ಎಲೆಕ್ಟ್ರಿಕ್ ವಾಹನ ಬ್ಯಾಟರಿ ವಿನಿಮಯ ಕೇಂದ್ರಗಳಿಗಾಗಿ ಹೆಚ್ಚಿದ ಒತ್ತಡ
ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‍ಐಸಿಸಿಐ) ಫೇಮ್ 2 ಯೋಜನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಬದಲಾವಣೆಗಳಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಉತ್ತೇಜಿಸುವುದು ಸೇರಿದೆ. ಫೇಮ್ 2 ರ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳಿಗೆ ನೀಡಲಾಗುತ್ತಿರುವಂತೆಯೇ ಬ್ಯಾಟರಿ ವಿನಿಮಯ ಕೇಂದ್ರಗಳಿಗೆ ಪ್ರೋತ್ಸಾಹ ಧನ ನೀಡಬಹುದು ಎಂದು ಎಫ್‍ಐಸಿಸಿಐ ಹೇಳಿದೆ.

ಎಲೆಕ್ಟ್ರಿಕ್ ವಾಹನ ಉದ್ಯಮವು ವೇಗವಾಗಿ ಬೆಳೆಯುತ್ತಿದೆ, ಆದರೆ ಸರ್ಕಾರವು ಅಂದುಕೊಂಡಷ್ಟು ವೇಗದಲ್ಲಿ ಸಾಗುತ್ತಿಲ್ಲ. ಎಲೆಕ್ಟ್ರಿಕ್ ವಾಹನ ಉದ್ಯಮದ ಬೆಳವಣಿಗೆಯನ್ನು ತ್ವರಿತಗೊಳಿಸಲು ಸರ್ಕಾರವು ಸಾಕಷ್ಟು ಪ್ರಯತ್ನ ಪಡುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವು ಫೇಮ್ ಯೋಜನೆಯನ್ನು ಜಾರಿಗೊಳಿಸಿದೆ. ಶೀಘ್ರವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಿ, ಪ್ರಯಾಣಕ್ಕಾಗಿ ಈ ವಾಹನಗಳನ್ನು ಬಳಸಿಕೊಳ್ಳುವುದು ಈ ಯೋಜನೆಯ ಹಿಂದಿರುವ ಉದ್ದೇಶ.

ಫೇಮ್ 2 ಯೋಜನೆಯಡಿ ಸರ್ಕಾರವು ವಿವಿಧ ಬಗೆಯ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು, ಪ್ರೋತ್ಸಾಹ ಧನವಾಗಿ ರೂ.10,000 ಕೋಟಿಗಳನ್ನು ಬಿಡುಗಡೆಗೊಳಿಸಿದೆ. ಫೇಮ್ 2 ಯೋಜನೆಯಡಿಯಲ್ಲಿ 10 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, 5 ಲಕ್ಷ ಇ-ರಿಕ್ಷಾ ಹಾಗೂ 7,090 ಇ-ಬಸ್ಸುಗಳನ್ನು ಖರೀದಿಸಲಾಗುವುದು. 35,000 ಎಲೆಕ್ಟ್ರಿಕ್ ನಾಲ್ಕು ಚಕ್ರಗಳ ಖರೀದಿಗೆ ರೂ.15 ಲಕ್ಷ ಹಾಗೂ 20,000 ಪೂರ್ಣ ಪ್ರಮಾಣದ ಹೈಬ್ರಿಡ್ ವಾಹನಗಳನ್ನು ಖರೀದಿಸಲು ರೂ.15 ಲಕ್ಷಗಳವರೆಗೆ ಪ್ರೋತ್ಸಾಹ ಧನ ನೀಡಲು ಫೇಮ್ 2 ಪ್ರಸ್ತಾವನೆ ಸಲ್ಲಿಸಿದೆ.

ಎಫ್ಐಸಿಸಿಐ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು, ಹೆಚ್ಚು ಅಗತ್ಯವಾಗಿದ್ದ ಫೇಮ್2 ಯೋಜನೆಯನ್ನು 2019ರ ಮಾರ್ಚ್ ನಲ್ಲಿ ಜಾರಿಗೊಳಿಸಲಾಗಿದ್ದು, ಉತ್ತಮ ಫಲಿತಾಂಶಕ್ಕಾಗಿ ಈ ಯೋಜನೆಯಲ್ಲಿ ಕೆಲವೊಂದು ಅಂಶಗಳನ್ನು ಬದಲಾಯಿಸಬೇಕಾಗಿದೆ ಎಂದು ತಿಳಿಸಿದೆ. ಎಫ್‌ಐಸಿಸಿಐ ಎಂಬುದು 1927 ರಲ್ಲಿ ಸ್ಥಾಪನೆಯಾದ ಭಾರತದ ವ್ಯಾಪಾರ ಸಂಸ್ಥೆಗಳ ಸಂಘವಾಗಿದೆ. ಈ ಸಂಘವು ಭಾರತದ ವಿವಿಧ ವಾಣಿಜ್ಯ ಹಾಗೂ ಕೈಗಾರಿಕಾ ಕಾರ್ಯಾಚರಣೆಗಳನ್ನು ಪರಿಶೀಲಿಸುತ್ತದೆ.

