ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಬಿಎಮ್‍ಡಬ್ಲ್ಯೂ 6 ಸಿರೀಸ್ ಜಿಟಿ ಡೀಸೆಲ್ ಕಾರು..
ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍ಡಬ್ಲ್ಯೂ ತಮ್ಮ ಗ್ರ್ಯಾನ್ ಟೂರಿಸ್ಮೊ ಕಾರಿನ ಡೀಸೆಲ್ ವೇರಿಯಂಟ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍ಡಬ್ಲ್ಯೂ ತಮ್ಮ ಗ್ರ್ಯಾನ್ ಟೂರಿಸ್ಮೊ ಕಾರಿನ ಡೀಸೆಲ್ ವೇರಿಯಂಟ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಈ ಕಾರು ಲಕ್ಷುರಿ ಲೈನ್ ಮತ್ತು ಎಮ್-ಸ್ಪೋರ್ಟ್ ಎಂಬ ಎರಡು ವೇರಿಯಂಟ್‍ಗಳಲ್ಲಿ ಖರೀದಿಗೆ ಲಭ್ಯವಿದೆ.

ಬಿಎಮ್‍ಡಬ್ಲ್ಯೂ 6 ಸಿರೀಸ್ ಜಿಟಿ ಡೀಸೆಲ್ ಕಾರಿನ ಲಕ್ಷುರಿ ಲೈನ್ ವೇರಿಯಂಟ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 66.50 ಲಕ್ಷಕ್ಕೆ ನಿಗದಿಪಡಿಸಿದರೆ, ಇನ್ನು ಎಮ್-ಸ್ಪೋರ್ಟ್ ವೇರಿಯಂಟ್ ಕಾರಿನ ಬೆಲೆಯನ್ನು ರೂ. 79.70 ಲಕ್ಷಕ್ಕೆ ನಿಗದಿಪದಿಸಲಾಗಿದೆ.

ಬಿಎಮ್‍ಡಬ್ಲ್ಯೂ 6 ಸಿರೀಸ್ ಜಿಟಿ ಕಾರು ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಮಾದರಿಯ ಕಾರುಗಳನ್ನು 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಲಾಯಿತು.

ಬಿಎಮ್‍ಡಬ್ಲ್ಯೂ 6 ಸಿರೀಸ್ ಜಿಟಿ ಕಾರಿನ ಡೀಸೆಲ್ ಮಾದರಿಯನ್ನು ಗ್ರಾಹಕರು ಬಿಎಮ್‍ಡಬ್ಲ್ಯೂ ಸಂಸ್ಥೆಯ ಅಧಿಕೃತ ಡೀಲರ್‍ಗಳ ಬಳಿ ಖರೀದಿಸಬಹುದಾಗಿದ್ದು, ಈ ಕಾರನ್ನು ಸಂಪೂರ್ಣವಾಗಿ ಚೆನ್ನೈನಲ್ಲಿನ ಪ್ಲಾಂಟ್‍ನಲ್ಲಿ ಒಟ್ಟುಗೂಡಿಸಲಾಗಿದೆ.

ಹೊಸದಾಗಿ ಬಿಡುಗಡೆಗೊಂಡ ಬಿಎಮ್‍ಡಬ್ಲ್ಯೂ 6 ಸಿರೀಸ್ ಜಿಟಿ ಕಾರು ಮಿನೆರಲ್ ವೈಟ್, ಗ್ಲಾಶಿಯರ್ ಸಿಲ್ವರ್, ಮೆಡಿಟೆರೇನಿಯನ್ ಬ್ಲ್ಯೂ ಮತ್ತು ರಾಯಲ್ ಬರ್ಗ್ಯುಲರಿ ರೆಡ್ ಬಣ್ಣಗಳಲ್ಲಿ ಲಭ್ಯವಿದೆ. ಇದಲ್ಲದೆ ಎಮ್-ಸ್ಪೋರ್ಟ್ ವೇರಿಯಂಟ್ ಕಾರುಗಳು ಎರಡು ಮೆಟಾಲಿಕ್ ಪೆಯಿಂಟ್ ಸ್ಕೀಮ್‍ನಲ್ಲಿ ಕೂಡಾ ಲಭಯವಿದ್ದು, ಕಾರ್ಬನ್ ವೈಟ್ ಮತ್ತು ಬ್ಲೂಸ್ಟೋನ್ ಎಂಬ ಬಣ್ಣಗಳಲ್ಲಿ ಲಭ್ಯವಿದೆ.

ಬಿಎಮ್‍ಡಬ್ಲ್ಯೂ 6 ಸಿರೀಸ್ ಜಿಟಿ ಇದೀಗ ವಿಸ್ತರಿಸಿದ ಕ್ರೋಮ್ ವಿನ್ಯಾದಲ್ಲಿ ಲಗ್ಗೆಯಿಟ್ಟಿದ್ದು, ಇದರಲ್ಲಿ ಸಿಗ್ನೇಚರ್ ಕಿಡ್ನಿ ಗ್ರಿಲ್, ಫ್ರಂಟ್ ಬಂಪರ್, ರೀರರ್ ಏಪ್ರಾನ್ ಮತ್ತು ಟೈಲ್‍ಪೈಪ್ ಅನ್ನು ಪಡೆದುಕೊಂಡಿದೆ.

ಎಮ್-ಸ್ಪೋರ್ಟ್ ವೇರಿಯಂಟ್ ಕಾರುಗಳು ಎಮ್ ಪರ್ಫಾರ್ಮೆನ್ಸ್ ಪ್ಯಾಕೇಜ್ ಅನ್ನು ಪಡೆದಿದ್ದು, ಇದರಲ್ಲಿ ವಿಶೇಷವಾಗಿ ಸೈಡ್ ಸ್ಕರ್ಟ್ಸ್ ಮತ್ತು ರಿಯರ್ ಏಪ್ರಾನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಅಗಲವಾಗ ಫ್ರಂಟ್ ಏರ್ ಇಂಟೇಕ್ಸ್, ಎಮ್-ಸ್ಪೋರ್ಟ್ಸ್ ಬ್ರೇಕ್ಸ್ ಮತ್ತು ಎಮ್ ಎಂಬ ಚಿನ್ಹೆಯನ್ನು ಕಾರಿನ ಬದಿಗಳಲ್ಲಿ, ಕಾರ್ ಕೀ ಮೇಲೆ ಮತ್ತು ಅಲಾಯ್ ವ್ಹೀಲ್‍ಗಳ ಮೇಲೆ ಅಳವಡಿಸಲಾಗಿದೆ.

ಇನ್ನು ಕಾರಿನ ಒಳಭಾಗದ ವಿನ್ಯಾಸದ ಬಗ್ಗೆ ಹೇಳುವುದಾದರೆ 2 ವಿಭಜಿತ ಪ್ಯಾನೊರಾಮಿಕ್ ಗ್ಲಾಸ್ ರೂಫ್, ವಿದ್ಯುತ್‍ನಿಂದ ಅಡ್ಜಸ್ಟ್ ಮಾಡಬಹುದಾದ ಹಿಂಭಾಗದ ಸೀಟ್‍ಗಳು, ಹೆಡ್‍ರೆಸ್ಟ್ ಗಳಿಗೆ ಅರಾಮದಾಯಕ ಕ್ಯೂಷನ್, ಸನ್‍ಬ್ಲೈಂಡ್ಸ್ ಅನ್ನು ಹಿಂಭಾಗದ ವಿಂಡೋಗಳಿಗೆ ಅಳವಡಿಸಲಾಗಿದೆ. ಇದಲ್ಲದೆ ಏಂಬಿಯಂಟ್ ಲೈಟ್ನಿಂಗ್, 6 ಆಯ್ಕೆಯುಳ್ಳ ಬೆಳಕು ವಿನ್ಯಾಸ, ಫೈನ್ ಮರದ ಒಳಾಂಗಣವನ್ನು ಪಡೆದಿದೆ.

ಎಮ್-ಸ್ಪೋರ್ಟ್ ವೇರಿಯಂಟ್ ಕಾರಿನ ಒಳಭಾಗದಲ್ಲಿನ ನೆಪ್ಪಾ ಲೆಧರ್‍ದಿಂದ ಸಜ್ಜುಗೊಳಿಸಲಾಗಿದ್ದು, ಚಾಲಕನಿಗೆ ಮತ್ತು ಪ್ಯಾಸ್ಸೆಂಜರ್‍ಗಳಿಗೆ ಕಂಫರ್ಟ್ ಸೀಟ್ಸ್, ಮೆಮೊರಿ ಫಂಕ್ಷನ್ ಅಳವಡಿಸಲಾಗಿದೆ.

ಇವುಗಳಲ್ಲದೆ 10.25 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಹಿಂಬದಿಯ ಸವಾರರ ಮನರಂಜನೆಗಾಗಿ 10.2 ಇಂಚಿನ ಕಲರ್ ಸ್ಕ್ರೀನ್, ಬಿಎಮ್‍ಡಬ್ಲ್ಯೂ ನ್ಯಾವಿಗೇಶನ್, ಬಿಎಮ್‍ಡಬ್ಲ್ಯೂ ಕನೆಕ್ಟೆಡ್ ಡ್ರೈವ್ ಮತ್ತು ಹರ್ಮಾನ್ ಕಾರ್ಡನ್ ಆಡಿಯೊ ಸಿಸ್ಟಮ್ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ. ಮತ್ತು ಎಮ್-ಸ್ಪೋರ್ಟ್ ವೇರಿಯಂಟ್ ಕಾರುಗಳು ಅಧಿಕವಾಗಿ ಪೂರ್ಣ ಕಲರ್ ಪ್ರೊಜೆಕ್ಷನ್‍ನೊಂದಿಗೆ ಹೆಡ್ಸ್ ಅಪ್ ಡಿಸ್ಪ್ಲೇಯನ್ನು ಕೂಡಾ ಪಡೆದಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರುಗಳಲ್ಲಿ ಪಾರ್ಕ್ ಅಸ್ಸಿಸ್ಟ್, ಪಾರ್ಕ್ ಡಿಸ್ಟಾನ್ಸ್ ಕಂಟ್ರೋಲ್, ಸರೌಂಡ್ ವ್ಯೂ ಕ್ಯಾಮೆರಾ, ರಿಮೋಟ್ ಕಂಟ್ರೋಲ್ ಎಂಜಿನ್, ಸ್ಟಾರ್ಟ್ ಸ್ಟಾಪ್ ಬಟನ್, ಕಾರಿನ ಸರೌಂಡ್ ವ್ಯೂ ಮತ್ತು ಸುತ್ತಲಿರುವ ಟ್ರಾಫಿಕ್ ಗತಿಯನ್ನು 3ಡಿಯಲ್ಲಿ ತೋರಿಸುತ್ತದೆ.

ಅಲ್ಲದೇ 6 ಏರ್‍ಬ್ಯಾಗ್‍ಗಳು, ಬ್ರೇಕ್ ಅಸ್ಸಿಸ್ಟ್ ನೊಂದಿಗೆ ಎಬಿಎಸ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಡೆಸ್ಸೆಂಟ್ ಕಂಟ್ರೋಲ್, ರನ್ ಫ್ಲ್ಯಾಟ್ ಟೈರ್ಸ್, ಕ್ರಾಶ್ ಸೆನ್ಸಾರ್, ಸೈಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್, ಕಾರ್ನೆರಿಂಗ್ ಬ್ರೇಕ್ ಕಂಟ್ರೋಲ್ ಮತ್ತು ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ ಮೌಂಟಿಗ್ ಅನ್ನು ಅಳವಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಹೊಸ ಬಿಎಮ್‍ಡಬ್ಲ್ಯೂ 630ಡಿ ಜಿಟಿ ಕಾರುಗಳು ಟ್ವಿನ್ ಪವರ್ 3.0 ಲೀಟರ್, 6 ಸಿಲೆಂಡರ್ ಡೀಸೆಲ್ ಎಂಜಿನ್ ಸಹಾಯದಿಂದ 265ಬಿಹೆಚ್‍ಪಿ ಮತ್ತು 620ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 8 ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮೇಲೆ ಹೇಳಿರುವ ಹಾಗೆ ಈ ಕಾರಿನ ಪೆಟ್ರೋಲ್ ಮಾದರಿಯನ್ನು 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಿದ್ದು, ಇದೀಗ ಡೀಸೆಲ್ ಮಾದರಿಯಲ್ಲ್ಯೂ ಲಭ್ಯವಿದೆ. ಮತ್ತು ಮಾರುಕಟ್ಟೆಯಲ್ಲಿ ಮೆರ್ಸಿಡಿಸ್ ಬೆಂಜ್ ಇ-ಕ್ಲಾಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








