ಮೂರನೇ ದರ್ಜೆಯ ನಗರಗಳಲ್ಲೂ ತಲೆ ಎತ್ತಲಿವೆ ನೆಕ್ಸಾ ಶೋರೂಂಗಳು..!
ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದು, ಪ್ರತಿಸ್ಪರ್ಧಿ ಕಾರು ಉತ್ಪಾದನಾ ಸಂಸ್ಥೆಗಳಿಗೆ ಮತ್ತಷ್ಟು ಪೈಪೋಟಿ ನೀಡುವ ನಿಟ್ಟಿನಲ್ಲಿ ನೆಕ್ಸಾ ಶೋರೂಂಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಸದ್ಯ ಮಾರುತಿ ಸುಜುಕಿ ಸಂಸ್ಥೆಯು ಎರಡು ಹಂತದಲ್ಲಿ ಕಾರು ಮಾರಾಟ ಪ್ರಕ್ರಿಯೆಯನ್ನು ಹೊಂದಿದ್ದು, ಅರೆನಾ ಶೋರೂಂಗಳ ಮೂಲಕ ಸಾಮಾನ್ಯ ಕಾರುಗಳನ್ನು ಮತ್ತು ಪ್ರೀಮಿಯಂ ಕಾರುಗಳನ್ನು ನೆಕ್ಸಾ ಶೋರೂಂ ಮೂಲಕ ಕಾರು ಮಾರಾಟವನ್ನು ಮಾಡುತ್ತಿದೆ. ಇದರಲ್ಲಿ ನೆಕ್ಸಾ ಶೋರೂಂಗಳನ್ನು ಹೆಚ್ಚಿಸಲು ನಿರ್ಧರಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರೀಮಿಯಂ ಕಾರುಗಳ ಮಾರಾಟ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ.

ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಟೊಯೊಟಾ ಜೊತೆಗೂಡಿ ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ಕಾರುಗಳ ಉತ್ಪಾದನೆಯ ಜೊತೆಗೆ ಕಾರುಗಳ ಮಾರಾಟಕ್ಕೂ ಪರಸ್ಪರ ಸಹಕಾರಿಯಾಗಲಿವೆ.

ಹೊಸ ಯೋಜನೆಯಿಂದಾಗಿ ಇನ್ಮುಂದೆ ಕಾರು ಖರೀದಿದಾರರು ಮಾರುತಿ ಸುಜುಕಿ ಶೋರೂಂಗಳಲ್ಲಿ ಟೊಯೊಟಾ ನಿರ್ಮಾಣದ ಕಾರುಗಳನ್ನು ಮತ್ತು ಟೊಯೊಟಾ ಶೋರೂಂಗಳಲ್ಲಿ ಮಾರುತಿ ಸುಜುಕಿ ನಿರ್ಮಾಣದ ರೀ ಬಾಡ್ಜ್ ಕಾರುಗಳನ್ನು ಖರೀದಿಸಬಹುದಾಗಿದೆ.

ಇದಕ್ಕಾಗಿ ಟೊಯೊಟಾ ಬಿಡದಿ ಘಟಕದ ವಿಸ್ತರಣೆಗಾಗಿ ಬರೋಬ್ಬರಿ 7 ಸಾವಿರ ಕೋಟಿ ಹೂಡಿಕೆ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು ಹೊಸ ಕಾರುಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ದೇಶಾದ್ಯಂತ ಪ್ರತಿ ನಗರಗಳಲ್ಲೂ ಕಾರು ಮಾರಾಟ ಮಳಿಗೆಗಳನ್ನು ತೆರೆಯುವ ಉದ್ದೇಶ ಹೊಂದಿದೆ. ಇವುಗಳಲ್ಲಿ ಅರೆನಾ ಕಾರು ಮಾರಾಟ ಮಳಿಗೆಗಳು ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿದ್ದು, ಪ್ರೀಮಿಯಂ ಕಾರುಗಳಿಗಾಗಿ ನೆಕ್ಸಾ ಶೋರೂಂಗಳನ್ನು ಹೆಚ್ಚಿಸುವ ಗುರಿಹೊಂದಿದೆ.

ಈ ಮೂಲಕ ಮೆಟ್ರೋ ನಗರಗಳಲ್ಲಿ ಮಾತ್ರವಲ್ಲದೇ 2ನೇ ಮತ್ತು 3ನೇ ದರ್ಜೆಯ ನಗರಗಳಲ್ಲೂ ಸುಲಭವಾಗಿ ಪ್ರೀಮಿಯಂ ಕಾರು ಖರೀದಿಗೆ ಅನುಕೂಲಕವಾಗುವಂತೆ ಹೊಸ ಡೀಲರ್ಸ್‌ಗಳನ್ನು ತೆರೆಯಲು ನಿಶ್ಚಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರತಿಸ್ಪರ್ಧಿ ಹ್ಯುಂಡೈಗೆ ಮತ್ತಷ್ಟು ಪೈಪೋಟಿ ನೀಡಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಅರೆನಾ ಮಾರಾಟ ಮಳಿಗೆಯಲ್ಲಿ ಸ್ವಿಫ್ಟ್, ಆಲ್ಟೋ, ಆಲ್ಟೋ ಕೆ10, ವ್ಯಾಗನ್ಆರ್, ಸೆಲೆರಿಯೊ, ಸೆಲೆರಿಯೊ ಎಕ್ಸ್, ಡಿಜೈರ್, ಎರ್ಟಿಗಾ, ಬ್ರೆಝಾ, ಜಿಪ್ಸಿ, ಓಮ್ನಿ ಮತ್ತು ಇಕೋ ವಾಹನಗಳನ್ನು ಮಾರಾಟ ಮಾಡುತ್ತಿದೆ.

ಹಾಗೆಯೇ ನೆಕ್ಸಾ ಮಾರಾಟ ಮಳಿಗೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿರುವ ಬಲೆನೊ, ಎಸ್ ಕ್ರಾಸ್ ಮತ್ತು ಸಿಯಾಜ್ ಕಾರುಗಳನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, ಪ್ರೀಮಿಯಂ ಕಾರುಗಳ ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕೈಗೊಳ್ಳುತ್ತಿದೆ.
MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಇದರಿಂದ ಗ್ರಾಹಕರು ಹೊಸ ಕಾರುಗಳಿಗೆ ಬುಕ್ಕಿಂಗ್ ಮಾಡಿದ ನಂತರ ಕಾಯುವಿಕೆಯ ಅವಧಿಯು ತಗ್ಗಲಿದ್ದು, ಮೆಟ್ರೋ ನಗರಗಳಲ್ಲಿ ಮಾತ್ರವಲ್ಲ 2ನೇ ಮತ್ತು 3ನೇ ದರ್ಜೆಯ ವಾಸಿಸುವ ಕಾರು ಖರೀದಿದಾರರಿಗೂ ಪ್ರೀಮಿಯಂ ಕಾರುಗಳ ಬಗೆಗೆ ಹೆಚ್ಚಿನ ಆಸಕ್ತಿ ಹುಟ್ಟು ಹಾಕುವಂತೆ ಮಾಡಲು ಇದು ಪೂರಕವಾಗಲಿದೆ.


Click it and Unblock the Notifications