ಮುಂದಿನ ಒಂದು ವರ್ಷದೊಳಗೆ ಏಳು ಹೊಸ ಕಾರು ಬಿಡುಗಡೆ ಮಾಡಲಿದೆ ಮಹೀಂದ್ರಾ
ವರ್ಷಾಂತ್ಯದೊಳಗೆ ಬಿಎಸ್-6 ಎಂಜಿನ್ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ರೋಡ್ ಟೆಸ್ಟಿಂಗ್ ಪ್ರಕ್ರಿಯೆ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಮಹೀಂದ್ರಾ ಕೂಡಾ ತನ್ನ ಜನಪ್ರಿಯ ಕಾರುಗಳನ್ನು ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಉನ್ನತೀಕರಣ ಕೈಗೊಂಡಿರುವುದಲ್ಲದೇ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೂ ಚಾಲನೆ ನೀಡಲಿದೆ.

2020ರ ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಕಾರುಗಳನ್ನು ಉನ್ನತಿಕರಿಸುತ್ತಿದ್ದು, ಮಹೀಂದ್ರಾ ಕೂಡಾ ನೆಕ್ಸ್ಟ್ ಜನರೇಷನ್ ಕಾರು ಮಾದರಿಗಳ ಜೊತೆಗೆ ಫೇಸ್‌ಲಿಫ್ಟ್ ಮಾದರಿಯನ್ನು ಸಹ ಹೊಸ ನಿಯಮಕ್ಕೆ ಅನುಗುಣವಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಹೀಗಾಗಿ ಮುಂಬರುವ ಒಂದು ವರ್ಷದೊಳಗೆ ನೆಕ್ಸ್ ಜನರೇಷನ್ ಮಾದರಿಗಳಾದ ಎಕ್ಸ್‌ಯುವಿ500, ಥಾರ್, ಬೊಲೆರೊ, ಸ್ಕಾರ್ಪಿಯೋ, ಫೇಸ್‌ಲಿಫ್ಟ್ ಮಾದರಿಗಳಾದ ಎಕ್ಸ್‌ಯುವಿ300, ಟಿಯುವಿ300 ಪ್ಲಸ್ ಮತ್ತು ಹೊಸದಾಗಿ ಎಕ್ಸ್‌ಯುವಿ300 7 ಸೀಟರ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಇದಲ್ಲದೇ ಫೋರ್ಡ್ ಜೊತೆ ಹೊಸ ಕಾರುಗಳ ಅಭಿವೃದ್ದಿ ಮತ್ತು ಮಾರಾಟಕ್ಕೆ ಕೈಜೋಡಿಸಿರುವ ಮಹೀಂದ್ರಾ ಸಂಸ್ಥೆಯು ಸಹಭಾಗಿತ್ವ ಯೋಜನೆಯಲ್ಲಿ ಆಸ್ಪೈರ್ ಎಲೆಕ್ಟ್ರಿಕ್ ಮತ್ತು ಎಕ್ಸ್‌ಯುವಿ100 ಎಲೆಕ್ಟ್ರಿಕ್ ಕಾರುಗಳನ್ನು 2020ರ ಮಧ್ಯಂತರದಲ್ಲಿ ಬಿಡುಗಡೆ ಮಾಡಲಿದೆ.

ಸದ್ಯ ದೇಶಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಹೊಸ ವಾಹನಗಳ ಎಂಜಿನ್ ತಂತ್ರಜ್ಞಾನದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೆಲವು ಕಡ್ಡಾಯ ನಿಯಮಗಳನ್ನು ಜಾರಿ ತಂದಿರುವುದು ಮಹೀಂದ್ರಾ ನೆಕ್ಸ್ಟ್ ಜನರೇಷನ್ ಮತ್ತು ಫೇಸ್‌ಲಿಫ್ಟ್ ಭಾರೀ ಬದಲಾವಣೆ ಹೊಂದಿರಲಿವೆ.

ಭಾರತದಲ್ಲಿ ಸದ್ಯ ಬಿಎಸ್-4(ಭಾರತ್ ಸ್ಟೇಜ್) ವೈಶಿಷ್ಟ್ಯತೆಯುಳ್ಳ ವಾಹನಗಳು ಮಾತ್ರ ಮಾರಾಟಗೊಳ್ಳುತ್ತಿದ್ದು, ಇದು ಕೂಡಾ ಮುಂಬರುವ 2020ರ ಏಪ್ರಿಲ್ 1ರಿಂದ ನಿಷೇಧಗೊಂಡು ಬಿಎಸ್-6 ನಿಯಮವು ಜಾರಿಗೆ ಬರಲಿದೆ. ಹೀಗಾಗಿ ಕೇಂದ್ರ ಸರ್ಕಾರದ ಹೊಸ ನಿಯಮದಂತೆ ಮಹೀಂದ್ರಾ ಸೇರಿದಂತೆ ಬಹುತೇಕ ಸಂಸ್ಥೆಗಳು 2019ರ ಕೊನೆಯಲ್ಲಿ ಇಲ್ಲವೇ 2020ರ ಆರಂಭದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಹೊಸ ವಾಹನಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.

ಇದರಲ್ಲಿ ಮಹೀಂದ್ರಾ ನಿರ್ಮಾಣದ ಫೇಸ್‌ಲಿಫ್ಟ್ ಮಾದರಿಗಳಾದ ಟಿಯುವಿ300 ಪ್ಲಸ್, ಎಕ್ಸ್‌ಯುವಿ300, ನ್ಯೂ ಜನರೇಷನ್ ಕಾರು ಮಾದರಿಗಳಾದ ಸ್ಕಾರ್ಪಿಯೋ, ಎಕ್ಸ್‌ಯುವಿ500, ಥಾರ್ ಕಾರುಗಳು ಹೊಸ ಮಾದರಿಯ ಬಿಎಸ್-6 ಎಂಜಿನ್ ಸೌಲಭ್ಯದೊಂದಿಗೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಮಾಹಿತಿಗಳ ಪ್ರಕಾರ ಮಹೀಂದ್ರಾ ಬಿಎಸ್-6 ಕಾರುಗಳು ಮುಂದಿನ ನಾಲ್ಕೈದು ತಿಂಗಳ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

ಬಿಎಸ್-6 ಪ್ರಮುಖ ಕಾರುಗಳ ಬಿಡುಗಡೆಯ ನಂತರವಷ್ಟೇ ಎಕ್ಸ್‌ಯುವಿ300 7 ಸೀಟರ್ ಕೂಡಾ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದ್ದು, ಹೊಸ ಕಾರನ್ನು ಎಸ್204 ಹೆಸರಿನಲ್ಲಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೂ ಚಾಲನೆ ನೀಡಿದೆ.

ಇನ್ನು ಬಿಎಸ್-6 ವೈಶಿಷ್ಟ್ಯತೆಗಳಿಂದಾಗಿ ಹೊಸ ಕಾರುಗಳಲ್ಲಿ ಹಲವಾರು ಹೊಸ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300, ಟಿಯುವಿ300 ಪ್ಲಸ್ ಮತ್ತು ಥಾರ್ ಕಾರುಗಳಲ್ಲಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್ ಸಿಸ್ಟಂ, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯಗಳಿವೆ.

ಹಾಗೆಯೇ 6 ಏರ್‌ಬ್ಯಾಗ್‌ಗಳು(ಟಾಪ್ ಎಂಡ್‌ಗಳಲ್ಲಿ), ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್‌ಗಳಲ್ಲಿ ಸನ್‌ರೂಫ್, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್, ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟು ಮತ್ತು ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ನೀಡಬಲ್ಲ ಟಚ್ ಸ್ಕ್ರಿನ್ ಇನ್ಪೋಟೈನ್‌ಟೆಂಟ್ ಸಿಸ್ಟಂ ಜೋಡಣೆ ಮಾಡಲಾಗಿದೆ.

ಇದರೊಂದಿಗೆ ಕಾರು ಕಳ್ಳತನಗಳಿಗೆ ಬ್ರೇಕ್ ಹಾಕಲು ಜಿಯೋ ಫೆನ್ಸ್ ಅಲರ್ಟ್ ಸೇರಿದಂತೆ ಸೆಂಟರ್ ಲಾಕಿಂಗ್ ಸಿಸ್ಟಂ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಒಟ್ಟಿನಲ್ಲಿ ಪ್ರಯಾಣಿಕರ ಸುರಕ್ಷೆತೆಗಾಗಿ ಗರಿಷ್ಠ ಮಟ್ಟದಲ್ಲಿ ಸುರಕ್ಷಾ ಸೌಲಭ್ಯ ಗಳನ್ನು ಅಳವಡಿಸಿರುವುದೇ ಹೊಸ ಕಾರುಗಳ ಪ್ರಮುಖ ಆಕರ್ಷಣೆಯಾಗಲಿದೆ.

ಅದಕ್ಕಿಂತಲೂ ಮುಖ್ಯವಾಗಿ ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300, ಟಿಯುವಿ300 ಪ್ಲಸ್ ಮತ್ತು ಥಾರ್ ನ್ಯೂ ಜನರೇಷನ್ ಕಾರುಗಳಲ್ಲಿ ಬಿಎಸ್-6 ಎಂಜಿನ್ ಅಳವಡಿಸಿರುವುದು ಮಾಲಿನ್ಯ ತಡೆಯುವಲ್ಲಿ ಸಾಕಷ್ಟು ಸಹಕಾರಿಯಾಗಲಿದ್ದು, ಶೇ.25ರಷ್ಚು ಹೊಗೆ ಉಗುಳುವ ಪ್ರಮಾಣ ಕಡಿಮೆಯಾಗಿದ್ದಲ್ಲಿ ಶೇ. 10ರಷ್ಟು ಮೈಲೇಜ್ ಪ್ರಮಾಣದಲ್ಲೂ ಏರಿಕೆಯಾಗಲಿದೆ.

ಇದರೊಂದಿಗೆ ಹೊಸ ಕಾರುಗಳ ಬೆಲೆಯಲ್ಲೂ ತುಸು ಏರಿಕೆಯಾಗಲಿದ್ದು, ಬಿಎಸ್-4 ಕಾರುಗಳ ಬೆಲೆಗಳಿಂತಲೂ ಬಿಎಸ್-6 ಕಾರುಗಳ ಬೆಲೆಯು ತಾಂತ್ರಿಕ ಸೌಲಭ್ಯಗಳ ಅಳವಡಿಕೆಯ ಆಧಾರದ ಮೇಲೆ ರೂ. 1.50 ಲಕ್ಷದಿಂದ ರೂ.2.50 ಲಕ್ಷದ ತನಕ ಹೆಚ್ಚಿನ ಬೆಲೆ ಪಡೆದುಕೊಳ್ಳಬಹುದು ಎಂದು ನೀರಿಕ್ಷಿಸಲಾಗಿದೆ.


Click it and Unblock the Notifications








