ಜೂನ್ ಅವಧಿಯ ಹೊಸ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿಗೆ ಶಾಕ್..!
ದೇಶದ ನಂ.1 ಕಾರು ಮಾರಾಟ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯು ಒಟ್ಟು ಕಾರು ಮಾರಾಟ ಪ್ರಮಾಣದಲ್ಲಿ ಶೇ. 42 ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದ್ದು, ವಿವಿಧ ಕಾರು ಉತ್ಪನ್ನಗಳ ಮೂಲಕ ಸಾಕಷ್ಟು ಮುನ್ನಡೆ ಕಾಯ್ದುಕೊಂಡಿದೆ. ಆದರೆ, ಜೂನ್ ಅವಧಿಯಲ್ಲಿ ಕಾರು ಮಾರಾಟವು 2018ರ ಜೂನ್ ಅವಧಿಗಿಂತ ಶೇ. 16.7ರಷ್ಟು ಕುಸಿತ ಕಂಡಿದ್ದು, ವ್ಯಾಗನ್ಆರ್ ಮತ್ತು ಆಲ್ಟೋ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ.

2018ರ ಜೂನ್ ಅವಧಿಯಲ್ಲಿ 1,35,662 ಪ್ರಯಾಣಿಕ ಕಾರು ಮತ್ತು ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದ್ದ ಮಾರುತಿ ಸುಜುಕಿ ಸಂಸ್ಥೆಯು 2019ರ ಜೂನ್ ಅವಧಿಯಲ್ಲಿ 1,13,031 ವಾಹನ ಮಾರಾಟ ಮೂಲಕ ಶೇ. 16.7 ರಷ್ಟು ಕುಸಿತ ದಾಖಲಿಸಿದ್ದು, ಇದರಲ್ಲಿ 2018ರ ಆಲ್ಟೋ ಮತ್ತು ವ್ಯಾಗನ್‌ಆರ್ ಕಾರುಗಳ ಮಾರಾಟದಲ್ಲಿ ಶೇ. 36.2ರಷ್ಟು ಕುಸಿತದಿಂದಾಗಿ ಗರಿಷ್ಠ ಪ್ರಮಾಣದ ಹಿನ್ನಡೆಯಾಗಿದೆ. ಇನ್ನುಳಿದಂತೆ ಹೊಸ ವ್ಯಾಗನ್‌ಆರ್, ಸೆಲೆರಿಯೊ, ಇಗ್ನಿಸ್, ಸ್ವಿಫ್ಟ್, ಬಲೆನೊ ಮತ್ತು ಡಿಜೈರ್ ಮಾರಾಟದಲ್ಲಿ ಶೇ.12.1 ರಷ್ಟು ಇಳಿಕೆಯಾಗಿದ್ದು, ಜನಪ್ರಿಯ ಕಾರುಗಳ ಮಾರಾಟದಲ್ಲೇ ಎರಡಂಕಿ ಕುಸಿತ ಕಂಡಿದೆ.

ಇನ್ನು ಅಚ್ಚರಿ ಎಂಬಂತೆ ಮಾರುತಿ ಸುಜುಕಿ ಸಂಸ್ಥೆಯು ಪ್ರಯಾಣಿಕರ ಕಾರು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದರೆ, ವಾಣಿಜ್ಯ ವಾಹನಗಳ ಮಾರಾಟದಲ್ಲಿ ಮುನ್ನಡೆ ಸಾಧಿಸಿದ್ದು, ಜೂನ್ ಅವಧಿಯಲ್ಲಿ ಕಳೆದ ವರ್ಷಕ್ಕಿಂತ ಶೇ. 24ರಷ್ಟು ಸೂಪರ್ ಕ್ಯಾರಿ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ.

ಹಾಗೆಯೇ 2019-20ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಾರುತಿ ಸುಜುಕಿ ಸಂಸ್ಥೆಯು 3,63,417 ಕಾರುಗಳ ಮಾರಾಟ ಮಾಡುವ ಮೂಲಕ ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಗಿಂತ ಶೇ. 20.8ರಷ್ಟು ಇಳಿಕೆ ಕಂಡುಬಂದಿದ್ದು, ಕಳೆದ ವರ್ಷ ಇದೇ ಅವಧಿಯ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 4,58,967 ಕಾರುಗಳನ್ನು ಮಾರಾಟ ಮಾಡಿತ್ತು.

