ಬಹುನೀರಿಕ್ಷಿತ ಹೊಚ್ಚ ಹೊಸ ಹ್ಯುಂಡೈ ಸ್ಯಾಂಟ್ರೋ ಅನಾವರಣ
ದೇಶದ ಆಟೋ ಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಸ್ಯಾಂಟ್ರೋ ಕಾರುಗಳು ಬಿಡುಗಡೆಗೊಂಡ 20 ವರ್ಷವಾದ್ರು ಇನ್ನು ಕೂಡಾ ಬೇಡಿಕೆಯಲ್ಲಿ ಮುಂಚೂಣಿಯಲ್ಲಿರುವ ಏಕೈಕ ಕಾರು ಮಾದರಿಯಾಗಿದ್ದು, ಇದೀಗ ಮತ್ತೊಮ್ಮೆ ಹೊಸ ವೈಶಿಷ್ಟ್ಯತೆಯ ಜೊತೆಗೆ ಕೆಲವು ಹೊರ ವಿನ್ಯಾಸಗಳ ಬದಲಾವಣೆಯೊಂದಿಗೆ ಮರಳಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

ಹ್ಯುಂಡೈ ಸಂಸ್ಥೆಯು ನೆಕ್ಸ್ಟ್ ಜನರೇಷನ್ ಸ್ಯಾಂಟ್ರೋ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸಿದ್ದು, ಇದೇ ತಿಂಗಳು 28ರಂದು ಹೊಸ ಕಾರನ್ನು ಬಿಡುಗಡೆಗೊಳಿಸಲು ಸಹ ವೇದಿಕೆ ಸಿದ್ದಮಾಡಿಕೊಳ್ಳುತ್ತಿದೆ. ಹೀಗಾಗಿ ಹೊಸ ಕಾರಿನ ಬಗೆಗೆ ಇದ್ದ ಕುತೂಹಲಕ್ಕೆ ಇಂದು ತೆರೆ ಎಳೆದಿದ್ದು, ಕಾರಿನ ಬೆಲೆಗಳ ಹೊರತಾಗಿ ಕಾರಿನಲ್ಲಿರುವ ತಾಂತ್ರಿಕ ಸೌಲಭ್ಯಗಳ ಬಹುತೇಕ ಮಾಹಿತಿಯನ್ನು ಹ್ಯುಂಡೈ ಸಂಸ್ಥೆಯು ಬಿಚ್ಚಿಟ್ಟಿದೆ.

ಹ್ಯುಂಡೈ ಸಂಸ್ಥೆಯು ಕಳೆದ ತಿಂಗಳು ಸ್ಯಾಂಟ್ರೋ ಕಾರುಗಳ ಹೆಸರು ಬದಲಾವಣೆಗೊಳಿಸುವ ಸಂಬಂಧ ಅಭಿಯಾನವೊಂದನ್ನು ಆರಂಭಿಸಿ ಗ್ರಾಹಕರಿಂದಲೇ ಹೊಸ ಕಾರಿಗೆ ನಿಮ್ಮಇಷ್ಟದ ಹೆಸರನ್ನು ಸೂಚಿಸುವಂತೆ ಕೋರಿಕೊಂಡಿತ್ತು. ಅದಕ್ಕಾಗಿಯೇ ವಿಶೇಷ ಬಹುಮಾನದ ಜೊತೆಗೆ ಹೊಸ ಕಾರೊಂದನ್ನು ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿತ್ತು.

ಆದ್ರೆ ಅಭಿಯಾನದಲ್ಲಿ ಭಾಗಿಯಾಗಿದ್ದ ಸುಮಾರು 10 ಲಕ್ಷ ಜನರಲ್ಲಿ 8 ಲಕ್ಷ ಜನ ಸ್ಯಾಂಟ್ರೋ ಕಾರಿನ ಮೂಲ ಹೆಸರನ್ನು ಯಾವುದೇ ಕಾರಣಕ್ಕೂ ಬದಲಿಸಬೇಡಿ ಎಂದು ಮನವಿ ಮಾಡಿದ್ದರು. ಹೀಗಾಗಿ ಗ್ರಾಹಕರ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿರುವ ಹ್ಯುಂಡೈ ಸಂಸ್ಥೆಯು ನೆಕ್ಸ್ಟ್ ಜನರೇಷನ್ ಸ್ಯಾಂಟ್ರೋ ಕಾರಿನ ಮೂಲ ಹೆಸರನ್ನೆ ಮುಂದುವರಿಸುವ ಮೂಲಕ ಕಾರಿನ ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಹ್ಯುಂಡೈ ಸಂಸ್ಥೆಯು ತನ್ನ ಎಂಟ್ರಿ ಲೆವಲ್ ಇಯಾನ್ ಕಾರುಗಳನ್ನು ಸ್ಧಗಿತಗೊಳಿಸಿ ಹೊಸ ಸ್ಯಾಂಟ್ರೋ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡಲು ಮುಂದಾಗಿದ್ದು, ವ್ಯಯಕ್ತಿಕ ಕಾರು ಬಳಕೆದಾರರಿಗೆ ಬೇಕಿರುವ ಎಲ್ಲಾ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಎಂಟ್ರಿ ಲೆವಲ್ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.

