ಭಾರತದಲ್ಲಿ ಅತ್ಯುತ್ತಮ ರೀ ಸೇಲ್ ಮೌಲ್ಯ ಹೊಂದಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?
ಕಾರು ಖರೀದಿಸುವ ಗ್ರಾಹಕರಿಗಾಗಿ ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ಅತ್ಯುತ್ತಮ ರೀ ಸೇಲ್ ಮೌಲ್ಯದ ಕಾರುಗಳ ಮಾಹಿತಿಯನ್ನು ನೀಡುತ್ತಿದೆ.
ನಾವು ಕಾರು ಖರೀದಿ ಮಾಡುವಾಗ ಹತ್ತಾರು ಬಾರಿ ವಿಚಾರಿಸಿದ ನಂತರವೇ ಖರೀದಿ ಪ್ರಕ್ರಿಯೆ ಮುಂದಾಗುವುದು ಒಳಿತು. ಇಲ್ಲವಾದ್ರೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಖರೀದಿಸಿದ ಕಾರುಗಳು ನಿಮ್ಮನ್ನು ಆರ್ಥಿಕ ಪರಿಸ್ಥಿತಿ ದಕ್ಕೆ ಉಂಟು ಮಾಡಬಹುದು. ಹೀಗಾಗಿಯೇ ಕಾರು ಖರೀದಿಸುವ ಗ್ರಾಹಕರಿಗಾಗಿ ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ಅತ್ಯುತ್ತಮ ರೀ ಸೇಲ್ ಮೌಲ್ಯದ ಕಾರುಗಳ ಮಾಹಿತಿಯನ್ನು ನೀಡುತ್ತಿದೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಬಗೆಯ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆದ್ರೆ ಅವುಗಳೆಲ್ಲಾ ಬೆಲೆ, ಎಂಜಿನ್ ವೈಶಿಷ್ಟ್ಯತೆಗಳಲ್ಲಿ ಭಿನ್ನವಾಗಿದ್ದರು ಕೆಲವು ಕಾರು ಮಾತ್ರ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅಂತಹ ಟಾಪ್ 10 ಕಾರುಗಳ ಮಾಹಿತಿ ಇಲ್ಲಿದೆ.

ಟೊಯೊಟಾ ಫಾರ್ಚೂನರ್
ನಿಮಗೆ ಗೊತ್ತಿರುವ ಹಾಗೆ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಕಾರುಗಳಲ್ಲಿ ಫಾರ್ಚೂನರ್ ಕೂಡಾ ಒಂದು. ಅತ್ಯುತ್ತಮ ರೀ ಸೇಲ್ ಹೊಂದಿರುವ ಈ ಕಾರುಗಳನ್ನು ಹೊಸದಾಗಿ ಖರೀದಿಸಿದ 3 ವರ್ಷಗಳ ನಂತರವು ಶೇ.85ರಷ್ಟು ಬೆಲೆಯೊಂದಿಗೆ ಮರು ಮಾರಾಟ ಮಾಡಬಹುದಾಗಿದೆ.

ಫೋರ್ಡ್ ಇಕೋಸ್ಪೋರ್ಟ್
ಫೋರ್ಡ್ ಕಾರುಗಳಲ್ಲಿ ಜನಪ್ರಿಯತೆ ಸಾಧಿಸಿರುವ ಫೋರ್ಡ್ ಕಾರುಗಳು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಹೊಂದಿದ್ದು, ಖರೀದಿಸಿದ ಮೂರು ವರ್ಷಗಳ ನಂತರ ಮೂಲಬೆಲೆಗಿಂತ ಶೇ.87 ಬೆಲೆಯನ್ನು ಮರಳಿ ಪಡೆಯಬಹುದಾಗಿದೆ.

