ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರು
ಜನಪ್ರಿಯ ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯು ಈಗಾಗಲೇ ವಿವಿಧ ಮಾದರಿಯ ವಾಹನಗಳ ಮಾರಾಟದ ಮೂಲಕ ಹೊಸ ದಾಖಲೆಗೆ ಕಾರಣವಾಗಿದ್ದು, ಇದೀಗ ಭವಿಷ್ಯದ ವಾಹನ ಮಾದರಿಗಳಾದ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ಕಾರುಗಳ ಉತ್ಪಾದನೆ ಮೇಲೂ ವಿಶೇಷ ಆಸಕ್ತಿ ತೊರುತ್ತಿದೆ.

ಮಾರುತಿ ಸುಜುಕಿ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು 2020ರ ವೇಳೆಗೆ ಬಿಡುಗಡೆಗೊಳಿಸುವುದರ ಬಗ್ಗೆ ಈಗಾಗಲೇ ಸುಳಿವು ನೀಡಿದೆ. ಹೀಗಾಗಿ ಈ ಹಿಂದೆಯೆ ವ್ಯಾಗನ್ ಆರ್ ಕಾರಿನ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿರುವ ಮಾರುತಿ ಸುಜುಕಿ ಸಂಸ್ಥೆಯು ಹರಿಯಾಣದ ಬಳಿ ಹೊಸ ಕಾರಿನ ಕಾರ್ಯಕ್ಷಮತೆ ಕುರಿತಂತೆ ಹಲವು ಸುತ್ತಿನ ಪರೀಕ್ಷೆ ಕೈಗೊಂಡಿದ್ದು, ಇದೀಗ ಮತ್ತೊಮ್ಮೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡು ಎಲ್ಲರ ಗಮನಸೆಳೆಯುತ್ತಿದೆ.

ಕೆಲವು ಸುದ್ದಿ ಮೂಲಗಳ ಪ್ರಕಾರ, ಮಾರುತಿ ಸುಜುಕಿ ಸಂಸ್ಥೆಯು ಇ-ವರ್ಷನ್ ವ್ಯಾಗನ್ ಆರ್ ಕಾರನ್ನು ಟೊಯೊಟಾ ಜೊತೆ ಕೈ ಜೋಡಿಸಿ ಉತ್ಪಾದನೆ ಮಾಡುತ್ತಿದೆ ಎನ್ನಲಾಗಿದ್ದು, ಈ ಕಾರಿನ ಬೆಲೆಯು ಇತರೆ ಎಲೆಕ್ಟ್ರಿಕ್ ಕಾರುಗಳಿಂತಲೂ ಸ್ಪರ್ಧಾತ್ಮಕವಾಗಿ ಇರಲಿದೆ ಎನ್ನಲಾಗಿದೆ.

ಲೀಥಿಯಂ ಅಯಾನ್ ಬ್ಯಾಟರಿಗಳ ಬೆಲೆ ಅಧಿಕವಿರುವ ಕಾರಣ ರೆಗ್ಯೂಲರ್ ಮಾಡೆಲ್ ವ್ಯಾಗನ್ ಆರ್ ಮಾದರಿಗಿಂತಲೂ ಬೆಲೆ ಎರಡರಷ್ಟು ಜಾಸ್ತಿ ಇರಲಿದ್ದು, ಪ್ರತಿ ಚಾರ್ಜಿಂಗ್‌ಗೆ ಕನಿಷ್ಠ 200ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲ ಸಾಮರ್ಥ್ಯದ ಬ್ಯಾಟರಿ ಜೋಡಣೆ ಹೊಂದಿರಲಿವೆಯೆಂತೆ.

ವ್ಯಾಗನ್ ಆರ್ ಇವಿ ಕಾರುಗಳು 2020ರ ಏಪ್ರಿಲ್‌ನಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿರುವ ಮಾರುತಿ ಸುಜುಕಿ ಸಂಸ್ಥೆಯು, ಹೊಸ ಎಲೆಕ್ಟ್ರಿಕ್ ಕಾರನ್ನು ದೆಹಲಿ ಬಳಿ ಇರುವ ಗುರುಗ್ರಾಮ್ ಕಾರು ಉತ್ಪಾದನಾ ಘಟಕದಲ್ಲೇ ತಯಾರಿಸುತ್ತಿದೆ.

