ಬೆಂಗಳೂರಿನಲ್ಲಿ ಮೊದಲ ಬಾರಿಗೆ ತನ್ನ ಹೊಸ ಕಾರುಗಳನ್ನು ಪ್ರದರ್ಶನ ಮಾಡಿದ ಕಿಯಾ
ಜಗತ್ತಿನ 8ನೇ ಅತಿದೊಡ್ಡ ದಕ್ಷಿಣ ಕೊರಿಯಾ ಮೂಲದ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಕಿಯಾ ಮೋಟಾರ್ಸ್ ಸದ್ಯ ಭಾರತದಲ್ಲಿ ಮೊದಲ ಬಾರಿಗೆ ತನ್ನ ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದಕ್ಕೂ ಮುನ್ನ ಜನಪ್ರಿಯ ಬೆಂಗಳೂರು ಫುಟ್ಬಾಲ್ ಕ್ಲಬ್‌ನ ಮುಖ್ಯ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ.

ಕಿಯಾ ಮೋಟಾರ್ಸ್ ಮತ್ತು ಬೆಂಗಳೂರು ಫುಟ್ಬಾಲ್ ಕ್ಲಬ್ ಸಂಸ್ಥೆಯು 4 ವರ್ಷಗಳ ಅವಧಿಗೆ ಮುಖ್ಯ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದು, ಮುಂಬರುವ ಇಂಡಿಯನ್ ಸೂಪರ್ ಫುಟ್ಬಾಲ್ ಲೀಗ್‌ಗಳಲ್ಲಿ ಕಿಯಾ ಸಂಸ್ಥೆಯು ಬಿಎಫ್‌ಸಿ ತಂಡದ ಪಾಯೋಜಕತ್ವವನ್ನು ವಹಿಸಲಿದೆ. ಹೀಗಾಗಿ ಬಿಎಫ್‌ಸಿ ತಂಡದ ಜರ್ಸಿಗಳಲ್ಲಿ ಕಿಯಾ ಸಂಸ್ಥೆಯ ಲೋಗೊ ಮಿಂಚಲಿದ್ದು, ಅಕ್ಟೋಬರ್ 7ರಿಂದ ಸೂಪರ್ ಲೀಗ್‌ನ ಮೊದಲ ಆವೃತ್ತಿ ಆರಂಭವಾಗಲಿದೆ.

ಈ ಸಂಬಂಧ ಕಿಯಾ ಮೋಟಾರ್ಸ್ ಇಂಡಿಯಾ ಸಿಇಒ ಕೂಕ್‌ಹ್ಯುನ್ ಶಿಮ್ ಮತ್ತು ಬೆಂಗಳೂರು ಫುಟ್ಬಾಲ್ ಕ್ಲಬ್‌ನ ಸಿಇಒ ಪಾರ್ಥ್ ಜಿಂದಾಲ್ ಅವರು ಹೊಸ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಿದ್ದು, ಈ ವೇಳೆ ಕಿಯಾ ಸಂಸ್ಥೆಯು ಭಾರತದಲ್ಲಿ ಬಿಡುಗಡೆಯಾಗಲಿರುವ ತನ್ನ ಬಹುನಿರೀಕ್ಷಿತ ಕಾರು ಮಾದರಿಗಳಾದ ಗ್ರ್ಯಾಂಡ್ ಕಾರ್ನಿವಾಲ್ ಮತ್ತು ಸೊರೆಂಟೊ ಆವೃತ್ತಿಗಳನ್ನು ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.

ವರ್ಷದ ಆರಂಭದಲ್ಲಿ ನಡೆದಿದ್ದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿದ್ದನ್ನು ಹೊರತುಪಡಿಸಿ ಇದೇ ಮೊದಲ ಬಾರಿಗೆ ಗ್ರ್ಯಾಂಡ್ ಕಾರ್ನಿವಾಲ್ ಮತ್ತು ಸೊರೆಂಟೊ ಕಾರುಗಳನ್ನು ಸಾರ್ವಜನಿಕವಾಗಿ ಬೆಂಗಳೂರಿನಲ್ಲಿ ಪ್ರದರ್ಶನ ಮಾಡಿದೆ.