ರೆನಾಲ್ಟ್ ಡಸ್ಟರ್
ಎಸ್‌ಯುವಿ ಕಾರುಗಳಲ್ಲಿ ಜನಪ್ರಿಯವಾಗಿರುವ ರೆನಾಲ್ಟ್ ಡಸ್ಟರ್ ಕೂಡಾ ಅತ್ಯುತ್ತಮ ರೀ ಸೇಲ್ ಮೌಲ್ಯವನ್ನು ಹೊಂದಿದ್ದು, ಸ್ಪೋರ್ಟಿ ಲುಕ್‌ನೊಂದಿಗೆ ಗ್ರಾಹಕರನ್ನು ಸೆಳೆಯುವ ಈ ಕಾರುಗಳು ಖರೀದಿಸಿ 3 ವರ್ಷಗಳ ನಂತರ ಶೇ. 76ರಷ್ಟು ರೀ ಸೇಲ್ ಮೌಲ್ಯ ಹೊಂದಿವೆ.

ಮಹೀಂದ್ರಾ ಸ್ಕಾರ್ಪಿಯೋ
ದೇಶಿಯ ಗ್ರಾಹಕರಲ್ಲಿ ಮನೆಮಾತಾಗಿರುವ ಸ್ಕಾರ್ಪಿಯೋ ಕಾರುಗಳು ರೀ ಸೇಲ್ ಮೌಲ್ಯ ಹೆಚ್ಚಿಸುವಲ್ಲಿ ಸಫಲವಾಗಿವೆ. ಒಂದು ವೇಳೆ ಸ್ಕಾರ್ಪಿಯೋ ಖರೀದಿಸಿ 3 ವರ್ಷದ ನಂತರ ಮಾರಾಟ ಮಾಡಿದರು ಶೇ.72ರಷ್ಟು ಮೌಲ್ಯವನ್ನು ಕಾಯ್ದುಕೊಂಡಿರುತ್ತದೆ.

ಟೊಯೊಟಾ ಇಟಿಯಾಸ್
ಪ್ರಯಾಣಿಕ ಕಾರು ವಿಭಾಗದಲ್ಲಿ ಅತಿ ಮಾರಾಟಗೊಳ್ಳುವ ಇಟಿಯಾಸ್ ಕಾರುಗಳು ಉತ್ತಮ ರೀ ಸೇಲ್ ಮೌಲ್ಯವನ್ನು ಹೊಂದಿವೆ. ಖರೀದಿ ಮಾಡಿದ ಮೂರು ವರ್ಷಗಳ ನಂತರವೂ ಕಾರಿನ ಸ್ಥಿತಿಗತಿ ಆಧಾರವಾಗಿ 4 ರಿಂದ 5 ಮರುಮೌಲ್ಯವನ್ನು ಗಿಟ್ಟಿಸಿಕೊಳ್ಳುತ್ತವೆ.

ಹೋಂಡಾ ಸಿಟಿ
ಸೆಡಾನ್ ಕಾರುಗಳಲ್ಲಿ ಸದ್ಯ ಅತಿಹೆಚ್ಚು ಬೇಡಿಕೆ ಹೊಂದಿರುವ ಹೋಂಡಾ ಸಿಟಿ ಕಾರುಗಳು ಶೇ.75 ರೀ ಸೇಲ್ ಮೌಲ್ಯವನ್ನು ಹೊಂದಿದ್ದು, ಗ್ರಾಹಕರ ಬಯಸುವ ಉತ್ತಮ ಸೌಲಭ್ಯಗಳನ್ನು ಈ ಕಾರುಗಳಲ್ಲಿ ಒದಗಿಸಲಾಗಿದೆ ಎನ್ನಬಹುದು.

ಹ್ಯುಂಡೈ ಗ್ರ್ಯಾಂಡ್ ಐ10
ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಗ್ರ್ಯಾಂಡ್ ಐ10 ಕಾರುಗಳು ಉತ್ತಮ ಇಂಧನ ಕಾರ್ಯಕ್ಷಮತೆಯಿಂದಾಗಿ ಗ್ರಾಹಕರನ್ನು ಸೆಳೆಯುತ್ತಿದ್ದು, ಖರೀದಿಸಿದ 3 ವರ್ಷಗಳ ನಂತರವೂ ಕನಿಷ್ಠ 2.50 ಲಕ್ಷ ಬೆಲೆ ಹೊಂದಿರುತ್ತವೆ.

ಮಾರುತಿ ಸುಜುಕಿ ಡಿಜೈರ್
ಇಟಿಯಾಸ್ ನಂತರ ಪ್ರಯಾಣಿಕ ಕಾರು ವಿಭಾಗದಲ್ಲಿ ಹೆಚ್ಚು ಬಳಕೆಯಾಗುವ ಮಾರುತಿ ಡಿಜೈರ್ ಕಾರುಗಳು ಅತ್ಯತ್ತಮ ರೀ ಸೇಲ್ ಮೌಲ್ಯ ಹೊಂದಿದ್ದು, ಖರೀದಿ ಮಾಡಿದ 3 ವರ್ಷಗಳ ನಂತರವು ಶೇ.80ರಷ್ಟು ಮೂಲಬೆಲೆ ಹೊಂದಿರುತ್ತವೆ.

ಮಾರುತಿ ಸುಜುಕಿ ಸ್ವಿಫ್ಟ್
ಸದ್ಯ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ತನ್ನದೇ ಪ್ರಾಬಲ್ಯ ಹೊಂದಿರುವ ಸ್ವಿಫ್ಟ್ ಕಾರುಗಳು ರೀ ಸೇಲ್ ಮೌಲ್ಯದಲ್ಲಿ ಮುಂಚೂಣಿಯಲ್ಲಿದ್ದು, ಖರೀದಿಸಿದ ಮೂರು ವರ್ಷಗಳ ನಂತರ ಶೇ. 85ರಷ್ಟು ರೀ ಸೇಲ್ ಮೌಲ್ಯ ಹೊಂದಿವೆ ಅಂದ್ರೆ ನೀವು ನಂಬಲೇಬೇಕು.

ಮಾರುತಿ ಸುಜುಕಿ ವ್ಯಾಗನ್ ಆರ್
ಕಳೆದ 20 ವರ್ಷಗಳಿಂದ ವಿವಿಧ ನಮೂನೆಯ ವ್ಯಾಗನ್ ಆರ್ ಕಾರುಗಳು ಭಾರತದಲ್ಲಿ ಬಿಡುಗಡೆಯಾಗಿದ್ದು, ಮಾರುತಿ ಸುಜುಕಿ ಜನಪ್ರಿಯತೆ ಪ್ರಮುಖ ಪಾತ್ರ ವಹಿಸಿವೆ. ಹೀಗಾಗಿಯೇ ವಿಶೇಷ ಗುಣಲಕ್ಷಣ ಹೊಂದಿರುವ ವ್ಯಾಗನ್ ಆರ್ ಕಾರುಗಳು ಶೇ.78 ರಷ್ಟು ರೀ ಸೇಲ್ ಮೌಲ್ಯ ಹೊಂದಿವೆ.