ಜೊತೆಗೆ ಎಲೆಕ್ಟ್ರಿಕ್ ಮಾದರಿಯ ವ್ಯಾಗನ್ ಆರ್ ಕಾರು ಮಾರುತಿ ಸುಜುಕಿ ಮತ್ತು ಟೊಯೊಟಾ ಪಾಲುದಾರಿಕೆಯಲ್ಲಿ ತಯಾರಾಗಲಿರುವ ಮೊದಲ ಎಲೆಕ್ಟ್ರಿಕ್ ಕಾರು ಇದಾಗಿದ್ದು, ಟೊಯೊಟಾ ಈಗಾಗಲೇ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರಿಗಾಗಿ ಅಲ್ಟ್ರಾ ಹೈ ಎಫಿಶಿಯೆನ್ಸಿ ಪವರ್‌ಟ್ರೈನ್ ಬ್ಯಾಟರಿಯನ್ನು ತಯಾರಿಸುವುದಾಗಿ ಹೇಳಿಕೊಂಡಿದೆ.

ಇದಲ್ಲದೇ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಮುಂದಿನ ತಲೆಮಾರಿನ ವ್ಯಾಗನ್‍ಆರ್ ಕಾರನ್ನು ಇದೇ ವರ್ಷಾಂತ್ಯಕ್ಕೆ ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಈ ಹಿನ್ನೆಲೆ ಹೊಸ ಕಾರಿನ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ಆರ್ ಕಾರನ್ನು ಸಹ ನಿರ್ಮಾಣ ಮಾಡುವ ಯೋಜನೆಯಿದೆ.

ಸದ್ಯ ಮಾರುತಿ ಸುಜುಕಿ ಸಂಸ್ಥೆಯು ದೇಶಿಯವಾಗಿ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆ ಮಾಡುವ ಸಂಬಂಧ ಬರೋಬ್ಬರಿ ರೂ.700 ಕೋಟಿ ವೆಚ್ಚದಲ್ಲಿ ಗುಜರಾತ್‌ನಲ್ಲಿ ಬ್ಯಾಟರಿ ಉತ್ಪಾದನಾ ಘಟಕ ತೆರೆಯಲು ಈಗಾಗಲೇ ಕೇಂದ್ರದಿಂದ ಅನುಮತಿ ಪಡೆದಿದ್ದು, ಎಲೆಕ್ಟ್ರಿಕ್ ಕಾರುಗಳ ಬೆಲೆ ತಗ್ಗಿಸಲು ಇದು ಮಹತ್ವದ ಯೋಜನೆ ಎನ್ನಬಹುದು.

ಕಾರಣ, ಬೆಲೆಯಲ್ಲಿ ದುಬಾರಿ ಎನ್ನಿಸುವ ಲೀಥಿಯಂ ಅಲಾಯ್ ಬ್ಯಾಟರಿಗಳನ್ನು ಸದ್ಯಕ್ಕೆ ವಿದೇಶಿ ಮಾರುಕಟ್ಟೆಗಳಾದ ಚೀನಾ, ತೈವಾನ್ ಮತ್ತು ಥೈಲ್ಯಾಂಡ್‌ನಿಂದಲೇ ಶೇ.100ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದ್ದು, ದೇಶದಲ್ಲಿ ಯಾವುದೇ ಕಾರು ಉತ್ಪಾದನಾ ಸಂಸ್ಥೆಯು ಸ್ವಂತ ಬ್ಯಾಟರಿ ಉತ್ಪಾದನಾ ಸೌಲಭ್ಯವನ್ನು ಹೊಂದಿಲ್ಲ.

