು ಪಾಲಿಸುವುದಾಗಿಯೂ ತಿಳಿಸಿದೆ. ರಿಕಾಲ್ ಗಾಗಿ ರೆಗ್ಯೂಲೇಟರ್ ನಿಂದ ಅನುಮತಿ ಪಡೆಯುವ ಅಗತ್ಯವಿದೆ.

ರಿಕಾಲ್ ಕುರಿತಾಗಿ ಹೆಚ್ಚಿನ ವಿವರಗಳು ಇನ್ನಷ್ಟೇ ಬಯಲಾಗಬೇಕಿದೆ. ಅಲ್ಲದೆ ಒಮ್ಮೆ ದೋಷಯುಕ್ತ ಕಾರನ್ನು ರಿಕಾಲ್‌ಗೊಳಪಡಿಸಿದಾಗ ಸರ್ವೀಸ್ ಸೆಂಟರ್ ನಲ್ಲಿ ಅದನ್ನು ಸರಿಪಡಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದು ತಿಳಿದು ಬಂದಿಲ್ಲ. ಭಾರತದಲ್ಲಿ ಬೀಟ್ಲ್ ಹೊರತುಪಡಿಸಿ ಇತೆರೆಲ್ಲ ಮಾದರಿಗಳಿಗೆ ಡೀಸೆಲ್ ಎಂಜಿನ್ ಆಯ್ಕೆಯಿರುವುದು ಗಮನಾರ್ಹ.


Click it and Unblock the Notifications








