140 ಕಿ.ಮಿ ವೇಗದಲ್ಲಿದ್ದ ಶಾಸಕ ಸಿಟಿ ರವಿ ಫಾರ್ಚೂನರ್ ಕಾರಿಗೆ ಇಬ್ಬರು ಯುವಕರು ಬಲಿ
ಚಿಕ್ಕಮಗಳೂರು ಬಿಜೆಪಿ ಶಾಸಕ ಸಿಟಿ ರವಿ ಅವರಿದ್ದ ಟೊಯೊಟಾ ಫಾರ್ಚೂನರ್ ಕಾರು ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದ್ದು, ಭೀಕರ ಅಪಘಾತದಲ್ಲಿ ಶಾಸಕ ಸಿಟಿ ರವಿಯವರು ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತುಮಕೂರು ಜಿಲ್ಲೆಯ ಆಲಪ್ಪನಗುಡ್ಡೆ ಬಳಿಯ ರಾಷ್ಟ್ರಿಯ ಹೆದ್ದಾರಿ 75ರಲ್ಲಿ ಈ ಘಟನೆ ನಡೆದಿದ್ದು, ಮಧ್ಯರಾತ್ರಿ 2 ಗಂಟೆಯ ಹೊತ್ತಿಗೆ ಮೂತ್ರ ವಿಸರ್ಜನೆಗೆಂದು ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವುದಲ್ಲದೇ ಮತ್ತೊಬ್ಬ ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಮಾಹಿತಿಗಳ ಪ್ರಕಾರ, ಕೊಲ್ಲರು ಪ್ರವಾಸಕ್ಕೆಂದು ತೆರಳಿದ್ದ 13 ಯುವಕರ ಗುಂಪು ಪ್ರವಾಸ ಮುಗಿಸಿ ಬೆಂಗಳೂರಿನತ್ತ ತೆರಳುತ್ತಿದ್ದಾಗ ಈ ದುರಂತ ನಡೆದಿದ್ದು, ಆಲಪ್ಪನಗುಡ್ಡೆ ಬಳಿ ಮೂತ್ರ ವಿಸರ್ಜನೆಗೆಂದು ರಸ್ತೆ ಬದಿ ಕಾರು ನಿಲ್ಲಿಸಲಾಗಿತ್ತು.

ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಮಹೀಂದ್ರಾ ಸ್ಕಾರ್ಪಿಯೋದಲ್ಲಿ ತೆರಳುತ್ತಿದ್ದ 13 ಯುವಕರಲ್ಲಿ ಐದಾರು ಜನ ಕೆಳಗೆ ಇಳಿದ್ದಿದ್ದರು. ಈ ವೇಳೆ ವಿಸರ್ಜನೆ ಮುಗಿಸಿ ಬಂದ ಮೂವರು ಯುವಕರು ರಸ್ತೆಯ ಬದಿಯ ಕಾರಿನ ಬಾಗಿಲು ತೆರೆದು ಒಳಗೆ ಹೋಗಲು ನಿಂತಿದ್ದರು.

ಈ ವೇಳೆ 140 ಕಿ.ಮಿ ವೇಗದಲ್ಲಿ ಬರುತ್ತಿದ್ದ ಟೊಯೊಟಾ ಫಾರ್ಚೂನರ್ ಕಾರು ಇಬ್ಬರು ಯುವಕರ ಮೇಲೆ ಹರಿದಿದ್ದು, ಕಾರಿನ ಮುಂದೆಯೇ ನಿಂತಿದ್ದ ಮತ್ತೊಬ್ಬ ಯುವಕನಿಗೂ ಗುದ್ದಿದೆ. ಕಾರು ವೇಗದಲ್ಲಿದ್ದ ರಭಸಕ್ಕೆ ಇಬ್ಬರು ಅಲ್ಲಿಯೇ ಪ್ರಾಣಬಿಟ್ಟಿದ್ದು, ತಕ್ಷಣವೇ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಯ್ತು.

ಸ್ಥಳಕ್ಕೆ ಬಂದ ಕುಣಿಗಲ್ ಪೊಲೀಸರು ಗಾಯಾಳು ಯುವಕನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಒಂದು ಕಾಲು ಸಂಪೂರ್ಣ ಮುರಿದಿರುವುದಾಗಿ ಕಾರು ಚಾಲಕ ಮಾಹಿತಿ ನೀಡಿದ್ದಾನೆ. ಸಾವನ್ನಪ್ಪಿದ್ದವರನ್ನು ಸೊರೋನಹಳ್ಳಿಯ ಶಶಿಕುಮಾರ್ ಮತ್ತು ಸನೀಲ್ ಗೌಡ ಎಂದು ಗುರಿತಿಸಲಾಗಿದ್ದು, ಶಾಸಕ ಸಿಟಿ ರವಿಯವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದು, ಅಪಘಾತಕ್ಕಿಡಾದ ಫಾರ್ಚೂನರ್ ಕಾರುನ್ನ ಹೆಚ್ಚಿನ ತನಿಖೆಗಾಗಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಇನ್ನು ಘಟನೆ ನಡೆದ ಬಳಿಕ ಗಾಯಾಳು ಯುವಕನಿಗೆ ಚಿಕಿತ್ಸೆ ಸಿಗುವ ತನಕ ಸ್ಥಳದಲ್ಲೇ ಇದ್ದ ಸಿಟಿ ರವಿಯವರು ತದನಂತರವಷ್ಟೇ ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ನೀಡಲಾಗಿದ್ದು, ಅತಿ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಅರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜೊತೆಗೆ ಮೃತ ಯುವಕರ ಸಂಬಂಧಿಕರು ಹಾಗೂ ಸ್ನೇಹಿತರು ಕುಣಿಗಲ್ ಸಾರ್ವಜನಿಕ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದು, ಶಾಸಕ ಸಿ.ಟಿ ರವಿ ಹಾಗೂ ಕಾರಿನಲ್ಲಿದ್ದವರು ಕುಡಿದು ಮತ್ತಿನಲ್ಲಿ ಕಾರು ಚಾಲನೆ ಮಡಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತ್ತಿದ್ದ ಯುವಕರ ಪ್ರಾಣ ತೆಗೆದಿದೆ ಎಂದು ಅರೋಪಿಸಿದ್ದಾರೆ.


Click it and Unblock the Notifications