ಟೊಯೊಟಾ ಇನೋವಾ
ರೀ ಸೇಲ್ ಮೌಲ್ಯದಲ್ಲಿ ಪ್ರಥಮ ಸ್ಥಾನದಲ್ಲಿ ಇನೋವಾ ಕಾರುಗಳು ಸದ್ಯ ದೇಶದಲ್ಲೇ ಅತ್ಯುತ್ತಮ ಮೌಲ್ಯ ಹೊಂದಿದ್ದು, ಖರೀದಿ ಮಾಡಿದ ಮೂರು ವರ್ಷಗಳ ನಂತರವೂ ಶೇ.90ರಷ್ಟು ರೀ ಸೇಲ್ ಮೌಲ್ಯವನ್ನು ಗಿಟ್ಟಿಸಿಕೊಳ್ಳುವ ಗುಣಹೊಂದಿವೆ.
ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ತಮ್ಮಿಷ್ಟದ ವಾಹನಗಳನ್ನು ಖರೀದಿ ಮಾಡಬೇಕೆಂಬ ಹೆಬ್ಬಯಿಕೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತೆ. ಆದ್ರೆ ನಾವು ಖರೀದಿ ಮಾಡುವ ವಾಹನಗಳು ಎಷ್ಟರ ಮಟ್ಟಿಗೆ ರೀ ಸೇಲ್ ಮೌಲ್ಯವನ್ನು ಹೊಂದಿವೆ ಎಂಬುವುದರ ಮೇಲೆ ಅದರ ಜನಪ್ರಿಯತೆ ಹೆಚ್ಚಿರುತ್ತದೆ. ಒಂದು ವೇಳೆ ನೀವು ಕೂಡಾ ಕಾರುಗಳನ್ನು ಖರೀದಿ ಮಾಡುವ ಯೋಜನೆಯಲ್ಲಿದ್ದರೇ ಈ ಕೆಳಗಿನ ಕಾರುಗಳ ಖರೀದಿ ಮುನ್ನ ಸ್ವಲ್ಪ ಯೋಚನೆ ಮಾಡಿ.

ಫಿಯೆಟ್ ಪುಂಟೋ
ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಸಾಧಿಸಿದ ಪುಂಟೋ ಕಾರುಗಳು ಕೆಲವೇ ದಿನಗಳಲ್ಲೇ ಮಾರುಕಟ್ಟೆಯಲ್ಲಿ ಗಣನೀಯ ಮಟ್ಟದಲ್ಲಿ ಮಾರಾಟ ಹಿನ್ನಡೆ ಅನುಭವಿಸಿದವು. ಇದಕ್ಕೆ ಕಾರಣ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಲಗ್ಗೆ ಕೊಟ್ಟಿತ್ತಾದರೂ ಮೈಲೇಜ್ ವಿಚಾರಕ್ಕೆ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಯ್ತು.

ಫಿಯೆಟ್ ಲೆನಿಯಾ
ಕಂಪ್ಯಾಕ್ಟ್ ಸೆಡಾನ್ ಆವೃತ್ತಿಗಳಲ್ಲಿ ಈಗಲೂ ಮಾರಾಟಕ್ಕೆ ಲಭ್ಯವಿರುವ ಫಿಯೆಟ್ ಲೆನಿಯಾ ಆವೃತ್ತಿಗಳು ಉತ್ತಮ ರೀತಿಯ ರೀ ಸೇಲ್ ಮೌಲ್ಯವನ್ನು ಹೊಂದುವಲ್ಲಿ ವಿಫಲವಾಗಿವೆ. ಇದಕ್ಕೆ ಕಾರಣ ಗುಣಮಟ್ಟವಿಲ್ಲದ ಸುರಕ್ಷಾ ವಿಧಾನಗಳು ಮತ್ತು ವಿಳಂಬವಾಗುವ ಗ್ರಾಹಕರ ಸೇವೆಗಳು ಕಾರು ಮಾರಾಟಕ್ಕೆ ಹಿನ್ನಡೆಯಾಗಿದೆ.

ಟಾಟಾ ನ್ಯಾನೋ
ಅಗ್ಗದ ಬೆಲೆಯಲ್ಲಿ ಕಾರು ಖರೀದಿ ಮಾಡುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಟಾಟಾ ನ್ಯಾನೋ ರೀ ಸೇಲ್ ವ್ಯಾಲ್ಯೂ ಹೊಂದಿಲ್ಲ ಎಂಬುವುದು ಅಷ್ಟೇ ಸತ್ಯ. ಇದಕ್ಕೆ ಹಲವಾರು ಕಾರಣಗಳಿದ್ದು, ವಿನ್ಯಾಸ, ಸುರಕ್ಷಾ ವಿಚಾರಗಳು ನ್ಯಾನೋ ಮಾರಾಟಕ್ಕೆ ಹಿನ್ನೆಡೆಯಾಗಿದೆ.

ಟಾಟಾ ಬೊಲ್ಟ್
ಬೊಲ್ಟ್ ಕಾರು ಇಂಡಿಕಾ ವಿಸ್ಟಾ ಕಾರಿನ ಬೇರೆ ಆಯಾಮದ ಕಾರು ಎನ್ನಬಹುದು. ವಿಸ್ಟಾ ಕಾರಿಗಿಂತ ಈ ಕಾರಿನ ಒಳಾಂಗಣವು ಉತ್ತಮ ಗುಣಮಟ್ಟದಾಗಿತ್ತು. ಬೋಲ್ಟ್ ಸಹ ಎಬಿಎಸ್ ಮತ್ತು ಏರ್‌ಬ್ಯಾಗ್ ಸೌಲಭ್ಯ ಪಡೆದುಕೊಂಡಿದೆ.

ಆದರೂ ಮಾರುಕಟ್ಟೆಯಲ್ಲಿ ಈ ಕಾರುಗೆ ಹೆಚ್ಚಿನ ಮನ್ನಣೆ ಸಿಗಲಿಲ್ಲ. ವೈಯಕ್ತಿಕವಾಗಿ ಹ್ಯಾಚ್‌ಬ್ಯಾಕ್ ಕೊಳ್ಳುವವರು ಈ ಕಾರನ್ನು ಮರೆತುಬಿಟ್ಟಿದ್ದಾರೆ ಎನ್ನಬಹುದು.

ದಟ್ಸನ್ ಗೋ
ಈ ಹಿಂದೆ ಕಡಿಮೆ ಬೆಲೆಗಳ ಮೂಲಕ ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಮುಂಚೂಣಿ ಸಾಧಿಸಿದ್ದ ದಟ್ಸನ್ ಕಾರುಗಳು ಕೂಡಾ ಇತ್ತೀಚೆಗೆ ಕಾರು ಖರೀದಿ ಮಾಡುವರೇ ಇಲ್ಲದಂತಾಗಿದೆ. ಕಾರಣ, ನೋಡಲು ಅಷ್ಚೇನು ಆಕರ್ಷಕವಲ್ಲದ ದಟ್ಸನ್ ಕಾರುಗಳು ಸುರಕ್ಷತೆ ನೀಡುವಲ್ಲಿ ಕೂಡಾ ವಿಫಲವಾಗಿವೆ.

ನಿಸ್ಸಾನ್ ಟೆರಾನೋ
ಎಸ್‌ಯುವಿ ಮಾದರಿಗಳಲ್ಲಿ ಮುಂಚೂಣಿ ಸಾಧಿಸಬೇಕಿದ್ದ ಟೆರಾನೋ ಕಾರುಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಾರಾಟ ಹಿನ್ನೆಡೆ ಅನುಭವಿಸಿದವು. ಇದಕ್ಕೆ ಕಾರಣ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿದ್ದರು ಕಾರಿನ ವಿನ್ಯಾಸಗಳು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿವೆ ಎನ್ನಬಹುದು.

ಮಹೀಂದ್ರಾ ನೊವಾ ಸ್ಪೋರ್ಟ್
ಕ್ವಾಂಟೊ ಮಾರಾಟಕ್ಕೆ ಗುಡ್ ಬೈ ಹೇಳಿ ಗ್ರಾಹಕರ ಬೇಡಿಕೆಯತ್ತ ಗಮನಹರಿಸಿದ್ದ ಮಹೀಂದ್ರಾ ಸಂಸ್ಥೆಯು ನೊವಾ ಸ್ಪೋರ್ಟ್ ಪರಿಚಯಿಸಿತ್ತು. ಆದ್ರೆ ಮಾರುಕಟ್ಟೆಯಲ್ಲಿನ ಸರ್ವಕಾಲಿಕ ಬದಲಾವಣೆಗಳು ನೋವಾ ಸ್ಪೋರ್ಟ್ ಮಾರಾಟಕ್ಕೆ ತೀವ್ರ ಹೊಡೆತ ನೀಡಿದ್ದವು.

