ಒಂದು ಸಾವಿರ ಕಿ.ಮೀ ಮೈಲೇಜ್ ನೀಡುತ್ತೆ ಹ್ಯುಂಡೈ ಕಂಪನಿಯ ಈ ಕಾರು..!
ಹುಂಡೈ ಕಂಪನಿಯು ಹೊಸ ಹೈಡ್ರೊಜೆನ್ ಫ್ಯೂಯಲ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದನ್ನು ಖಚಿತಪಡಿಸಿದೆ. ಈ ರೀತಿಯ ಫ್ಯೂಯಲ್ ಎಂಜಿನ್ ಹೊಂದಲಿರುವ ಹ್ಯುಂಡೈ ನೆಕ್ಸೊ ಕಾರ್ ಅನ್ನು ದಕ್ಷಿಣ ಕೊರಿಯಾ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕಂಪನಿಯ ಉನ್ನತ ಅಧಿಕಾರಿಯೊಬ್ಬರ ಪ್ರಕಾರ ಹ್ಯುಂಡೈ ನೆಕ್ಸೊ ಕಾರು ಸುಮಾರು 1,000 ಕಿ.ಮೀ ಮೈಲೇಜ್ ನೀಡಲಿದೆ. ನೆಕ್ಸೊ ಕಾರು 2021ಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿದೆ.

ಈಗ ಜಾಗತಿಕ ಮಾರುಕಟ್ಟೆಯಲ್ಲಿ ಪರಿಸರ ಸ್ನೇಹಿ ವಾಹನಗಳ ತಯಾರಿಕೆಯ ಬಗ್ಗೆ ಗಮನಹರಿಸಲಾಗುತ್ತಿದೆ. ಪೆಟ್ರೊಲ್ ಹೈಬ್ರಿಡ್, ಹೈಡ್ರೊಜೆನ್ ಪವರ್ ಕಾರುಗಳು ಹಾಗೂ ಎಲೆಕ್ಟ್ರಿಕ್ ವಾಹನಗಳು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಪರಿಸರ ಸ್ನೇಹಿ ವಾಹನಗಳಾಗಿವೆ. ಎಲೆಕ್ಟ್ರಿಕ್ ವಾಹನಗಳು ನಿಜಕ್ಕೂ ಪರಿಸರ ಸ್ನೇಹಿ ವಾಹನಗಳೇ ಆಗಿವೆ. ಏಕೆಂದರೆ ಈ ವಾಹನಗಳು ಯಾವುದೇ ರೀತಿಯ ಮಾಲಿನ್ಯವನ್ನು ಉಂಟು ಮಾಡುವುದಿಲ್ಲ.

ಆದರೆ ಕಡಿಮೆ ಮೈಲೇಜ್ ಹಾಗೂ ದುಬಾರಿ ಬೆಲೆಯ ಕಾರಣದಿಂದಾಗಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯು ಅಷ್ಟೊಂದು ಪ್ರಗತಿಯನ್ನು ಹೊಂದುತ್ತಿಲ್ಲ. ಪೆಟ್ರೋಲ್ ಹೈಬ್ರಿಡ್ ವಾಹನಗಳನ್ನು ಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವ ಮುನ್ನ ತಾತ್ಕಾಲಿಕವಾಗಿ ಬಳಸಲಾಗುತ್ತಿದೆ. ಪೆಟ್ರೋಲ್ ಹೈಬ್ರಿಡ್ ವಾಹನಗಳಲ್ಲಿ ಪೆಟ್ರೋಲ್ ಎಂಜಿನ್ ಹಾಗೂ ಬ್ಯಾಟರಿಗಳನ್ನು ಜೊತೆಯಾಗಿ ಬಳಸಲಾಗುವುದು. ಇದರಿಂದಾಗಿ ವಾಹನಗಳು ಹೆಚ್ಚು ಮೈಲೇಜ್ ನೀಡುವ ಜೊತೆಗೆ ಪರಿಸರ ಸ್ನೇಹಿಯಾಗಿರಲಿವೆ.

ಇನ್ನು ಕೆಲವು ವಾಹನಗಳಲ್ಲಿ ಚಿಕ್ಕ ಪೆಟ್ರೋಲ್ ಎಂಜಿನ್ ಬಳಸಲಾಗುತ್ತಿದ್ದು, ಈ ಎಂಜಿನ್‍ನಿಂದ ಜನರೇಟರ್‍ಗೆ ಪವರ್ ನೀಡಲಾಗುವುದರಿಂದ ಬ್ಯಾಟರಿಗಳು ಚಾರ್ಜ್ ಆಗುತ್ತವೆ. ಈ ಬ್ಯಾಟರಿಗಳು ಎಲೆಕ್ಟ್ರಿಕ್ ಮೋಟಾರ್‍ಗೆ ಪವರ್ ನೀಡಿ, ವ್ಹೀಲ್‍ಗಳನ್ನು ಚಲಾಯಿಸುತ್ತವೆ. ಹೈಡ್ರೊಜೆನ್ ಅಥವಾ ಫ್ಯೂಯಲ್ ಸೆಲ್ ಕಾರುಗಳೂ ಸಹ ಅದೇ ರೀತಿಯಲ್ಲಿಯೇ ಕಾರ್ಯ ನಿರ್ವಹಿಸುತ್ತವೆ. ಆದರೆ ಈ ಕಾರುಗಳು ಹೈಡ್ರೊಜೆನ್ ಗ್ಯಾಸ್ ಬಳಸುತ್ತವೆ. ಈ ರೀತಿಯ ಕಾರುಗಳಲ್ಲಿ ಹೈಡ್ರೊಜೆನ್ ರಾಸಾಯನಿಕವಾಗಿ ಆಮ್ಲಜನಕದೊಂದಿಗೆ ಬೆರೆತು ಗಾಡ್ ಕೆಮಿಕಲ್ ರಿಯಾಕ್ಷನ್ ಎಲೆಕ್ಟ್ರಿಕ್ ಸೃಷ್ಟಿಸುತ್ತದೆ.

ಇಲ್ಲಿ ಸೃಷ್ಟಿಯಾಗುವ ಎಲೆಕ್ಟ್ರಿಕ್, ಎಲೆಕ್ಟ್ರಿಕ್ ಮೋಟರ್ ಚಲಿಸುವಂತೆ ಮಾಡುತ್ತದೆ. ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳು ಶುದ್ಧ ವಿದ್ಯುತ್ ವಾಹನಗಳಿಗಿಂತ ಹೆಚ್ಚಿನ ಮೈಲೇಜ್ ನೀಡುವುದು ಸಾಬೀತಾಗಿದೆ. ಹಲವು ಕಾರು ತಯಾರಕ ಕಂಪನಿಗಳು ಭಾರತವು ಹೈಡ್ರೊಜೆನ್ ಪವರ್ ವಾಹನಗಳಿಗೆ ದೊಡ್ಡ ಮಾರುಕಟ್ಟೆಯೆಂದು ಪರಿಗಣಿಸಿದ್ದಾರೆ. ಈ ವಾಹನಗಳ ಮೇಲೆ 28% ನಷ್ಟು ಜಿಎಸ್‍ಟಿ ವಿಧಿಸಲಾಗಿರುವ ಕಾರಣ ಈ ಕಾರುಗಳ ಬೆಲೆಯು ದುಬಾರಿಯಾಗಿರಲಿದೆ. ಇದರ ಜೊತೆಗೆ ಭಾರತದಲ್ಲಿ ಹೈಡ್ರೊಜೆನ್ ಫ್ಯೂಯಲ್ ಸ್ಟೇಷನ್‍ಗಳು ಆರಂಭವಾಗಿಲ್ಲ.

ಈಗ ಈ ಸಮಸ್ಯೆಗಳು ಬಗೆಹರಿದಿರುವಂತೆ ಕಾಣುತ್ತಿದೆ. ಇತ್ತೀಚಿನ ಬಜೆಟ್‍ನಲ್ಲಿ ಸರ್ಕಾರವು ಈ ರೀತಿಯ ವಾಹನಗಳ ಮೇಲೆ ವಿಧಿಸಲಾಗಿದ್ದ 28% ಜಿಎಸ್‍ಟಿಯನ್ನು 12%ಗಳಿಗೆ ಇಳಿಸಿದೆ. ಇದರಿಂದಾಗಿ ಈ ವಾಹನಗಳ ಬೆಲೆಯು ಕಡಿಮೆಯಾಗಲಿದೆ. ಮನಿಕಂಟ್ರೋಲ್ ವರದಿಗಳ ಪ್ರಕಾರ, ಹ್ಯುಂಡೈ ಮೋಟಾರ್ ಇಂಡಿಯಾದ ಎಂಡಿ ಹಾಗೂ ಸಿಇಒ ಎಸ್‍ಎಸ್ ಕಿಮ್ ರವರು ಮಾತನಾಡಿ, ನೆಕ್ಸೊ ಕಾರ್ ಅನ್ನು ಕೊರಿಯಾದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಈ ಕಾರ್ ಅನ್ನು ಭಾರತದಲ್ಲಿ 2021ಕ್ಕೆ ಬಿಡುಗಡೆಗೊಳಿಸಲಾಗುವುದು.

ನೆಕ್ಸೊ ಕಾರಿನ ಉತ್ಪಾದನೆಗಾಗಿ ಬೇಕಾಗಿರುವ ಸೌಲಭ್ಯವನ್ನು ದೆಹಲಿ ಎನ್‍ಸಿಆರ್ ಸುತ್ತ ಮುತ್ತ ನಿರ್ಮಿಸಲು ಸಹಭಾಗಿತ್ವವನ್ನು ಹೊಂದಲಿದ್ದೇವೆ ಎಂದು ಹೇಳಿದ್ದಾರೆ. ಬೇರೊಂದು ಕಂಪನಿಯ ಜೊತೆಗೆ ಸಹಭಾಗಿತ್ವವನ್ನು ಹೊಂದುವುದರ ಮೂಲಕ ಹ್ಯುಂಡೈ ಕಂಪನಿಯು ಮೂಲ ಸೌಕರ್ಯಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದೆ. ಹ್ಯುಂಡೈ ಕಂಪನಿಯು ಪರಿಸರ ಸ್ನೇಹಿ ವಾಹನಗಳ ನಿರ್ಮಾಣದತ್ತ ಹೆಚ್ಚು ಗಮನ ನೀಡುತ್ತಿದೆ. ಕೊರಿಯಾ ಮೂಲದ ಕಂಪನಿಯು ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಆದ ಕೊನಾ ವಾಹನವನ್ನು ಬಿಡುಗಡೆಗೊಳಿಸಿದೆ.

