ಪೊಲೊ, ಎಮಿಯೊ ಮತ್ತು ವೆಂಟೊ ಕನೆಕ್ಟ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್
ದೇಶಾದ್ಯಂತ ದಸರಾ ಮತ್ತು ದೀಪಾವಳಿ ಹಬ್ಬದ ಸಡಗರಕ್ಕೆ ಸಾಕ್ಷಿಯಾಗಲು ಆಟೋ ಉತ್ಪಾದನಾ ಸಂಸ್ಥೆಗಳು ಕೆಲವು ಸ್ಪೆಷಲ್ ಎಡಿಷನ್ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದು, ಫೋಕ್ಸ್‌ವ್ಯಾಗನ್ ಸಂಸ್ಥೆಯು ಸಹ ತನ್ನ ಜನಪ್ರಿಯ ಪೊಲೊ, ಎಮಿಯೊ ಮತ್ತು ವೆಂಟೊ ಕೆನೆಕ್ಟ್ ಎಡಿಷನ್‌ಗಳನ್ನು ಬಿಡುಗಡೆ ಮಾಡಿದೆ.

ಮಧ್ಯಮ ಕ್ರಮಾಂಕದ ಉತ್ತಮ ಪರ್ಫಾಮೆನ್ಸ್ ಕಾರುಗಳನ್ನು ಉತ್ಪಾದನೆ ಮಾಡುವಲ್ಲಿ ಜನಪ್ರಿಯವಾಗಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ನೆಚ್ಚಿನ ಮಾದರಿಗಳಾದ ಪೊಲೊ, ಎಮಿಯೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್‌ಗಳನ್ನು ಪರಿಚಯಿಸಿದ್ದು, ಹೊಸ ಕಾರುಗಳಲ್ಲಿ ಕೆಲವು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನು ಜೋಡಿಸಿರುವುದು ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

ಸ್ಪೆಷಲ್ ಎಡಿಷನ್‌ಗಳಲ್ಲಿ ಎಂಜಿನ್ ಮಾದರಿಯನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಕಾರಿನ ವಿನ್ಯಾಸದಲ್ಲಿ ಗುರುತರ ಬದಲಾವಣೆ ತರಲಾಗಿದೆ. ಕಾರಿನ ವಿನ್ಯಾಸಗಳಿಗೆ ಸ್ಪೋರ್ಟಿ ಲುಕ್ ನೀಡಲಾಗಿದ್ದು, ಕಾರು ಪ್ರಿಯರ ಬೇಡಿಕೆಗೆ ಅನುಗುಣವಾಗಿ ಹೊರ ಮತ್ತು ಒಳ ವಿನ್ಯಾಸಗಳಲ್ಲಿ ಭಾರೀ ಬದಲಾವಣೆ ಪಡೆದುಕೊಂಡಿವೆ.

ಸ್ಪೆಷಲ್ ಎಡಿಷನ್ ಕಾರುಗಳ ರೂಫ್ ಸ್ಪಾಯ್ಲರ್, ಸ್ಟೈಲಿಶ್ ಸೈಡ್ ಪ್ರೋಫೈಲ್, ಬ್ಲ್ಯಾಕ್ ರಿಯರ್ ಸ್ಪಾಯ್ಲರ್, ಕಾರ್ಬನ್ ಫಿನಿಷ್ ಓಆರ್‌ವಿಎಂ ಕ್ಯಾಪ್ ಸೌಲಭ್ಯಗಳು ಹೊಸ ಕಾರುಗಳ ಹೊರನೋಟವನ್ನೇ ಬದಲಾವಣೆಗೊಳಿಸಿದ್ದು, ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಈ ಹೊಸ ಮಾದರಿಗಳನ್ನು ಸಿದ್ದಪಡಿಸಲಾಗಿದೆ.

ಜೊತೆಗೆ ಕಾರು ಚಾಲನೆಯನ್ನು ಸುಲಭವಾಗಿಸಲು ಹೊಸದಾಗಿ ಇಂಟಲಿಜೆಂಟ್ ಅಸಿಸ್ಟೆನ್ಸ್ ಸಿಸ್ಟಂ ಎನ್ನುವ ಹೊಸ ಸೌಲಭ್ಯವನ್ನು ನೀಡಲಾಗಿದ್ದು, ಸ್ಮಾರ್ಟ್ ಫೋನ್ ಕನೆಕ್ಟ್ ಮೂಲಕ ಕಾರು ಉತ್ಪಾದಕರಿಂದಲೇ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದಾದ ವ್ಯವಸ್ಥೆ ಇದಾಗಿದೆ.