ಶಾರ್ಪ್ ಡಿಸೈನ್ ಹೊಂದಿರುವ ಹೊಸ ಸ್ಯಾಂಟ್ರೊ ಕಾರುಗಳು ಈಗಾಗಲೇ ಸ್ಟಾಟ್ ಟೆಸ್ಟಿಂಗ್ ವೇಳೆ ಅತ್ಯುತ್ತಮ ಮಾದರಿಯಲ್ಲಿ ಎಂಜಿನ್ ಕಾರ್ಯಕ್ಷಮತೆ ಪ್ರದರ್ಶನ ತೋರಿದ್ದು, ಅಧಿಕ ಮೈಲೇಜ್ ಮತ್ತು ಅತ್ಯುತ್ತಮ ಬ್ರೇಕಿಂಗ್ ಸೌಲಭ್ಯಗಳು ಗ್ರಾಹಕರ ನಂಬಿಕೆಗೆ ವಿಶ್ವಾಸರ್ಹವಾಗಿವೆ.

ಹಳೆಯ ಮಾದರಿಯ ಸ್ಯಾಂಟ್ರೋ ಕಾರುಗಳಿಗೂ ಮತ್ತು ಹೊಸ ಸ್ಯಾಂಟ್ರೋ ಕಾರುಗಳಿಗೂ ಸಾಕಷ್ಟು ಭಿನ್ನತೆಯಿದ್ದು, ಹೊಸ ಕಾರಿನ ಹೊರ ಮತ್ತು ಒಳ ಭಾಗದ ಡಿಸೈನ್‌ನಲ್ಲಿ ಸಾಕಷ್ಟು ಬದಲಾವಣೆ ಕಂಡಿರುವ ನೆಕ್ಸ್ಟ್ ಜನರೇಷನ್ ಸ್ಯಾಂಟ್ರೋ ಕಾರುಗಳು ಹೊಸ ಡಿಸೈನ್ ಪ್ರೇರಿತ ಬ್ಲ್ಯಾಕ್ ಗ್ರಿಲ್, ಫಾಗ್ ಲ್ಯಾಂಪ್, ಬ್ಲ್ಯಾಕ್ ಪ್ಲ್ಯಾಸ್ಟಿಕ್ ಕ್ಲ್ಯಾಡಿಂಗ್, ಸ್ಪೋರ್ಟಿ ಬಂಪರ್ ಪಡೆದುಕೊಂಡಿದೆ.

ಹೊಸ ಸ್ಯಾಂಟ್ರೋ ಕಾರು ರೆನಾಲ್ಟ್ ಕ್ವಿಡ್ ಮತ್ತು ಮಾರುತಿ ಸುಜುಕಿ ಸೆಲೆರಿಯೊ ಕಾರುಗಳಿಂತಲೂ ಉತ್ತಮ ವೀಲ್ಹ್ ಬೆಸ್ ಹೊಂದಿದ್ದು, 3610ಎಂಎಂ ಉದ್ದ, 1645ಎಂಎಂ ಅಗಲ, 1560ಎಂಎಂ ಎತ್ತರ ಮತ್ತು 160ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಪಡೆದುಕೊಂಡಿದೆ.

ಜೊತೆಗೆ ಹೊಸ ಸ್ಯಾಂಟ್ರೋ ಕಾರುಗಳು ಏರಾ, ಮ್ಯಾಗ್ಮಾ, ಸ್ಪೋರ್ಟ್ಜ್, ಸ್ಪೋರ್ಟ್ಜ್(o) ಮತ್ತು ಆಸ್ಟ್ರಾ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಪ್ರತಿ ಮಾದರಿಯಲ್ಲೂ ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಹ್ಯುಂಡೈ ಭರವಸೆ ನೀಡಿದೆ.

ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್ ಮತ್ತು ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಸಹ ಆಯ್ಕೆ ರೂಪದಲ್ಲಿ ನೀಡಲಿದ್ದು, ಅಲಾಯ್ ಚಕ್ರಗಳು, ಪಾರ್ಕಿಂಗ್ ಸೆನ್ಸಾರ್, ಎಸಿ ವೆಂಟ್ಸ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ವಿಶೇಷ ವಿನ್ಯಾಸದ ಟಾಲಿ ಬಾಯ್ ಡಿಸೈನ್ ಹೊಂದಿರಲಿವೆ.

ಎಂಜಿನ್ ಸಾಮರ್ಥ್ಯ
ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರುಗಳು 1.1-ಲೀಟರ್(1,100 ಸಿಸಿ) ಫೌರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯವು ಆಯ್ಕೆ ರೂಪದಲ್ಲಿ ದೊರೆಯಲಿವೆ.

ಕಾರಿನ ಬೆಲೆಗಳು(ಅಂದಾಜು)
ಎಂಟ್ರಿ ಲೆವಲ್ ಕಾರುಗಳಲ್ಲೇ ವಿಶೇಷ ಕಾರು ಮಾದರಿಯಾಗಿ ಹೊಸ ಸಂಚಲನ ಸೃಷ್ಠಿಸಲಿರುವ ಸ್ಯಾಂಟ್ರೋ ಕಾರುಗಳು ಆರಂಭಿಕವಾಗಿ ರೂ. 3.50 ಲಕ್ಷದಿಂದ ಟಾಪ್ ಎಂಡ್ ಮಾದರಿಗಳಿಗೆ ರೂ. 4.20 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಈ ಮೂಲಕ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಸಂಸ್ಥೆಗೆ ಪೈಪೋಟಿ ನೀಡಲಿರುವ ಹ್ಯುಂಡೈ ಸಂಸ್ಥೆಯು ಆಲ್ಟೊ 800, ಸೆಲೆರಿಯೊ, ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೊ ಕಾರುಗಳ ಮಾರಾಟಕ್ಕೆ ಟಕ್ಕರ್ ನೀಡಲಿದೆ.


Click it and Unblock the Notifications