ಫೇಮ್2 ಯೋಜನೆಯಡಿಯಲ್ಲಿ ಬ್ಯಾಟರಿ ಸ್ವಾಪಿಂಗ್ ಕೇಂದ್ರಗಳನ್ನು ಸೇರಿಸುವ ಅಗತ್ಯವನ್ನು ವಿವರಿಸಿ, ಭಾರೀ ಕೈಗಾರಿಕೆಗಳ ಇಲಾಖೆಗೆ ಪತ್ರ ಬರೆದಿರುವುದಾಗಿ ಎಫ್‌ಐಸಿಸಿಐ ಹೇಳಿಕೊಂಡಿದೆ. ಈ ಯೋಜನೆಯಲ್ಲಿ ಬ್ಯಾಟರಿ ಸ್ವಾಪಿಂಗ್ ಸೇವೆಗಳನ್ನು ಮೊದಲೇ ಸೇರಿಸದೇ ಇದ್ದ ಕಾರಣ, ಹೆಚ್ಚುವರಿ ಚಾರ್ಜಿಂಗ್ ಸ್ಟೇಷನ್‍ಗಳನ್ನು ಸ್ಥಾಪಿಸಲು ಹಣದ ಅಗತ್ಯವಿದೆ. ಇವಿ ಚಾರ್ಜಿಂಗ್ ಸ್ಟೇಷನ್‍ಗಳಿಗೆ ಅಗತ್ಯವಾಗಿರುವ ಹಣವನ್ನು ಮೊಟಕುಗೊಳಿಸದಿರುವಂತೆ ಕೇಳಿಕೊಳ್ಳಲಾಗಿದೆ. ಇದರಿಂದಾಗಿ ನಾಲ್ಕು ಚಕ್ರಗಳಿಗೆ ಹಾಗೂ ಬಸ್ಸುಗಳಿಗೆ ಅನುಕೂಲವಾಗಲಿದೆ.
ಎಲೆಕ್ಟ್ರಿಕ್ ವಾಹನ ಉದ್ಯಮವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯನ್ನು ಜಾರಿಗೊಳಿಸಿದೆ. ಎಫ್‌ಐಸಿಸಿಐ ಶಿಫಾರಸು ಮಾಡಿದಂತೆ, ಬ್ಯಾಟರಿ ಸ್ವಾಪೇಬಲ್ ಕೇಂದ್ರಗಳನ್ನು ಸಹ ಈ ಯೋಜನೆಯಡಿಯಲ್ಲಿ ಸೇರಿಸಿದರೆ ಉತ್ತಮ. ಹೆಚ್ಚು ದೂರವನ್ನು ಕ್ರಮಿಸಲು ಸಾಧ್ಯವಾಗುವುದಿಲ್ಲವೆಂಬ ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಬಳಸುತ್ತಿಲ್ಲ. ಚಾರ್ಜಿಂಗ್ ಸ್ಟೇಷನ್ ಅನ್ನು ಹುಡುಕುವಷ್ಟರಲ್ಲಿ ಸಾಕಾಗಿರುತ್ತದೆ. ಆದರೆ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಯ ವಾಹನಗಳಲ್ಲಿ ಇಂಧನ ತುಂಬಿಸಲು ಕೆಲವೇ ನಿಮಿಷಗಳು ಸಾಕಾಗುತ್ತವೆ.

ಬ್ಯಾಟರಿ ಸ್ವಾಪಿಂಗ್‍ನಿಂದಾಗಿ ಈ ಸಮಸ್ಯೆ ದೂರವಾಗಲಿದೆ. ಏಕೆಂದರೆ ಕೆಲವೇ ನಿಮಿಷಗಳಲ್ಲಿ ಬ್ಯಾಟರಿ ಬದಲಿಸಿಕೊಂಡು ಎಲೆಕ್ಟ್ರಿಕ್ ವಾಹನಗಳನ್ನು ಚಲಾಯಿಸಬಹುದು. ಫೇಮ್ 2 ಯೋಜನೆಯು ಚಾರ್ಜಿಂಗ್ ಸ್ಟೇಷನ್‍ಗಳ ಸ್ಥಾಪನೆಯನ್ನು ಬೆಂಬಲಿಸುತ್ತದೆ. ಅದೇ ರೀತಿಯಲ್ಲಿ ಈ ಯೋಜನೆಯಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿದರೆ ಒಳ್ಳೆಯದು.


Click it and Unblock the Notifications