ಜೂನ್ ಅವಧಿಗಿಂತ ಕಳೆದ ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಮಾರಾಟವಾಗದೆ ಉಳಿದ ಸ್ಟಾಕ್ ಪ್ರಮಾಣವು ಸಾಕಷ್ಟು ಪ್ರಮಾಣದ ಆರ್ಥಿಕ ಹಿನ್ನಡೆಗೆ ಕಾರಣವಾಗಿದೆ. ಇದರಿಂದಲೇ ಕೆಲ ದಿನಗಳ ಮಟ್ಟಿಗೆ ಹೊಸ ಕಾರುಗಳ ಉತ್ಪಾದನಾ ಪ್ರಕ್ರಿಯೆಯನ್ನು ಬಂದ್ ಮಾಡಿದ್ದ ಮಾರುತಿ ಸುಜುಕಿ ಸಂಸ್ಥೆಯು ಮುಂಬರುವ ದಿನಗಳಲ್ಲಿ ಚೇತರಿಕೆ ಕಾಣುವ ನೀರಿಕ್ಷೆಯಲ್ಲಿದೆ.
ಇನ್ನು ದೇಶಾದ್ಯಂತ 2020ರ ಏಪ್ರಿಲ್ 1ರಿಂದಲೇ ಬಿಎಸ್-6 ಪ್ರೇರಿತ ವಾಹನಗಳ ಮಾರಾಟವನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಕೇಂದ್ರ ಸರ್ಕಾರದ ಡೆಡ್‌ಲೈನ್‌ಗೂ ಮುನ್ನವೇ ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಕಾರುಗಳನ್ನು ಬಿಎಸ್-4ನಿಂದ ಬಿಎಸ್-6 ವೈಶಿಷ್ಟ್ಯತೆಗೆ ಉನ್ನತಿಕರಿಸಿ ಬಿಡುಗಡೆ ಮಾಡುತ್ತಿದೆ.

ಕಳೆದ ತಿಂಗಳ ಹಿಂದಷ್ಟೇ ಬಿಎಸ್-6 ಪ್ರೇರಿತ ಬಲೆನೊ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಮಾರುತಿ ಸುಜುಕಿ ಸಂಸ್ಥೆಯು ವಾರದ ಹಿಂದಷ್ಟೇ ಸ್ವಿಫ್ಟ್ ಮತ್ತು ವ್ಯಾಗನ್‌ಆರ್ ಕಾರುಗಳ ಪೆಟ್ರೋಲ್ ಮಾದರಿಯನ್ನು ಹೊಸ ನಿಯಮಗಳಿಗೆ ಉನ್ನತಿಕರಿಸಿ ಬಿಡುಗಡೆ ಮಾಡಿತ್ತು. ಇದೀಗ ಡಿಜೈರ್ ಕಂಪ್ಯಾಕ್ಟ್ ಸೆಡಾನ್ ಪೆಟ್ರೋಲ್ ಮಾದರಿ ಕೂಡಾ ಹೊಸ ನಿಯಮಗಳಿಗೆ ಅನುಗುಣವಾಗಿ ಬಿಡುಗಡೆಯಾಗಿದೆ.

ಹೊಸ ನಿಯಮದಿಂದಾಗಿ ಸ್ವಿಫ್ಟ್, ವ್ಯಾಗನ್ಆರ್, ಡಿಜೈರ್ ಪೆಟ್ರೋಲ್ ಮಾದರಿಗಳಲ್ಲಿ ಕೆಲವು ತಾಂತ್ರಿಕ ಬದಲಾವಣೆಗಳಾಗಿದ್ದು, ಸುಧಾರಿತ ಎಂಜಿನ್ ಜೊತೆಗೆ ಕೆಲವು ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯವಾಗಿ ಜೋಡಣೆ ಮಾಡಲಾಗಿದೆ. ಹೀಗಾಗಿ ಈ ಹಿಂದಿಗಿಂತಲೂ ಉತ್ತಮ ಪರ್ಫಾಮೆನ್ಸ್ ಪಡೆದುಕೊಂಡಿರುವ ಹೊಸ ಬಿಎಸ್-6 ಕಾರುಗಳಲ್ಲಿ ಡ್ಯುಯಲ್ ಚಾನೆಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಹೈ ಸ್ಪೀಡ್ ಅಲರ್ಟ್ ಸೇರಿದಂತೆ ಕೆಲವು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಜೊತೆಗೆ ಹೊಸ ಎಂಜಿನ್ ಮಾದರಿಯು ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಶೇ.25ರಷ್ಟು ಕಡಿತವಾಗಿದ್ದು, ಈ ಹಿಂದಿಗಿಂತಲೂ ಶೇ.10ರಿಂದ ಶೇ.15 ರಷ್ಟು ಹೆಚ್ಚು ಮೈಲೇಜ್ ನೀಡುವ ಮೂಲಕ ಮತ್ತಷ್ಟು ಕಾರು ಪ್ರಿಯರನ್ನು ಸೆಳೆಯುವ ತವಕದಲ್ಲಿದೆ.

ಬಿಎಸ್-6 ನಿಯಮದಿಂದಾಗಿ ಹೊಸ ಕಾರುಗಳ ಬೆಲೆಯೂ ಕೂಡಾ ತುಸು ದುಬಾರಿಯಾಗಿದ್ದು, ಸುಧಾರಿತ ಎಂಜಿನ್ ಮತ್ತು ಕೆಲವು ಸ್ಟ್ಯಾಂಡರ್ಡ್ ಸುರಕ್ಷಾ ಸೌಲಭ್ಯಗಳನ್ನು ಹೊರತುಪಡಿಸಿ ಯಾವುದೇ ಬದಲಾವಣೆಗಳನ್ನು ತರಲಾಗಿಲ್ಲ.


Click it and Unblock the Notifications