ಯುರೋಪ್ ಮತ್ತು ಅಮೆರಿಕ ಮಾರುಕಟ್ಟೆಗಳಲ್ಲಿ ಈಗಾಗಲೇ ಭಾರೀ ಜನಪ್ರಿಯತೆ ಸಾಧಿಸಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಇದೇ ಮೊದಲ ಬಾರಿಗೆ ಭಾರತದಲ್ಲಿ ತನ್ನ ವಾಣಿಜ್ಯ ಚಟುವಟಿಕೆಗೆ ಚಾಲನೆ ನೀಡಿದ್ದು, ಸುಮಾರು 15 ಸಾವಿರ ಕೋಟಿ ಬಂಡವಾಳದೊಂದಿಗೆ ಹಲವು ಜನಪ್ರಿಯ ಕಾರುಗಳನ್ನು ಪರಿಚಯಿಸುವ ಸುಳಿವು ನೀಡಿದೆ.

ಆಂಧ್ರಪ್ರದೇಶದಲ್ಲಿ ತನ್ನ ಮೊದಲ ಕಾರು ಉತ್ಪಾದನಾ ಘಟಕವನ್ನು ತೆರೆಯುವ ಮೂಲಕ ಈಗಾಗಲೇ ವಿವಿಧ ಮಾದರಿಯ ಕಾರುಗಳ ಉತ್ಪಾದನೆಯನ್ನು ಆರಂಭಗೊಳಿರುವ ಕಿಯಾ ಸಂಸ್ಥೆಯು ಮುಂಬರುವ 2019ರ ಆರಂಭದಲ್ಲೇ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ವೇದಿಕೆ ಸಜ್ಜುಗೊಳಿಸುತ್ತಿದೆ.

ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಎಸ್‌ಯುವಿ, ಸೆಡಾನ್ ಮತ್ತು ಐಷಾರಾಮಿ ಕಾರುಗಳನ್ನು ಸಿದ್ದಗೊಳಿಸಿದ್ದು, ಇನೋವಾ ಕ್ರಿಸ್ಟಾ ಕಾರುಗಳ ಪ್ರತಿಸ್ಪರ್ಧಿಯಾಗಿರುವ ಗ್ರ್ಯಾಂಡ್ ಕಾರ್ನಿವಾಲ್ ಕಾರಿನ ಭಾರೀ ನೀರಿಕ್ಷೆ ಇಟ್ಟುಕೊಳ್ಳಲಾಗಿದೆ.

2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ತನ್ನ ಮೊದಲ ಎಸ್‌ಪಿ ಕಾನ್ಸೆಪ್ಟ್ ಕಾರನ್ನು ಬಿಡುಗಡೆ ಮಾಡಲಿರು ಕಿಯಾ ಸಂಸ್ಥೆಯು ತದನಂತರ ಸೊರೆಂಟೊ, ಸ್ಟೊನಿಕ್ ಕ್ರಾಸ್ ಓವರ್ ಎಸ್‌ಯುವಿ ಮತ್ತು ಗ್ರ್ಯಾಂಡ್ ಕಾರ್ನಿವಾಲ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ವರದಿಗಳ ಪ್ರಕಾರ, ಕಿಯಾ ನಿರ್ಮಾಣದ ಸೊರೆಂಟೊ, ಸ್ಟೊನಿಕ್ ಕ್ರಾಸ್‍ಓವರ್ ಮತ್ತು ಗ್ರ್ಯಾಂಡ್ ಕಾರ್ನಿವಾಲ್ ಎಂಪಿವಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸಿದ್ದಗೊಳಿಸಲು ಯೋಜನೆ ರೂಪಿಸಿದ್ದು, ಸ್ಟೊನಿಕ್ ಕಾರುಗಳು ಹ್ಯುಂಡೈ ನಿರ್ಮಾಣದ ಕೋನಾ ಎಸ್‌ಯುವಿ ಹೋಲಿಕೆಯನ್ನು ಪಡೆದಿದೆ.

ಅದೇ ರೀತಿಯಾಗಿ ಟೊಯೊಟಾ ಇನೋವಾ ಕ್ರಿಸ್ಟಾಗೆ ಪೈಪೋಟಿ ನೀಡುವ ಉದ್ದೇಶದಿಂದ ಗ್ರ್ಯಾಂಡ್ ಕಾರ್ನಿವಾಲ್ ಅಭಿವೃದ್ಧಿ ಮಾಡಲಾಗುತ್ತಿದ್ದು, ಇದು ಬರೋಬ್ಬರಿ 11 ಸೀಟರ್ ವೈಶಿಷ್ಟ್ಯತೆಯನ್ನು ಹೊಂದಿಯಂತೆ. ಹೀಗಾಗಿ ಈ ಕಾರು ಟೂರಿಸ್ಟ್ ಬಳಕೆಯ ವಾಹನ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ಸಾಧ್ಯತೆಯಿದೆ.