ಕೊನಾ ಕಾರಿನ ಬಿಡುಗಡೆಯು ದೇಶಿಯ ಮಾರುಕಟ್ಟೆಯಲ್ಲಿ ಬಿರುಗಾಳಿಯಂತೆ ಅಪ್ಪಳಿಸಿದ್ದು, ಈ ಕಾರ್ ಅನ್ನು ಡ್ರೈವ್ ಮಾಡಿದವರು ಪ್ರಶಂಸಿಸುತ್ತಿದ್ದಾರೆ. ಕೊನಾ ಎಲೆಕ್ಟ್ರಿಕ್ ಕಾರು ಒಂದು ಬಾರಿಯ ಚಾರ್ಜ್‍ನಿಂದ ಸುಮಾರು 452 ಕಿ.ಮೀವರೆಗೂ ಚಲಿಸಲಿದೆ. ಕೊನಾ ಕಾರು 0-100 ಕಿ.ಮೀ ವೇಗವನ್ನು 9.7 ಸೆಕೆಂಡುಗಳಲ್ಲಿ ಕ್ರಮಿಸಲಿದೆ. ಈ ಕಾರಿನ ಟಾಪ್ ಸ್ಪೀಡ್ ಅನ್ನು 150 ಕಿ.ಮೀಗಳಿಗೆ ನಿಗದಿಪಡಿಸಲಾಗಿದೆ.

ನೆಕ್ಸೊ ಕಾರು ಸಹ ಇದೇ ಹಾದಿಯಲ್ಲಿ ಸಾಗಲಿದ್ದು, 1,000 ಕಿ.ಮೀವರೆಗಿನ ಮೈಲೇಜ್ ನೀಡಲಿದೆ. ನೆಕ್ಸೊ 5 ಸೀಟುಗಳ ಎಸ್‍ಯುವಿಯಾಗಿದ್ದು, 120ಕಿ.ವ್ಯಾ ಮೋಟಾರ್ ಹೊಂದಿದೆ. ಈ ಮೋಟಾರ್ 160 ಬಿಹೆಚ್‍ಪಿ ಉತ್ಪಾದಿಸುತ್ತದೆ. ಇದರ ಜೊತೆಗೆ 163 ಲೀಟರ್ ಹೈಡ್ರೊಜೆನ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ. ನೆಕ್ಸೊ ಕಾರಿನ ಬಿಡುಗಡೆಯ ನಂತರ ಹ್ಯುಂಡೈ ಕಂಪನಿಯು ಚಿಕ್ಕ ಬಜೆಟ್‍ನ ಎಲೆಕ್ಟ್ರಿಕ್ ಕಾರ್ ಅನ್ನು ಕಿಯಾ ಕಂಪನಿಯ ಸಹಭಾಗಿತ್ವದಲ್ಲಿ ಬಿಡುಗಡೆಗೊಳಿಸಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಹ್ಯುಂಡೈ ಕಂಪನಿಯು ಪರಿಸರ ಸ್ನೇಹಿ ವಾಹನಗಳನ್ನು ಬಿಡುಗಡೆಗೊಳಿಸಲು ದಿಟ್ಟ ಹೆಜ್ಜೆಗಳನ್ನಿಡುತ್ತಿದೆ. ಹಲವು ಕಂಪನಿಗಳು ಎಲೆಕ್ಟ್ರಿಕ್ ಕಾರಿನ ಬಗ್ಗೆ ಯೋಚಿಸುತ್ತಿರುವಾಗಲೇ ಹ್ಯುಂಡೈ, ಕೊನಾ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿದೆ. ಉಳಿದ ಕಂಪನಿಗಳು ಹೈಡ್ರೊಜೆನ್ ಕಾರಿನ ಬಗ್ಗೆ ಯೋಚಿಸುತ್ತಿರುವಾಗಲೇ ನೆಕ್ಸೊ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ನೆಕ್ಸೊ ಕಾರ್ ಬಿಡುಗಡೆಯ ನಂತರ ಮಾರುಕಟ್ಟೆಯಲ್ಲಿರುವ ಉಳಿದ ಕಂಪನಿಗಳು ಹೊಸತನದ ಬಗ್ಗೆ ಚಿಂತಿಸಲಿವೆ. ಹೊಸತನದ ಹರಿಕಾರ ಹ್ಯುಂಡೈ ಕಂಪನಿಗೆ ಅಭಿನಂದನೆಗಳು.


Click it and Unblock the Notifications