ಅಂದರೇ, ಕಾರಿನಲ್ಲಿರುವ ಜೋಡಣೆ ಮಾಡಲಾಗಿರುವ ಇಂಟಲಿಜೆಂಟ್ ಅಸಿಸ್ಟೆನ್ಸ್ ಸಿಸ್ಟಂನಿಂದ ಕಾರಿನಲ್ಲಿರುವ ಸಮಸ್ಯೆಯನ್ನು ಆಲಿಸಲು ಈ ಸೌಲಭ್ಯ ನೇರವಿಗೆ ಬರಲಿದ್ದು, ಒಂದು ವೇಳೆ ಕಾರಿನ ಸರ್ವೀಸ್ ಅಗತ್ಯವಿದ್ದಲ್ಲಿ ಆ್ಯಪ್ ಮೂಲಕವೇ ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಅದು ನಿಮಗೆ ಮಾಹಿತಿ ನೀಡಲಿದೆ.

ಬೆಲೆಯಲ್ಲಿ ಇಲ್ಲ ಬದಲಾವಣೆ
ಹೌದು, ಕೇವಲ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಪರಿಚಯಿಸಲಾಗಿರುವ ಪೊಲೊ, ಎಮಿಯೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್ ಕಾರುಗಳಿಗೆ ನೀವು ಯಾವುದೇ ಹೆಚ್ಚುವರಿ ದರಗಳನ್ನು ಪಾವತಿಸಬೇಕಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ವಿಧಿಸಲಾಗುವ ದರಗಳೇ ಹೊಸ ಕಾರುಗಳಿಗೂ ಅನ್ವಯವಾಗುತ್ತವೆ.

ಸದ್ಯ ಪೊಲೊ ಕಾರು ಎಕ್ಸ್‌ಶೋರಂ ಪ್ರಕಾರ ರೂ.5.55 ಲಕ್ಷದಿಂದ ರೂ.9.39ಲಕ್ಷ ಬೆಲೆ ಹೊಂದಿದ್ದರೆ, ಎಮಿಯೊ ಕಾರು ಎಕ್ಸ್‌ಶೋರಂ ಪ್ರಕಾರ ರೂ.5.65 ಲಕ್ಷದಿಂದ ರೂ.9.99 ಲಕ್ಷ ಮತ್ತು ವೆಂಟೊ ಸೆಡಾನ್ ಕಾರು ರೂ.8.38 ಲಕ್ಷದಿಂದ ರೂ.14.02 ಲಕ್ಷ ಬೆಲೆ ಪಡೆದುಕೊಂಡಿವೆ.

ಇನ್ನು ಫೋಕ್ಸ್‌ವ್ಯಾಗನ್ ಸಂಸ್ಥೆಯು ಪರಿಚಯಿಸಿರುವ ಸ್ಪೆಷಲ್ ಎಡಿಷನ್ ಪೊಲೊ, ಎಮಿಯೊ ಮತ್ತು ವೆಂಟೊ ಕಾರು ಸಿಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ನಿಗದಿತ ಮಟ್ಟದಲ್ಲಿ ಉತ್ಪಾದನೆಗೊಂಡಿರುವ ಕಾರುಗಳು ಮಾರಾಟಗೊಂಡ ನಂತರ ಮತ್ತೆ ಸಾಮಾನ್ಯ ಮಾದರಿಗಳೇ ಖರೀದಿಗೆ ಲಭ್ಯವಿರಲಿವೆ.

ಇನ್ನು ಬಿಡುಗಡೆಯಾಗಿರುವ ಪೊಲೊ, ಎಮಿಯೊ ಸ್ಪೆಷಲ್ ಎಡಿಷನ್‌ಗಳಲ್ಲಿ ಈ ಹಿಂದೆಯೇ 1.0-ಲೀಟರ್ ಎಂಜಿನ್ ಪ್ರೇರಿತ ಆವೃತ್ತಿಗಳನ್ನು ಸಹ ಬಿಡುಗಡೆ ಮಾಡಲಾಗಿದ್ದು, ಹೊಸ ಕಾರುಗಳು 75-ಬಿಎಚ್‌ಪಿ ಮತ್ತು 95-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

ಕಾರು ಇಂಧನ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದಲೇ 1.0-ಲೀಟರ್ ಎಂಜಿನ್ ಮಾದರಿಯನ್ನು ಅಭಿವೃದ್ಧಿ ಮಾಡಲಾಗಿದ್ದು, ಪ್ರತಿ ಕಾರು ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಣೆ ಹೊಂದಿರುವುದು ಮತ್ತೊಂದು ವಿಶೇಷ.

ಇದರ ಜೊತೆಗೆ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಎರಡೂ ಕಾರುಗಳು ಸಹ ವಿನೂತನ ವೈಶಿಷ್ಟ್ಯತೆಗಳನ್ನು ಮತ್ತು ಸುರಕ್ಷತಾ ಸಾಧನಗಳನ್ನು ಪಡೆದುಕೊಂಡಿದ್ದು, ಮಾರುತಿ ಬಲೆನೊ ಮತ್ತು ಡಿಜೈರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿವೆ.


Click it and Unblock the Notifications








