ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲಿವೆ ಟೊಯೊಟಾ ಹೊಸ ಎಸ್‌ಯುವಿ ಕಾರುಗಳು
ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಕಾರುಗಳು ಈಗಾಗಲೇ ಭಾರೀ ಬೇಡಿಕೆಯೊಂದಿಗೆ ಮುನ್ನಡೆ ಸಾಧಿಸುತ್ತಿದ್ದು, ಸದ್ಯದಲ್ಲೇ ಮತ್ತೆರಡು ವಿನೂತನ ಎಸ್‌ಯುವಿ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಒಂದು ವೇಳೆ ಟೊಯೊಟಾ ಹೊಸ ಎಸ್‌ಯುವಿ ಕಾರುಗಳು ನಿಗದಿತ ಅವಧಿಯಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಭಾರತದಲ್ಲಿ ಪ್ರಮುಖ ಎಸ್‌ಯುವಿ ಕಾರುಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಸ ಎಸ್‌ಯುವಿ ಕಾರುಗಳನ್ನು ಪರಿಚಯಿಸುವ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಟೊಯೊಟಾ ಕಿರ್ಲೋಸ್ಕರ್ ಇಂಡಿಯಾ ಎಂಡಿ ಅಕಿತೊ ತಾಚಿಬಾನಾ ಅವರು, 'ವಾಹನ ಉದ್ಯಮದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ನಮ್ಮ ಪ್ರಮುಖ ಉತ್ಪನ್ನಗಳು ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ 10 ರಿಂದ 15 ಲಕ್ಷ ಬೆಲೆ ಅಂತರದಲ್ಲಿ ವಿಶೇಷ ಎಸ್‌ಯುವಿ ಕಾರುಗಳನ್ನು ಬಿಡುಗಡೆಗೊಳಿಸುವ ನಮ್ಮ ಮುಂದಿನ ಯೋಜನೆಗಳಾಗಿವೆ ಎಂದಿದ್ದಾರೆ.

ಹೀಗಾಗಿ ವಿದೇಶಿ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಿ ಮಾರಾಟವಾಗುತ್ತಿರುವ ಮಿನಿ ಫಾರ್ಚೂನರ್ ಖ್ಯಾತಿ ರಷ್ ಮತ್ತು ಸಿ-ಎಚ್‌ಆರ್ ಎನ್ನುವ ಎರಡು ಪ್ರಮುಖ ಎಸ್‌ಯುವಿ ಕಾರುಗಳು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಟೊಯೊಟಾ ಚಿಂತನೆ ನಡೆಸಿದ್ದು, ಈ ಹೊಸ ಕಾರುಗಳು ಬಿಡುಗಡೆಗೊಂಡಿದ್ದೆ ಆದಲ್ಲಿ ಹೊಸ ಸಂಚಲನವನ್ನೇ ಸೃಷ್ಠಿಸಲಿವೆ.

ಟೊಯೊಟಾ ಸಿ-ಹೆಚ್‌ಆರ್
ಸಿ-ಹೆಚ್‌ಆರ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಯುರೋಪ್ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಹೊಂದಿದ್ದು, ಸುಮಾರು 14 ಲಕ್ಷ ದಿಂದ 16 ಲಕ್ಷ ಬೆಲೆಗಳೊಂದಿಗೆ ಮಾರಾಟವಾಗುತ್ತಿದೆ. ಏರೋ ಡೈನಾಮಿಕ್ ವಿನ್ಯಾಸಗಳನ್ನು ಹೊಂದಿರುವ ಈ ಕಾರು 2.0-ಲೀಟರ್ ಡಿಸೇಲ್ ಎಂಜಿನ್ ಮತ್ತು ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

ಇದೇ ಮಾದರಿಯನ್ನು 1.5-ಲೀಟರ್ ಡಿಸೇಲ್ ಎಂಜಿನ್‌ನೊಂದಿಗೆ ಪರಿಚಯಿಸುವ ಮೂಲಕ ಕ್ರೇಟಾ ಮತ್ತು ಮಾರುತಿ ಸುಜುಕಿ ಮುಂಬರುವ ಹೊಸ ಕಾರು ವಿಟಾರಾ ಎಸ್‌ಯುವಿ ಕಾರುಗಳಿಗೆ ಪೈಪೋಟಿ ನೀಡುವ ಗುರಿಹೊಂದಲಾಗಿದ್ದು, ಕೆಲವು ತಾಂತ್ರಿಕ ಬದಲಾವಣೆ ತರುವ ಮೂಲಕ ಕಾರಿನ ಬೆಲೆಯನ್ನು ತಗ್ಗಿಸುವ ಚಿಂತನೆ ನಡೆಸಲಾಗಿದೆ.

ಇದರಿಂದ ಹೊಸ ಸಿ-ಹೆಚ್‌ಆರ್ ಕಾರುಗಳು 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ರೂ. 12 ರಿಂದ ರೂ. 15 ಲಕ್ಷದ ತನಕ ಬೆಲೆ ನಿಗದಿಗೊಳಿಸಿ ಹೊಸ ಟ್ರೆಂಡ್ ಕ್ರಿಯೆಟ್ ಮಾಡಲಿವೆ.

