'ಮರಾಜೊ' ಹೆಸರಿನೊಂದಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಮಹೀಂದ್ರಾ ಹೊಸ ಎಂಪಿವಿ..
ಮಹೀಂದ್ರಾ ಸಂಸ್ಥೆಯ ಕಾರು ಉತ್ಪಾದನೆ ಮತ್ತು ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು, ಇದೇ ಕಾರಣಕ್ಕೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸುವ ತವಕದಲ್ಲಿದೆ.
ಮಹೀಂದ್ರಾ ಸಂಸ್ಥೆಯ ಕಾರು ಉತ್ಪಾದನೆ ಮತ್ತು ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು, ಇದೇ ಕಾರಣಕ್ಕೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸುವ ತವಕದಲ್ಲಿದೆ. ಇವುಗಳಲ್ಲಿ ವಿನೂತನ ಮಾದರಿಯ ಎಂಪಿಯು ಇದೀಗ ಮರಾಜೊ ಹೆಸರಿನೊಂದಿಗೆ ಬಿಡುಗಡೆಯಾಗುವ ಬಗ್ಗೆ ವರದಿಯಾಗಿದೆ.

ಮಹೀಂದ್ರಾ ಸಂಸ್ಥೆಯು ಈಗಾಗಲೇ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಹಲವು ಸುತ್ತಿನ ಪರೀಕ್ಷಾರ್ಥ ಡ್ರೈವ್‌ಗಳನ್ನು ಕೈಕೊಂಡಿದ್ದು, ಯು321 ಎಂಬ ಕೋಡ್ ನೆಮ್ ಆಧಾರ ಮೇಲೆ ಟೆಸ್ಟಿಂಗ್ ಕಾರ್ಯಗಳನ್ನ ಪೂರ್ಣಗೊಳಿಸಿದೆ. ಇದೀಗ ಅಂತಿಮವಾಗಿ ಕಾರಿನ ಅಧಿಕೃತ ಹೆಸರನ್ನು ಬಹಿರಂಗ ಮಾಡಲಾಗುತ್ತಿದ್ದು, ಮಹೀಂದ್ರಾ ಸಂಸ್ಥೆಯು ಅಧಿಕೃತವಾಗಿ ಹೆಸರು ಬಹಿರಂಗಪಡಿಸುವ ಮುನ್ನವೇ ಹೊಸ ಕಾರಿನ ಹೆಸರು ಮರಾಜೊ ಎಂಬುವುದು ಖಚಿತವಾಗಿದೆ.

ಈ ಬಗ್ಗೆ ಇದೇ ತಿಂಗಳು ಕೊನೆಯಲ್ಲಿ ಅಧಿಕೃತ ಹೆಸರನ್ನ ಬಹಿರಂಗ ಪಡಿಸಲಿರುವ ಮಹೀಂದ್ರಾ ಸಂಸ್ಥೆಯು ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಮತ್ತಷ್ಟು ಮಾಹಿತಿಗಳನ್ನ ಹೊರಹಾಕಲಿದೆ. ಹೀಗಾಗಿ ಮಹೀಂದ್ರಾ ಬಿಡುಗಡೆ ಮಾಡುವ ಕಾರಿನ ಮಾಹಿತಿಗಳ ಮೇಲೆ ಕಾರಿನ ಬೇಡಿಕೆ ನಿರ್ಧಾರವಾಗಲಿದೆ ಎಂಬ ಸದ್ಯ ಮಾರುಕಟ್ಟೆಯಲ್ಲಿ ಮಾತುಗಳು.

ಇನ್ನು ಬಿಡುಗಡೆಯಾಗಲಿರುವ ಮರಾಜೊ ಎಂಪಿವಿ ಕಾರುಗಳು ಮಹಿಂದ್ರಾ ಸಂಸ್ಥೆಯ ಮೊದಲ ಮೊನೊಕ್ಯೂ ಬಾಡಿ ಕಿಟ್ ಹೊಂದಿರುವ ಕಾರಾಗಿದ್ದು, ಪ್ರಸ್ತುತ ಜೈಲೋ ಕಾರುಗಳಲ್ಲಿ ಬಳಸಲಾಗಿರುವ ಬಾಡಿ ಆನ್ ಫ್ರೇಮ್ ಶೈಲಿಗಿಂತಲೂ ಇದು ವಿಭಿನ್ನವಾಗಿರಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಸಿಕ್ಕಿರುವ ಮಾಹಿತಿ ಪ್ರಕಾರ, ಮರಾಜೊ ಕಾರುಗಳು 6 ಸ್ಪ್ಲಿಟ್ ಸ್ಪೋಕ್ ಎರಡು ಟೋನ್‍ಗಳುಳ್ಳ ಅಲಾಯ್ ಚಕ್ರಗಳು, ಕಪ್ಪು ಹೆಡ್‍ಲ್ಯಾಂಪ್ ಬೆಜೆಲ್ಸ್ ಮತ್ತು ಮುಂಭಾಗದ ಗ್ರೀಲ್‍ನಲ್ಲಿ ಮಹಿಂದ್ರಾ ಸಂಸ್ಥೆಯ ಸಿಗ್ನೇಚರ್‍ನಿಂದ ಸಜ್ಜುಗೊಂಡಿದೆ.

