ಬದಲಾದ ಆಮದು ನೀತಿ- ಟೊಯೊಟಾ ಆಲ್ಫಾರ್ಡ್ ಬಿಡುಗಡೆಯಾಗುವುದು ಪಕ್ಕಾ..!!
ಜಪಾನ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಟೊಯೊಟಾ ಮೋಟಾರ್ಸ್ ಸಂಸ್ಥೆಯು ತನ್ನ ಐಷಾರಾಮಿ ಕಾರು ಉತ್ಪನ್ನವಾದ ಆಲ್ಫಾರ್ಡ್ ಎಂಪಿವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ಇದಕ್ಕೆ ಪ್ರಮುಖ ಕಾರಣ ದೇಶದಲ್ಲಿ ಬದಲಾಗಿರುವ ಆಮದು ನೀತಿಯಿಂದಾಗಿ ಐಷಾರಾಮಿ ಕಾರು ಮಾರಾಟದಲ್ಲಿ ಭಾರೀ ಬದಲಾವಣೆಯಾಗಲಿದೆ.

ಕೇಂದ್ರ ಸರ್ಕಾರವು ವಾಹನ ಉತ್ಪಾದನಾ ಸಂಸ್ಥೆಗಳ ಮೇಲೆ ಇಷ್ಟು ದಿನ ವಿಧಿಸಲಾಗಿದ್ದ ಆಮದು ಕಾರುಗಳ ಮಾರಾಟದ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಸಿದ್ದು, ಯಾವುದೇ ವಾಹನ ಉತ್ಪಾದನಾ ಸಂಸ್ಥೆಯು ಹೊರ ದೇಶದಲ್ಲಿ ಉತ್ಪಾದನೆಯಾಗುವ ತಮ್ಮದೆ ಸಂಸ್ಥೆಯ 2500 ವಾಹನಗಳನ್ನು ಯಾವುದೇ ಷರತ್ತುಗಳಿಲ್ಲದೇ ಆಮದು ಮಾಡಿಕೊಳ್ಳಬಹುದು ಎಂಬ ನಿಯಮ ರೂಪಿಸಿದೆ.

ಹೀಗಾಗಿ ಇಷ್ಟು ದಿನಗಳ ಕಾಲ ಕಾರು ಆಮದು ಮಾಡಿಕೊಳ್ಳಲು ಭಾರೀ ಪ್ರಮಾಣದ ತೆರಿಗೆ ಪಾವತಿಸಬೇಕಿದ್ದರಿಂದ ಸಾಮಾನ್ಯವಾಗಿ ಕಾರುಗಳ ಬೆಲೆಯು ದುಬಾರಿಯಾಗಿರುತ್ತಿತ್ತು. ಆದ್ರೆ ಹೊಸ ನಿಯಮದಿಂದಾಗಿ ಐಷಾರಾಮಿ ಕಾರುಗಳ ಮಾರಾಟವು ಮತ್ತಷ್ಟು ಹೆಚ್ಚಳವಾಗಲಿದೆ ಎನ್ನಬಹುದು.

ಜೊತೆಗೆ ಆಟೋ ಉತ್ಪಾದನಾ ಸಂಸ್ಥೆಗಳು ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿರುವ ತಮ್ಮ ಕಾರು ಮತ್ತು ಬೈಕ್ ಉತ್ಪನ್ನಗಳನ್ನು ಭಾರತದಲ್ಲಿ ಟೆಸ್ಟಿಂಗ್ ಮಾಡಲು ಸಹ ಭಾರೀ ಪ್ರಮಾಣದ ತೆರಿಗೆ ಪಾವತಿಸಬೇಕಿದ್ದ ಪರಿಸ್ಥಿತಿಯು ಸಹ ಹೊಸ ನಿಯಮದಿಂದ ನಿವಾರಣೆಯಾಗಲಿದೆ.

ಇದೇ ಕಾರಣಕ್ಕೆ ಟೊಯೊಟಾ ಸಂಸ್ಥೆಯು 2018ರ ಆಟೊ ಎಕ್ಸ್ ಪೋದಲ್ಲಿ ಪ್ರದರ್ಶನ ಮಾಡಿದ್ದ ತನ್ನ ಲಗ್ಷುರಿ ಆಲ್ಫಾರ್ಡ್ ಎಂಪಿವಿ ಮಾದರಿಯನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಲ್ಫಾರ್ಡ್ ಮಾರಾಟಕ್ಕೆ ಅಧಿಕೃತ ಚಾಲನೆ ಸಿಗಲಿದೆ.

ಸದ್ಯ ಭಾರತದಲ್ಲಿ ಆಲ್ಫಾರ್ಡ್ ಕಾರುಗಳನ್ನು ಹಳೆಯ ಆಮದು ನೀತಿ ಅಡಿ ಸಾವಿರಾರು ಉದ್ಯಮಿಗಳು ಈ ವಿನೂತನ ಕಾರುನ್ನು ಖರೀದಿ ಮಾಡಿದ್ದು, ಈ ಹಿಂದೆ ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿಯವರು ಕೂಡಾ ಕಾರಿನ ವಿನ್ಯಾಸಕ್ಕೆ ಮನಸೋತು ಖರೀದಿ ಮಾಡಿದ್ದರು.

