ದೇಶದ ಅಗ್ಗದ ಕಾರು 'ನ್ಯಾನೊ'ಗೆ ಗುಡ್ ಬೈ ಹೇಳಿದ ಟಾಟಾ..!?
ದೇಶದೆಲ್ಲೆಡೆ ಸಂಚಲನ ಮೂಡಿಸಿ ಕೆಳ ಮಧ್ಯಮ ವರ್ಗದ ಜನರ ಕಾರು ಕೊಳ್ಳುವ ಕನಸನ್ನು ನನಸು ಮಾಡಿದ್ದ ಟಾಟಾ ಸಂಸ್ಥೆಯ 'ನ್ಯಾನೊ' ಕಾರು ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಿಂದ ಹಿಂದೆ ಸರಿಯುವ ಸುಳಿವು ಕೊಟ್ಟಿದೆ.
2009ರಲ್ಲಿ ಅಗ್ಗದ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವ ಮೂಲಕ ದೇಶದೆಲ್ಲೆಡೆ ಸಂಚಲನ ಮೂಡಿಸಿ ಕೆಳ ಮಧ್ಯಮ ವರ್ಗದ ಜನರ ಕಾರು ಕೊಳ್ಳುವ ಕನಸನ್ನು ನನಸು ಮಾಡಿದ್ದ ಟಾಟಾ ಸಂಸ್ಥೆಯ 'ನ್ಯಾನೊ' ಕಾರು ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಿಂದ ಹಿಂದೆ ಸರಿಯುವ ಸುಳಿವು ಕೊಟ್ಟಿದೆ.

ನ್ಯಾನೊ ಕಾರಿನ ಮಾರಾಟದಲ್ಲಿ ಸತತ ಕುಸಿತ ಹಾಗೂ ಗ್ರಾಹಕರಿಂದ ಬೇಡಿಕೆ ಕೊರತೆ ಹಿನ್ನೆಲೆ ಟಾಟಾ ಸಂಸ್ಥೆಯು 'ನ್ಯಾನೊ' ಕಾರಿಗೆ ಗುಡ್ ಬೈ ಹೇಳಲು ಸಜ್ಜಾಗಿದ್ದು, ಸದ್ಯದಲ್ಲೇ ನ್ಯಾನೊ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಕಳೆದ ತಿಂಗಳು ಟಾಟಾ ಮೋಟಾರ್ಸ್ ಸಂಸ್ಥೆಯು ಕೇವಲ 1 ನ್ಯಾನೊ ಕಾರನ್ನು ಉತ್ಪಾದನೆ ಮಾಡಿ ಮಾರಾಟ ಮಾಡಿದೆ ಎಂದ್ರೆ ನೀವು ನಂಬಲೇಬೇಕು.

ಕಳೆದ ಕೆಲ ತಿಂಗಳಿನಿಂದ ಅತ್ಯಂತ ಕಡಿಮೆ ಉತ್ಪಾದನೆಯಾಗುವ ಕಾರುಗಳ ಪೈಕಿ ನ್ಯಾನೊ ಕೂಡಾ ಒಂದಾಗಿದ್ದು, ಗುಜರಾತ್ ನ ಸನದ್ ಘಟಕದಲ್ಲಿ ದಿನಕ್ಕೆ ಕೇವಲ ಒಂದೋ ಅಥವಾ ಎರಡು ನ್ಯಾನೊ ಕಾರುಗಳಷ್ಟೆ ನಿರ್ಮಾಣ ಮಾಡಲಾಗುತ್ತಿರುವುದು ಟಾಟಾ ಸಂಸ್ಥೆಗೆ ಹೊರೆಯಾಗಿ ಪರಿಣಮಿಸಿದೆ.

ಅದರಲ್ಲೂ ಕಳೆದ ತಿಂಗಳಲ್ಲಿನಲ್ಲಿ ಕೇವಲ ಒಂದೇ ಒಂದು ನ್ಯಾನೊ ಕಾರು ಉತ್ಪಾದನೆಗೊಂಡು ಮಾರಾಟವಾಗಿದ್ದು, ನ್ಯಾನೊ ಕಾರಿನ ಕುರಿತು ಯಾವೊಬ್ಬ ಗ್ರಾಹಕನು ಕೂಡಾ ವಿಚಾರಣೆ ಮಾಡುತ್ತಿಲ್ಲ ಎನ್ನುವುದು ವಾಸ್ತವಾಂಶ.

ಹೀಗಿರುವಾಗ ಟಾಟಾ ಮೋಟಾರ್ಸ್ ಅಧಿಕೃತ ಮಾರಾಟ ಮಳಗೆಗಳಲ್ಲೂ ಕೂಡಾ ನ್ಯಾನೊ ಕಾರುಗಳ ಪ್ರದರ್ಶನವನ್ನು ನಿಲ್ಲಿಸುತ್ತಿರುವ ಡೀಲರ್ಸ್‌ಗಳು ಇತರ ಕಾರು ಮಾದರಿಗಳಾದ ಟಿಯಾಗೊ, ಎಸ್ ಕ್ರಾಸ್, ನೆಕ್ಸಾನ್ ಮತ್ತಿತರ ಕಾರುಗಳನ್ನಷ್ಟೆ ಪ್ರದರ್ಶನ ಮಾಡುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಈಚೆಗೆ ನ್ಯಾನೊ ಮಾರಾಟದಲ್ಲಿ ಸತತವಾಗಿ ಕುಸಿತ ಕಂಡು ಬಂದಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ದೇಶಾದ್ಯಂತ ಕೇವಲ 180 ಕಾರುಗಳಷ್ಟೆ ಮಾರಾಟವಾಗಿದ್ದೇ ಅತಿ ಹೆಚ್ಚು ಎನ್ನಲಾಗಿದೆ.

ಈ ಬಗ್ಗೆ ಟಾಟಾ ಸನ್ಸ್‌ನ ಪದಚ್ಯುತ ಅಧ್ಯಕ್ಷ ಸೈರಸ್ ಮೆಸ್ತ್ರಿ ಕೂಡಾ ನ್ಯಾನೊ ಉತ್ಪಾದನೆಯನ್ನು ಮುಂದುವರಿಸುತ್ತಿರುವ ಬಗ್ಗೆ ಈ ಹಿಂದೆಯೇ ಅಸಮಾಧಾನಪಡಿಸಿದ್ದಲ್ಲದೇ ನ್ಯಾನೊ ತಯಾರಿಕೆಯೂ ಸಂಸ್ಥೆಗೆ ಹೊರೆಯಾಗಿ ಪರಿಣಮಿಸಿತ್ತು. ಆದರೂ ಭಾವನಾತ್ಮಕ ಕಾರಣಗಳಿಂದ ನ್ಯಾನೊ ಉತ್ಪಾದನೆಯನ್ನು ಮುಂದುವರೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಸದ್ಯದ ಪರಿಸ್ಥಿತಿಯಲ್ಲಿ ನ್ಯಾನೊ ಉತ್ಪಾದನೆಯು ಟಾಟಾ ಸಂಸ್ಥೆಯನ್ನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದು, ಸತತ ಬೇಡಿಕೆ ಕುಸಿತ ಹಿನ್ನೆಲೆ ಇದೀಗ ಕಾರು ಉತ್ಪಾದನೆಯನ್ನು ಸಂಪೂರ್ಣವಾಗಿ ಕೈ ಬಿಡಲಾಗುತ್ತೆ ಎನ್ನಲಾಗಿದೆ.

ಇನ್ನು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 124 ಕಡೆಗಳಲ್ಲಿ ನ್ಯಾನೊ ಕಾರಿನ ಬೆಲೆ ಇಳಿಕೆ ಮಾಡಿ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಲಾಗಿತ್ತಾದರೂ ಕೇವಲ 58 ಕಾರುಗಳನ್ನಷ್ಟೆ ಮಾರಾಟ ಮಾಡಲು ಶಕ್ತವಾಗಿತ್ತು.

ಈ ಮಧ್ಯೆ, ಟಾಟಾ ಮೋಟರ್ಸ್ ಕಂಪೆನಿ ಕೊಯಮತ್ತೂರು ಮೂಲದ ಜಯೇಮ್ ಅಟೊಮೋಟಿವ್ಸ್ ಸಹಭಾಗಿತ್ವದಲ್ಲಿ ವಿದ್ಯುತ್ ಚಾಲಿತ ಕಾರಿನ ಉತ್ಪಾದನೆಯಲ್ಲಿ ತೊಡಗಿಕೊಂಡಿರುವುದು ನ್ಯಾನೊ ಯುಗಾಂತ್ಯಕ್ಕೆ ಮೊದಲ ಹೆಜ್ಜೆ ಅಂದ್ರೆ ತಪ್ಪಾಗುದಿಲ್ಲ.

ಹೀಗಾಗಿ ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶ ಪಡೆಯಲಿದ್ದು, ಇದು ನ್ಯಾನೊ ಉತ್ಪಾದನೆಗೆ ಇನ್ನಷ್ಟು ಹೊಡೆತ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.


Click it and Unblock the Notifications