ಮಹೀಂದ್ರಾ ಮರಾಜೊ ಎಂಪಿವಿ ಕಾರು ಏಳು ಲಂಬಾಕಾರದ ಗ್ರಿಲ್, ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಹೊಸ ಬಂಪರ್, ಫಾಗ್ ಲ್ಯಾಂಪ್ಸ್, ಬೂಮರಾಂಗ್ ಆಕಾರದ ಎಲ್ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್ ವೈಶಿಷ್ಟ್ಯತೆಗಳನ್ನು ಪಡೆದಿದೆ.

ಕಾರಿನ ಒಳವಿನ್ಯಾಸದ ಬಗ್ಗೆ ಹೇಳುವುದಾದರೇ, ಎತ್ತರವಾದ ಏಳು ಲೆದರ್ ಸೀಟ್‍ಗಳು, ಆಂಡ್ರಾಯ್ಡ್ ಆಟೋ ಆಪ್ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಅನಲಾಗ್ ಡಿಜಿಟಲ್ ಇನ್ಸ್ಟ್ರೂಮೆಂಟಲ್ ಕ್ಲಸ್ಟರ್ ಅನ್ನು ಪಡೆದಿರಲಿವೆ.

ಎಂಜಿನ್ ಸಾಮರ್ಥ್ಯ
ಮಹಿಂದ್ರಾ ಮರಾಜೊ ಕಾರುಗಳು 2.0 ಲೀಟರ್ ಎಂಜಿನ್ ಸಹಾಯದಿಂದ 140ಬಿಹೆಚ್‍ಪಿ ಮತ್ತು 320ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದ್ದು, 6 ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍ನೊಂದಿಗೆ ಜೋಡಿಸಲಾಗಿದೆ ಎನ್ನಲಾಗಿದೆ.

ಇದರೊಂದಿಗೆ ಎಂಪಿವಿ ಬೇಸ್ ಮಾಡೆಲ್ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಇನ್ನು ಟಾಪ್ ಎಂಡ್ ವೇರಿಯಂಟ್ ಕಾರುಗಳಲ್ಲಿ ಎರಡು ಬದಿಗಳಲ್ಲೂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಜೊತೆಗೆ ಎಬಿಎಸ್‍ನೊಂದಿಗೆ ಇಬಿಡಿ ಮತ್ತು ಡ್ಯುಯಲ್ ಏರ್‍ಬ್ಯಾಗ್‍ಗಳನ್ನು ಕಾರಿನ ಎಲ್ಲಾ ವೇರಿಯಂಟ್‍ನಲ್ಲಿ ಅಳವಡಿಸಲಾಗಿದ್ದು, ಇನ್ನು ಟಾಪ್ ಎಂಡ್ ವೇರಿಯಂಟ್ ಕಾರುಗಳು ಕರ್ಟೈನ್ ಏರ್‍ಬ್ಯಾಗ್‍ಗಳನ್ನು ಕೂಡಾ ಪಡೆದುಕೊಂಡಿರಲಿವೆ. ಇವುಗಳಲ್ಲದೆ ಪಾರ್ಕಿಂಗ್ ಅಸ್ಸಿಸ್ಟ್, ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.

ಒಟ್ಟಿನಲ್ಲಿ ಮಹೀಂದ್ರಾ ಹೊಸ ಎಂಪಿವಿ ಕಾರು ಬಿಡಗಡೆಗೊಂಡಲ್ಲಿ ಮಾರುತಿ ಎರ್ಟಿಗಾ ಮತ್ತು ಟೊಯೊಟಾ ಇನೊವಾ ಕ್ರಿಸ್ಟಾ ಕಾರುಗಳಿಗೆ ಪೈಪೋಟಿಯನ್ನು ನೀಡಲಿದ್ದು, ಇನ್ನು ಕಾರಿನ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದ್ರೂ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.9 ರಿಂದ 14 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications








