ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಸಿಯಾಜ್
ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ಎಂಜಿನ್ ಕಾರುಗಳ ಅಭಿವೃದ್ಧಿ ಮೇಲೆ ಹೆಚ್ಚಿನ ಗಮನಹರಿಸುತ್ತಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆ ಅನುಸಾರವಾಗಿ ಈಗಾಗಲೇ ಬಿಎಸ್-6 ಎಂಜಿನ್ ಪ್ರೇರಿತ ಆಲ್ಟೊ 800, ವ್ಯಾಗನ್ಆರ್, ಸ್ವಿಫ್ಟ್, ಡಿಜೈರ್, ಬಲೆನೊ, ಎರ್ಟಿಗಾ ಪೆಟ್ರೋಲ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ಇದೀಗ ಸೆಡಾನ್ ಆವೃತ್ತಿಯಾದ ಸಿಯಾಜ್ ಮಾದರಿಯಲ್ಲೂ ಕೂಡಾ ಬಿಎಸ್-6 ಪೆಟ್ರೋಲ್ ಮಾದರಿಯನ್ನು ಇದೇ ತಿಂಗಾಳಾಂತ್ಯಕ್ಕೆ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಕೇಂದ್ರ ಸರ್ಕಾರವು ಹೆಚ್ಚುತ್ತಿರುವ ಮಾಲಿನ್ಯವನ್ನು ತಗ್ಗಿಸಲು 2020ರ ಏಪ್ರಿಲ್ 1ರಿಂದ ಬಿಎಸ್-4 ನಿಯಮವನ್ನು ತೆಗೆದುಹಾಕಿ ಬಿಎಸ್-6 ವೈಶಿಷ್ಟ್ಯತೆಯ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಕಡ್ಡಾಯಗೊಳಿಸಲು ಯೋಜನೆ ರೂಪಿಸಿದ್ದು, ಹೊಸ ನಿಯಮವನ್ನು ಪಾಲಿಸಲು ಸಾಧ್ಯವಾಗದ ಬಹುತೇಕ ಕಾರು ಮಾದರಿಗಳು ಮಾರುಕಟ್ಟೆಯಿಂದ ನಿರ್ಗಮಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮಾರುತಿ ಸುಜುಕಿಯು ಹೊಸ ನಿಯಮ ಜಾರಿಗೂ ಮುನ್ನವೇ ಬಿಎಸ್-6 ಎಂಜಿನ್ ಪ್ರೇರಿತ ಪೆಟ್ರೋಲ್ ಮಾದರಿಗಳ ಮಾರಾಟಕ್ಕೆ ಚಾಲನೆ ನೀಡಿದೆ.

ಇದೀಗ ಸೆಡಾನ್ ಆವೃತ್ತಿಯಾದ ಸಿಯಾಜ್ ಮಾದರಿಯಲ್ಲೂ ಕೂಡಾ ಬಿಎಸ್-6 ಎಂಜಿನ್ ಪ್ರೇರಿತ ಪೆಟ್ರೋಲ್ ವರ್ಷನ್ ಬಿಡುಗಡೆ ಮಾಡುವ ಸುಳಿವು ನೀಡಿದ್ದು, 2020ರ ಏಪ್ರಿಲ್ ನಂತರ ಮಾರುತಿ ಸುಜುಕಿಯು ಡೀಸೆಲ್ ಎಂಜಿನ್‌ಗಳ ಮಾರಾಟವನ್ನು ಸ್ಥಗಿತಗೊಳಿಸುವುದು ಬಹುತೇಕ ಖಚಿತವಾಗಿದೆ.

ಹೀಗಾಗಿಯೇ ಸದ್ಯ ಬಿಎಸ್-6 ಪೆಟ್ರೋಲ್ ಎಂಜಿನ್‌ಗಳನ್ನು ಮಾತ್ರವೇ ತನ್ನ ಜನಪ್ರಿಯ ಕಾರುಗಳಲ್ಲಿ ಪರಿಚಯಿಸುತ್ತಿರುವ ಮಾರುತಿ ಸುಜುಕಿಯು, ಡೀಸೆಲ್ ಎಂಜಿನ್‌ಗಳಿಗೆ ಬದಲಾಗಿ ಪೆಟ್ರೋಲ್ ಹೈಬ್ರಿಡ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ವರ್ಷನ್ ಕಾರುಗಳ ಮೇಲೆ ಹೆಚ್ಚು ಗಮನಹರಿಸಿದೆ.

ಮಾರುತಿ ಸುಜುಕಿಯು ಸದ್ಯ ಡೀಸೆಲ್ ಎಂಜಿನ್ ಕಾರುಗಳ ಮಾರಾಟದಲ್ಲಿ ಭಾರೀ ಜನಪ್ರಿಯತೆ ಹೊಂದಿದ್ದರೂ ಸಹ ಬಿಎಸ್-6 ವೈಶಿಷ್ಟ್ಯತೆಗಳಿಗೆ ಅನುಗುಣವಾಗಿ ಉನ್ನತಿಕರಿಸುವುದು ವೆಚ್ಚದಾಯಕವಾಗಿ ಪರಿಣಮಿಸಿದೆ. ಇದರಿಂದಾಗಿಯೇ ಡೀಸೆಲ್ ಕಾರುಗಳನ್ನು ಬಿಎಸ್-6 ವೈಶಿಷ್ಟ್ಯತೆಗಳೊಂದಿಗೆ ಉನ್ನತಿಕರಿಸುವ ಯೋಜನೆ ಕೈಬಿಟ್ಟಿದ್ದು, 2020ರ ಮಾರ್ಚ್ 31ರ ಮಾತ್ರವೇ ಡೀಸೆಲ್ ಎಂಜಿನ್ ಕಾರುಗಳನ್ನು ಮಾರಾಟಕ್ಕೆ ನಿರ್ಧರಿಸಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಮಾರುತಿ ಸುಜುಕಿಯು ಒಂದು ವೇಳೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ಗೆ ಉನ್ನಕರಿಸಿದರೂ ಸಹ ಕಾರುಗಳ ಬೆಲೆಯು ಕನಿಷ್ಠ ರೂ.80 ಸಾವಿರದಿಂದ ರೂ.1.50 ಲಕ್ಷ ತನಕ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಒಂದು ವೇಳೆ ದುಬಾರಿ ಬೆಲೆಯಲ್ಲಿ ಬಿಎಸ್-6 ಡೀಸೆಲ್ ಎಂಜಿನ್ ಕಾರುಗಳನ್ನು ಮಾರಾಟಕ್ಕೆ ಚಾಲನೆ ನೀಡಿದರೂ ಸಹ ಹೊಸ ಯೋಜನೆಯು ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುವುದನ್ನು ಅರಿತಿರುವ ಮಾರುತಿ ಸುಜುಕಿಯು ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯಿಂದ ಡೀಸೆಲ್ ಎಂಜಿನ್‌ಗಳಿಗೆ ಸಮನಾದ ಸ್ಮಾರ್ಟ್ ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳ ಮಾರಾಟಕ್ಕೆ ಹೆಚ್ಚು ಒತ್ತು ನೀಡುತ್ತಿದೆ.

ಹೀಗೆ ಕ್ರಮೇಣವಾಗಿ ಮಾರುತಿ ಸುಜುಕಿ ಸಂಸ್ಥೆಯು ಡೀಸೆಲ್ ಕಾರುಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವ ಯೋಜನೆಯಲ್ಲಿದ್ದು, ಮುಂಬರುವ 2020ರ ಮಾರ್ಚ್ ಹೊತ್ತಿಗೆ ಸಂಪೂರ್ಣವಾಗಿ ಡೀಸೆಲ್ ಕಾರುಗಳನ್ನು ಬಂದ್ ಮಾಡುವುದಾಗಿ ಈಗಾಗಲೇ ಅಧಿಕೃವಾಗಿಯೇ ಹೇಳಿಕೊಂಡಿದೆ.

ಸದ್ಯ ಬಿಎಸ್-6 ವೈಶಿಷ್ಟ್ಯತೆಗಳೊಂದಿಗೆ ರಸ್ತೆಗಿಳಿಯುತ್ತಿರುವ ಮಾರುತಿ ಸುಜುಕಿ ಪೆಟ್ರೋಲ್ ಕಾರುಗಳು ಬಿಎಸ್-4 ಕಾರುಗಳಿಂತ ಬೆಲೆಯಲ್ಲಿ ರೂ.15 ಸಾವಿರದಿಂದ ರೂ.20 ಸಾವಿರ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳುತ್ತಿದ್ದು, ಅದೇ ಡೀಸೆಲ್ ಕಾರುಗಳು ಬಿಎಸ್-6 ವೈಶಿಷ್ಯತೆ ಹೊಂದಿದ್ದಲ್ಲಿ ರೂ.80 ಸಾವಿರದಿಂದ ರೂ.1.50 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳುತ್ತವೆ. ಯಾಕೆಂದ್ರೆ ಮಾಲಿನ್ಯ ಉತ್ಪಾದನೆಯಲ್ಲಿ ಹೆಚ್ಚಿನ ಪಾಲು ಹೊಂದಿರುವ ಡೀಸೆಲ್ ಎಂಜಿನ್‌ಗಳಲ್ಲಿ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಸುಧಾರಿತ ತಂತ್ರಜ್ಞಾನ ಬಳಕೆ ಮಾಡಬೇಕಿರುವುದೇ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಆದ್ರೆ ಮಾರುತಿ ಸುಜುಕಿಗೆ ಸೆಡ್ಡು ಹೊಡೆಯಲು ಸಜ್ಜಾಗಿರುವ ಕೆಲವು ಆಟೋ ಉತ್ಪಾದನಾ ಸಂಸ್ಥೆಗಳು ಬೆಲೆ ಹೆಚ್ಚಳವಾದರೂ ಪರವಾಗಿಲ್ಲ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನೊಂದಿಗೆ ಉನ್ನತಿಕರಿಸಿ ಮಾರಾಟವನ್ನು ಮುಂದುವರಿಸುವುದಾಗಿ ಹೇಳಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಇನ್ನು ಯಾವೆಲ್ಲಾ ಬದಲಾವಣೆಗಳಾಗುತ್ತೊ ಕಾಯ್ದುನೋಡಬೇಕಿದೆ.


Click it and Unblock the Notifications