ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಟಾಟಾ ನೆಕ್ಸಾನ್ ಎಸ್‌ಯುವಿ
2017ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಟಾಟಾ ಜನಪ್ರಿಯ ನೆಕ್ಸಾನ್ ಎಸ್‌ಯುವಿ ಕಾರುಗಳು ಸದ್ಯ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸುತ್ತಿದ್ದು, ಇದರೊಂದಿಗೆ ಸುರಕ್ಷತೆಯಲ್ಲೂ ಹೊಸ ಭರವಸೆ ಮೂಡಿಸುವ ಮೂಲಕ ಪ್ರತಿಷ್ಠಿತ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ ತನ್ನದಾಗಿಸಿಕೊಂಡಿದೆ.

ಹೊಸ ಕಾರುಗಳ ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಮ್ (ಎನ್‌ಸಿಎಪಿ) ಏಜೆನ್ಸಿಯು ನಡೆಸುವ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಖರೀದಿಗೆ ಯೋಗ್ಯ ಎನಿಸಿರುವ ಟಾಟಾ ನೆಕ್ಸಾನ್ ಎಸ್‌ಯುವಿ ಕಾರುಗಳು 4 ಸ್ಟಾರ್ ರೇಟಿಂಗ್ ತನ್ನದಾಗಿಸಿಕೊಂಡಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಸದ್ಯ ಹೊಸ ಮೈಲಿಗಲ್ಲಿಯತ್ತ ಮುನ್ನುಗ್ಗುತ್ತಿದೆ.

ಏನಿದು ಕ್ರ್ಯಾಶ್ ಟೆಸ್ಟಿಂಗ್?
ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿ ಮತ್ತು ಏಷಿಯಾ ಎನ್‌ಸಿಎಪಿ ಹಾಗೂ ಲ್ಯಾಟಿನ್ ಎನ್‌ಸಿಎಪಿ ಸಂಸ್ಥೆಗಳು ಹೊಸ ಕಾರುಗಳಲ್ಲಿನ ಸುರಕ್ಷಾ ವೈಶಿಷ್ಟ್ಯತೆಗಳಿಗೆ ರೇಟಿಂಗ್ ನೀಡುತ್ತವೆ.

ಈ ವೇಳೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ಇದೀಗ ಟಾಟಾ ನೆಕ್ಸಾನ್ ಕೂಡಾ 4 ಸ್ಟಾರ್ ರೇಟಿಂಗ್ ಪಡೆದಿದ್ದು, ಅಪಘಾತ ಸಂದರ್ಭಗಳಲ್ಲಿ ಯುವಕರಿಗೆ ಶೇ.84ರಷ್ಟು ಸುರಕ್ಷತೆ, ಮಕ್ಕಳಿಗೆ ಶೇ.76ರಷ್ಟು ಸುರಕ್ಷತೆ ಮತ್ತು ವೃದ್ದರಿಗೆ ಶೇ.61 ರಷ್ಟು ಸುರಕ್ಷತೆ ನೀಡುವಲ್ಲಿ ಶಕ್ತವಾಗಿದೆ.

ವಿಶಿಷ್ಟ ವಿನ್ಯಾಸಗಳೊಂದಿಗೆ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ನೆಕ್ಸಾನ್ ಆವೃತ್ತಿಗಳು ಇಂಪ್ಯಾಕ್ಟ್ 2.0 ಡಿಸೈನ್‌ನೊಂದಿಗೆ ಅಭಿವೃದ್ಧಿಗೊಂಡಿದ್ದು, ಮಲ್ಟಿ ಡ್ರೈವ್ ಮೋಡ್, ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್, ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಬೃಹತ್ತಾದ ಸೆಂಟ್ರಲ್ ಕನ್ಸಾಲ್ ಪಡೆದುಕೊಂಡಿರುವುದು ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ನೆಕ್ಸಾನ್ ಕಾರುಗಳಲ್ಲಿ ಚಾಲಕ ಮತ್ತು ಪ್ರಯಾಣಿಕ ಸೀಟುಗಳ ಕಡೆಗೆ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಐಸೋಫೆಕ್ಸ್ ಚೈಲ್ಡ್ ಮೌಟೆಂಡ್ ಸೀಟುಗಳು ಮತ್ತು ಬಲಿಷ್ಠ ಬಾಡಿ ಕಿಟ್ ಹೊಂದಿರುವುದು ಕಾರಿನ ಮೌಲ್ಯವನ್ನ ಹೆಚ್ಚಿಸಿದೆ.

ಇನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ನೆಕ್ಸಾನ್ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿದೆ. ಈ ಮೂಲಕ ಯುವ ಸಮುದಾಯ ನೆಚ್ಚಿನ ಆಯ್ಕೆಯಾಗಿರುವ ನೆಕ್ಸಾನ್ ಕಾರುಗಳು ಇದೀಗಿ ಸುರಕ್ಷತೆಯಲ್ಲೂ ಮುನ್ನಡೆ ಸಾಧಿಸಿವೆ ಎನ್ನಬಹುದು.

ಇದಲ್ಲದೇ ಮೊದಲ ಬಾರಿಗೆ ಮೆಡ್ ಇನ್ ಇಂಡಿಯಾ ಯೋಜನೆಯಡಿ ನಿರ್ಮಾಣವಾದ ಪ್ರಮುಖ ಕಾರುಗಳಲ್ಲಿ ಟಾಟಾ ನೆಕ್ಸಾನ್ ಕೂಡಾ ಒಂದಾಗಿದ್ದು, ದೇಶಿಯ ಮಾರುಕಟ್ಟೆಯ ಕಾರು ಮಾದರಿಯೊಂದು ಉತ್ತಮ ರೇಟಿಂಗ್ ಗಳಿಸಿರುವುದು ಇದೇ ಮೊದಲು ಅಂದ್ರೆ ನೀವು ನಂಬಲೇಬೇಕು.
ಟಾಟಾ ನೆಕ್ಸಾನ್ ಸುರಕ್ಷತೆ ಬಗ್ಗೆ ನಡೆಸಲಾದ ಕ್ರ್ಯಾಶ್ ಟೆಸ್ಟಿಂಗ್ ವಿಡಿಯೋ ಇಲ್ಲಿದೆ ವೀಕ್ಷಿಸಿ..


Click it and Unblock the Notifications