ರೆನಾಲ್ಟ್ ಲೊಡ್ಜಿ
7 ಸೀಟರ್ ಎಸ್‌ಯುವಿಗಳಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಬೇಕಾಗಿದ್ದ ರೆನಾಲ್ಟ್ ಲೊಡ್ಜಿ ಒಂದೇ ಒಂದು ಕಾರಣಕ್ಕೆ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದು ಮಾತ್ರ ದುರಂತ.

ರೆನಾಲ್ಟ್ ಲೊಡ್ಜಿ ಕಾರು ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಮತ್ತು ಪ್ರಯಾಣಿಕರಿಗೆ ಅನೂಕರವಾದ ಸೌಲಭ್ಯಗಳಿದ್ದರು ಕಾರಿನ ಔಟ್ ಲುಕ್‌ನಲ್ಲಿ ಮುಗ್ಗರಿಸಿತ್ತು. ಇದೇ ಕಾರಣಕ್ಕೆ ಉತ್ತಮ ಕಾರು ಮಾದರಿಯಾದರೂ ಗ್ರಾಹಕರಿಂದ ತಿರಸ್ಕಾರವಾಗಿದೆ.

ಮಹೀಂದ್ರಾ ವೆರಿಟೋ ವೈಬ್
ಮಹೀಂದ್ರಾ ನಿರ್ಮಾಣದ ವೆರಿಟೋ ವೈಬ್ ಹಲವು ಕಾರಣಗಳಿಗೆ ರೀ ಸೇಲ್ ಮೌಲ್ಯವನ್ನು ಕಳೆದುಕೊಂಡಿದೆ. ನೋಡಲು ಆಕರ್ಷಕವಾಗಿದ್ದರು ಇಂಧನ ಕಾರ್ಯಕ್ಷಮತೆ ಮತ್ತು ಗ್ರಾಹಕರ ಸ್ನೇಹಿ ಸೌಲಭ್ಯಗಳಿಲ್ಲದಿರುವುದು ಕಾರಿನ ಮೌಲ್ಯಕ್ಕೆ ಹೊಡೆತ ನೀಡಿದೆ.

ಹೋಂಡಾ ಬ್ರಿಯೋ
ಬ್ರಿಯೋ ಕಾರನ್ನು ಪರಿಚಯಿಸುವ ಮೂಲಕ ವಿನೂತನ ಮಾದರಿಯನ್ನು ಮಾರುಕಟ್ಟೆಗೆ ತಂದಿದ್ದ ಹೋಂಡಾ ಸಂಸ್ಥೆಯು ವಿಶೇಷವಾಗಿ ಭಾರತೀಯ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಈ ಕಾರನ್ನು ಸಿದ್ದಪಡಿಸಿತ್ತು. ಆದ್ರೆ ಸುರಕ್ಷಾ ವಿಧಾನಗಳು ಮತ್ತು ಚಾಲನಾ ವೈಖರಿಯು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿವೆ.

ಟಾಟಾ ಸಫಾರಿ ಸ್ಟಾರ್ಮ್
ಬೃಹತ್ ಗಾತ್ರದ ಎಸ್‌ಯುವಿ ಉತ್ತಮ ಬೇಡಿಕೆ ಹೊಂದಿದ್ದ ಟಾಟಾ ಸಫಾರಿ ಸ್ಟಾರ್ಮ್ ಬಿಡುಗಡೆ ಕೆಲವೇ ವರ್ಷಗಳಲ್ಲಿ ಭಾರೀ ಪ್ರಮಾಣದ ನಷ್ಟ ಅನುಭವಿಸಿದೆ. ಇದಕ್ಕೆ ಕಾರಣ ಸಣ್ಣ ಗಾತ್ರದ ಎಸ್‌ಯುವಿಗಳು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸಫಾರಿ ಮಾರಾಟದ ಮೇಲೆ ಹೊಡೆತ ಕೊಟ್ಟಿವೆ ಎನ್ನಬಹುದು.


Click it and Unblock the Notifications