ಟೊಯೊಟಾ ಸಂಸ್ಥೆಯು ನಿರ್ಮಾಣದ ಕಾರುಗಳಲ್ಲೇ ವಿಶೇಷ ಎನ್ನಿಸುವ ಆಲ್ಫಾರ್ಡ್ ಕಾರುಗಳು ನೋಡಲು ಎಷ್ಟು ಆಕರ್ಷಕವಾಗಿದೆಯೋ ಅಷ್ಟೇ ದುಬಾರಿ ಕಾರು ಮಾದರಿಯಾಗಿದ್ದು, ಫಾರ್ಚೂನರ್ ಕಾರುಗಳಿಂತಲೂ ಹೆಚ್ಚು ಎಂಜಿನ್ ಬಲಿಷ್ಠತೆಯನ್ನು ಹೊಂದಿರಲಿವೆ.

ಕಾರಿನ ಹೊರ ವಿನ್ಯಾಸ
ಕಾರಿನ ಮುಂಭಾಗದಲ್ಲಿ ಅಗಲವಾದ ಕ್ರೋಮ್ ಗ್ರಿಲ್ ಅನ್ನು ಪಡೆದುಕೊಂಡಿರಲಿದ್ದು, ಜೊತೆಗೆ, ಲಾರ್ಜ್ ಸೆಂಟ್ರಲ್ ಏರ್ ಇಂಟೇಕ್, ಪ್ರಾಮಿನಂಟ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್ ಯೂನಿಟ್ಸ್, ಫಾಗ್ ಲ್ಯಾಂಪ್ಸ್ ಮತ್ತು ಎಲ್ಇಡಿ ಡಿಆರ್‍ಎಲ್‍ಗಳನ್ನು ಅಳವಡಿಸಲಾಗಿದೆ.

ಕಾರಿನ ಒಳ ವಿನ್ಯಾಸ
ಆಲ್ಫಾರ್ಡ್ ಐಷಾರಾಮಿ ಎಂಪಿವಿಗಳ ಒಳಭಾಗವು ಲೆದರ್ ಮತ್ತು ಮರದ ಫಲಕಗಳಿಂದ ನಿರ್ಮಾಣಗೊಂಡಿದ್ದು, ಇಂಟಿಗ್ರೇಟೆಡ್ ಮಸಾಜರ್ಸ್, ರೆಕ್ಲೈನಿಂಗ್ ಸೀಟ್ಸ್, ಟಚ್ ಕಂಟ್ರೋಲ್ಸ್, ಅಗಲವಾದ ಇನ್ಫೋಟೈನೆಂಟ್ ಸಿಸ್ಟಂ ಮತ್ತು ಕಾರಿನ ಮಧ್ಯದಲ್ಲಿರುವ ಸೀಟುಗಳು ಹಲವಾರು ಐಷಾರಾಮಿ ಸೌಕರ್ಯಗಳನ್ನು ಪಡೆದುಕೊಂಡಿರುವುದೇ ಈ ಕಾರಿನ ವಿಶೇಷ.

ಎಂಜಿನ್ ವೈಶಿಷ್ಟ್ಯತೆ
ಆಲ್ಫಾರ್ಡ್ ಐಷಾರಾಮಿ ಎಂಪಿವಿ ಕಾರುಗಳು ಪೆಟ್ರೋಲ್ ಮಾದರಿಯಲ್ಲೇ ಎರಡು ವಿಭಾಗಗಳಲ್ಲಿ ಅಭಿವೃದ್ಧಿಯಾಗಿದ್ದು, 2.5- ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯು 179-ಬಿಹೆಚ್‌ಪಿ ಮತ್ತು 235-ಎನ್ಎಂ ಟಾರ್ಕ್ ಉತ್ಪಾದಿಸುವ ಗುಣಹೊಂದಿದೆ.

ಹಾಗೆಯೇ 3.5-ಲೀಟರ್ ವಿ6 ಎಂಜಿನ್ ಹೊಂದಿರುವ ಮತ್ತೊಂದು ಮಾದರಿಯು 297-ಬಿಎಚ್‌ಪಿ ಮತ್ತು 361-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಗುಣಹೊಂದಿದ್ದು, ಕಾರ್ಪೊರೇಟ್ ವಲಯದಲ್ಲಿ ಈ ಕಾರಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುವ ಸಾಧ್ಯತೆಗಳಿವೆ.

ಇನ್ನು ಟೊಯೊಟಾ ಆಲ್ಫಾರ್ಡ್ ಐಷಾರಾಮಿ ಎಂಪಿವಿಗಳು ಹೈಬ್ರಿಡ್ ಆವೃತ್ತಿಯಲ್ಲಿ ಸಹ ಖರೀದಿಗೆ ಲಭ್ಯವಾಗಲಿದ್ದು, 2.5 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆ ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಂಡಿರಲಿದೆ. ಇದಲ್ಲದೇ ಪ್ರತಿ ಕಾರು ಮಾದರಿಯು ಕೂಡಾ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರಲಿವೆ.

ಪ್ರಸ್ತುತ ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಟೊಯೊಟಾ ಆಲ್ಫಾರ್ಡ್ ಐಷಾರಾಮಿ ಎಂಪಿವಿ ಕಾರುಗಳು ರೂ.40 ಲಕ್ಷದಿಂದ ರೂ. 50 ಲಕ್ಷದ ತನಕ ಬೆಲೆ ಹೊಂದಿದ್ದು, ಹೊಸ ಆಮದು ನೀತಿ ಅಡಿ ಭಾರತದಲ್ಲಿ ಬಿಡುಗಡೆಗೊಂಡಿದ್ದೇ ಆದಲ್ಲಿ ರೂ. 45 ಲಕ್ಷ ಬೆಲೆ ಹೊಂದಬಹುದು ಎನ್ನಲಾಗಿದೆ.
ಟೊಯೊಟಾ ಆಲ್ಫಾರ್ಡ್ ಕಾರಿನ ಫೋಟೋ ಗ್ಯಾಲರಿ..


Click it and Unblock the Notifications