ಇದರಿಂದಾಗಿ ಎಲೆಕ್ಟ್ರಿಕ್ ಕಾರುಗಳು ಸಾಮಾನ್ಯ ಕಾರುಗಳಿಂತಲೂ ಎರಡು ಮೂರು ಪಟ್ಟು ಹೆಚ್ಚು ದುಬಾರಿ ದರಗಳಲ್ಲಿ ಮಾರಾಟವಾಗುತ್ತಿದ್ದು, ಇದೇ ಕಾರಣದಿಂದಲೇ ಬಹುತೇಕ ಕಾರು ಖರೀದಿದಾರರು ಎಲೆಕ್ಟ್ರಿಕ್ ಕಾರುಗಳ ಖರೀದಿಸುವ ಆಸಕ್ತಿ ಇದ್ದರೂ ದುಬಾರಿ ಬೆಲೆಯಿಂದಾಗಿ ಹಿಂದೆ ಸರಿಯುತ್ತಿದ್ದಾರೆ.

ಇದನ್ನು ಗಂಭೀರವಾಗಿ ಪರಿಣಿಸಿರುವ ಸುಜುಕಿ ಸಂಸ್ಥೆಯು ಭಾರತದಲ್ಲಿ ಸ್ಥಳೀಯವಾಗಿ ಲೀಥಿಯಂ ಬ್ಯಾಟರಿ ಉತ್ಪಾದನೆ ಮಾಡಿ ತನ್ನದೇ ಕಾರುಗಳಿಗೆ ಅಷ್ಟೇ ಅಲ್ಲದೇ ಇತರೆ ಸಂಸ್ಥೆಗಳಿಗೂ ಬ್ಯಾಟರಿ ಪೂರೈಕೆ ಮಾಡುವ ಯೋಜನೆ ರೂಪಿಸಿದ್ದು, 2020ರ ವೇಳೆಗೆ ದೇಶದಲ್ಲಿ ಮಾರಾಟವಾಗುವ ಕಾರುಗಳ ಪ್ರಮಾಣದಲ್ಲಿ ಹೊಸ ಬದಲಾಣೆ ತರುವುದೇ ಇದರ ಮೂಲಉದ್ದೇಶವಾಗಿದೆ.

ಒಟ್ಟಿನಲ್ಲಿ ಬೃಹತ್ ಯೋಜನೆಯೊಂದಿಗೆ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೆ ಕೈ ಹಾಕಿರುವ ಮಾರುತಿ ಸುಜುಕಿ ಸಂಸ್ಥೆಯು ಸಾಮಾನ್ಯ ಕಾರುಗಳ ಮಾರಾಟದಲ್ಲಿ ಯಶಸ್ಸು ಸಾಧಿಸಿರುವಂತೆ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಅಧಿಪತ್ಯ ಹೊಂದುವ ತವಕದಲ್ಲಿದ್ದು, ಕೈಗೆಟುಕುವ ಬೆಲೆಗಳಲ್ಲಿ ಉತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಬ್ಯಾಟರಿ ಬಳಕೆ ಮಾಡಿದ್ದಲ್ಲಿ ಹೊಸ ಯೋಜನೆ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು 1999ರಲ್ಲಿ ಬಿಡುಗಡೆಗೊಂಡಿದ್ದು, ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಯ ಈ ಕಾರು ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳು ಮಾರಾಟಗೊಂಡಿವೆ. ಈ ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದ್ದು, ಎಲೆಕ್ಟ್ರಿಕ್ ವರ್ಷನ್ ಬರುವುದಕ್ಕೂ ಮುನ್ನ ಸಾಮಾನ್ಯ ಮಾದರಿಯ ನ್ಯೂ ಜನರೇಷನ್ ವ್ಯಾಗನ್ ಆರ್ ಕಾರು ಮುಂದಿನ ವರ್ಷ ಜನವರಿ ಆರಂಭದಲ್ಲಿ ಬಿಡುಗಡೆಯಾಗುತ್ತಿದೆ.
Image Courtesy: Ketan Thakkar


Click it and Unblock the Notifications