ಸದ್ಯ ಇದೇ ಮಾದರಿಯು ಉತ್ತರ ಅಮೆರಿಕದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದ್ದು, ಸೆಡೊನಾ ಹೆಸರಿನಲ್ಲಿ ಜನಪ್ರಿಯತೆ ಪಡೆದಿದೆ. ಐದು ಬಾಗಿಲು ವಿನ್ಯಾಸವನ್ನು ಹೊಂದಿರುವ ಈ ಕಾರು ಪವರ್ ಸ್ಲಿಡಿಂಗ್ ಡೋರ್ ಸಿಸ್ಟಂ ಪಡೆದುಕೊಂಡಿದೆ.

ಕೇವಲ ಬಟನ್ ಪುಶ್ ಮಾಡುವ ಡೋರ್ ಎಳೆದುಕೊಳ್ಳಬಹುದಾದ ವ್ಯವಸ್ಥೆಯಿದ್ದು, ಇದರ ಜೊತೆಗೆ ಡ್ಯುಯಲ್ ಸನ್‌ರೂಫ್, ತ್ರಿ ಜೋನ್ ಏರ್ ಕಂಡಿಷನ್ ಸಿಸ್ಟಂ ಸೇರಿದಂತೆ ಹಲವು ವಿಶ್ವದರ್ಜೆ ಸೌಲಭ್ಯವನ್ನು ಪಡೆದಿರುವುದು ಎಂಪಿವಿ ಪ್ರಿಯರ ಆಕರ್ಷಣೆಗೆ ಕಾರಣವಾಗಲಿದೆ.

ಎಂಜಿನ್ ಸಾಮರ್ಥ್ಯ
ಸದ್ಯ ಮಾರುಕಟ್ಟೆಯಲ್ಲಿರುವ ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳು 2.2 -ಲೀಟರ್ ಡಿಸೇಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, 6-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ವಿನ್ಯಾಸ ಹೊಂದಿವೆ. ಹಾಗೆಯೇ ಕ್ರಾಸ್ಓವರ್ ಸ್ಟೊನಿಕ್ ಕಾರುಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.6-ಲೀಟರ್ ಡಿಸೇಲ್ ಎಂಜಿನ್ ಪಡೆದುಕೊಂಡಿವೆ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಕಿಯಾ ನಿರ್ಮಾಣದ ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 9-ಸೀಟರ್ ಮತ್ತು 11 ಸೀಟರ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಕಿಯಾ ಸಂಸ್ಥೆಯು ಭಾರತದಲ್ಲಿ ಯಾವ ಮಾದರಿಯನ್ನು ಬಿಡುಗಡೆ ಮಾಡಲಿದೆ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ.

ಒಟ್ಟಿನಲ್ಲಿ ಕಿಯಾ ಬಿಡುಗಡೆ ಮಾಡಲಿರುವ ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳು ಇನೋವಾ ಕ್ರಿಸ್ಟಾ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದ್ದು, ಸ್ಟೊನಿಕ್ ಕಾರಿನ ಬೆಲೆಯು 14 ಲಕ್ಷದಿಂದ 18 ಲಕ್ಷ ಮತ್ತು ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳ ಬೆಲೆಯು 17 ಲಕ್ಷದಿಂದ 21 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

ಹೀಗಾಗಿ ಕಿಯಾ ಗ್ರ್ಯಾಂಡ್ ಕಾರ್ನಿವಾಲ್ ಭಾರತದಲ್ಲಿ ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಹಲವು ವಿಶೇಷತೆಗಳಿಗೆ ಕಾರಣವಾಗಲಿದ್ದು, 2019ರ ಮಧ್ಯಂತರ ವೇಳೆಗೆ ಭಾರತದಲ್ಲಿ ಕಿಯಾ ಪರ್ವ ಆರಂಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.
ಕಿಯಾ ಎಸ್‌ಪಿ ಕಾನ್ಸೆಪ್ಟ್ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಫೋಟೋ ಗ್ಯಾಲರಿ..!


Click it and Unblock the Notifications