ಜೊತೆಗೆ ಹೊಸ ಕಾರುಗಳು ಜೀಪ್ ಕಂಪಾಸ್ ಕಾರುಗಳಲ್ಲಿ ಹೊಂದಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು, 22 ಲಕ್ಷ ಪಾವತಿಸಿ ಜೀಪ್ ಕಂಪಾಸ್ ಖರೀದಿಸುವ ಗ್ರಾಹಕರಿಗೆ ಇದು ಹೊಸ ಆಯ್ಕೆಯಾಗಿದ್ದು, ಮುಂದಿನ ಇದು ಯಾವ ರೀತಿ ಬದಲಾವಣೆಯೊಂದಿಗೆ ಭಾರತಕ್ಕೆ ಎಂಟ್ರಿ ನೀಡಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ತಿಳಿಯಲಿದೆ.

ಟೊಯೊಟಾ ರಷ್ ಸ್ಪೆಷಲ್ ಏನು?
ಟೊಯೊಟಾ ಐಕಾನಿಕ್ ಮಾದರಿಗಳನ್ನು ಗಮನಿಸಿದಾಗ ರಷ್ ಕಾರುಗಳು ಭಾರತ ಪ್ರವೇಶಕ್ಕೆ ಯಾವುದೇ ಅಡೆ ತಡೆ ಎದುರಾಗುವ ಸಾಧ್ಯತೆಯಿಲ್ಲ. ಯಾಕಂದ್ರೆ ಟೊಯೊಟಾ ಇನೋವಾ ಈಗಾಗಲೇ ಎಂಪಿವಿ ವಿಭಾಗದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿದೆ.

ಅಂದ ಹಾಗೆ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ರಷ್ ಕಂಪ್ಯಾಕ್ಟ್ ಎಸ್‌ಯುವಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 107.5-ಬಿಎಚ್‌ಪಿ ಮತ್ತು 141.2-ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಹೊಂದಿದೆ.

ಹೀಗಾಗಿಯೇ ಭಾರತದಲ್ಲಿ ಬಿಡುಗಡೆಗಾಗಿ ಕಾಯ್ದಿರುವ ರಷ್ ಕೂಡಾ ಥರ್ಡ್ ಜನರೇಷನ್ ಆವೃತ್ತಿಯ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 104-ಬಿಎಚ್‌ಪಿ 140-ಎನ್ಎಂ ಟಾರ್ಕ್ ಹೊಂದಿರುವುದು ಪ್ರಮುಖ ವಿಚಾರ ಎನ್ನಬಹುದು.

ಜೊತೆಗೆ ಭಾರತದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿರುವ ರಷ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಇನೋವಾ ರೀತಿಯಲ್ಲೇ ಫೌರ್ ಕ್ರೋಮ್ ಸ್ಲಾಟ್ ಒದಗಿಸಲಾಗಿದ್ದು, 7 ಸೀಟರ್ ಸೌಲಭ್ಯವನ್ನು ಹೊಂದಿರಲಿದೆ.

ಇನ್ನು ಹೊರ ಭಾಗದ ಎಲ್ಇಡಿ ಡಿಆರ್‌ಎಸ್ ವಿನ್ಯಾಸಗಳು ಹೋಂಡಾ ಸಿಆರ್-ವಿ ರೀತಿಯಲ್ಲಿದ್ದು, 220ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ಇದಷ್ಟೇ ಅಲ್ಲದೇ ಡ್ಯುಯಲ್ ಟೊನ್ ಕ್ಯಾಬಿನ್, 17 ಇಂಚಿನ ಆಲಾಯ್ ಚಕ್ರಗಳು ಮತ್ತು ಕಾರಿನ ಮುಂಭಾಗದಲ್ಲಿ ಟಿಡಿಆರ್ ಸ್ಪೋರ್ಟಿವೊ ಬ್ಯಾಡ್ಜ್ ಅಂಟಿಸಲಾಗಿದೆ.

ಇನ್ನುಳಿದಂತೆ ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಒದಗಿಸಲಾಗುವ ಸಿಕ್ಸ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಸ್ಟ್ಯಾಬಿಲಿಟಿ ಕಂಟ್ರೊಲರ್, ಯುಎಸ್‌ಬಿ, ಸಿಡಿ ಪ್ಲೇಯರ್, ಸ್ಮಾರ್ಟ್ ಕನೆಕ್ಟಿವಿಟಿ ಸ್ಲಾಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಕೀ ಲೆಸ್ ಎಂಟ್ರಿ ಜೋಡಣೆ ಮಾಡಲಾಗಿದೆ.
Source: TOI

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಈ ಹಿನ್ನೆಲೆ ಜನಪ್ರಿಯ ಮಾದರಿಗಳಾದ ಹ್ಯುಂಡೈ ಕ್ರೇಟಾ, ರೆನಾಲ್ಟ್ ಕ್ಯಾಪ್ಚರ್, ಫೋರ್ಡ್ ಇಕೋ ಸ್ಪೋರ್ಟ್, ಮಾರುತಿ ಸುಜುಕಿ ವಿಟಾರಾ, ಜೀಪ್ ಕಂಪಾಸ್ ಹಿಂದಿಕ್ಕುವ ಉದ್ದೇಶದೊಂದಿಗೆ ಟೊಯೊಟಾ ಸಂಸ್ಥೆಯು ರಷ್ ಮತ್ತು ಸಿ-ಹೆಚ್‌ಆರ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಎನ್ನಬಹುದು.


Click it and Unblock the Notifications








