ಹೋಂಡಾ ಸಿವಿಕ್ ಸೆಡಾನ್ ಖರೀದಿ ಮೇಲೆ ಎರಡೂವರೆ ಲಕ್ಷ ಡಿಸ್ಕೌಂಟ್ ಘೋಷಣೆ
ಕಳೆದ ಮಾರ್ಚ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮರು ಬಿಡುಗಡೆಯಾಗಿದ್ದ 10ನೇ ತಲೆಮಾರಿನ ಹೋಂಡಾ ಸಿವಿಕ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದ್ದು, ಗರಿಷ್ಠ ರೂ.2.50 ಲಕ್ಷದ ತನಕ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಸಿವಿಕ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.17.94 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.22.35 ಲಕ್ಷ ಬೆಲೆ ಹೊಂದಿದ್ದು, ವಿವಿಧ ವೆರಿಯೆಂಟ್‌ಗಳ ಮೇಲೆ ರೂ. 2 ಲಕ್ಷದಿಂದ ರೂ.2.50 ಲಕ್ಷದ ತನಕ ಡಿಸ್ಕೌಂಟ್ ನೀಡಲಾಗುತ್ತಿದೆ. ಹೊಸ ಕಾರು ಮಾರಾಟ ಪ್ರಮಾಣದ ಇಳಿಕೆಯಿರುವ ಹಿನ್ನಲೆಯಲ್ಲಿ ಭರ್ಜರಿ ಡಿಸ್ಕೌಂಟ್‌ಗಳನ್ನು ನೀಡಲಾಗುತ್ತಿದ್ದು, ಕಾರು ಖರೀದಿಗೆ ಸುವರ್ಣಾವಕಾಶ ಎನ್ನಬಹುದು.

ಇನ್ನು ಹೊಸ ವಾಹನಗಳ ಮಾರಾಟದಲ್ಲಿ ಸತತ ನಷ್ಟ ಅನುಭವಿಸುತ್ತಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಕನಿಷ್ಠ ಮಟ್ಟದ ವಾಹನಗಳ ಮಾರಾಟಕ್ಕೂ ಪರದಾಟುವಂತಹ ಪರಿಸ್ಥಿತಿ ಎದುರಾಗಿದೆ. ಇದರಲ್ಲಿ ಹೋಂಡಾ ಕಾರ್ಸ್ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದ್ದು, ಕಾರುಗಳ ಮಾರಾಟವನ್ನು ಉತ್ತೇಜಿಸಲು ಭರ್ಜರಿ ಡಿಸ್ಕೌಂಟ್ ನೀಡುತ್ತಿವೆ.

ಹೊಸ ಹೊಸ ನಿಯಮಗಳ ಜಾರಿಯಿಂದಾಗಿ ಆಟೋ ಉದ್ಯಮದಲ್ಲಿ ಹೊಸ ವಾಹನ ಮಾರಾಟ ಪ್ರಕ್ರಿಯೆಯೂ ಮಂದಗತಿಯಲ್ಲಿ ಸಾಗಿದ್ದು, ಸ್ಟಾಕ್ ಪ್ರಮಾಣವು ಆಟೋ ಕಂಪನಿಗಳಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಹೀಗಾಗಿ ಗ್ರಾಹಕರನ್ನು ಸೆಳೆಯಲು ಭಾರೀ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡುತ್ತಿವೆ. ಕಳೆದ ಐದಾರು ತಿಂಗಳಿನಿಂದ ಹೊಸ ಕಾರು ಮಾರಾಟದಲ್ಲಿ ತೀವ್ರ ನಷ್ಟ ಅನುಭವಿಸುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಸಹ ಕಳೆದ 10 ವರ್ಷಗಳಲ್ಲೇ ಮೊದಲ ಬಾರಿಗೆ ಭಾರೀ ಹಿನ್ನಡೆ ಅನುಭವಿಸಿದೆ.

ಈ ಹಿನ್ನಲೆಯಲ್ಲಿ ಕಾರು ಮಾರಾಟ ಪ್ರಮಾಣವನ್ನು ಹೆಚ್ಚಿಸಲು ಸೆಪ್ಟೆಂಬರ್ ಅವಧಿಯಲ್ಲಿ ಆಯ್ದ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿರುವ ಹೋಂಡಾ ಸಂಸ್ಥೆಯು ಪ್ರತಿಸ್ಪರ್ಧಿ ಕಾರು ಸಂಸ್ಥೆಗಳಿಗೆ ಪೈಪೋಟಿ ನೀಡುವ ತವಕದಲ್ಲಿದೆ.

ಹೋಂಡಾ ತನ್ನ ಜನಪ್ರಿಯ ಪ್ರೀಮಿಯಂ ಕಾರು ಆವೃತ್ತಿಗಳಾದ ಸಿಆರ್-ವಿ, ಬಿಆರ್-ಬಿ, ಸಿಟಿ ಸೆಡಾನ್, ಜಾಝ್, ಡಬ್ಲ್ಯುಆರ್-ವಿ ಮತ್ತು ಅಮೇಜ್ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಕಾರು ಖರೀದಿದಾರರಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಹೋಂಡಾ ಸಂಸ್ಥೆಯ ಐಷಾರಾಮಿ ಕಾರು ಆವೃತ್ತಿಯಾದ ಸಿಆರ್-ವಿ ಎಸ್‌ಯುವಿ ಮೇಲೆ ಗರಿಷ್ಠ ರೂ.4 ಲಕ್ಷ ತನಕ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, 7-ಸೀಟರ್‌ನೊಂದಿಗೆ 2-0-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.28.33 ಲಕ್ಷ ಮತ್ತು ಟಾಪ್ ಮಾದರಿಗೆ ರೂ. 32.83 ಲಕ್ಷ ಬೆಲೆ ಹೊಂದಿದ್ದು, ಇದರಲ್ಲಿ ಪ್ರತಿ ಡೀಸೆಲ್ ವೆರಿಯೆಂಟ್ ಮೇಲೂ ರೂ.4 ಲಕ್ಷ ಡಿಸ್ಕೌಂಟ್ ಪಡೆಯಬಹುದಾಗಿದೆ.

7 ಸೀಟರ್ ಮಲ್ಟಿ ಪರ್ಪಸ್ ವೆಹಿಕಲ್ ಮಾದರಿಯಾಗಿರುವ ಬಿಆರ್-ವಿ ಖರೀದಿ ಮೇಲೆ ಹೋಂಡಾ ಸಂಸ್ಥೆಯು ರೂ.1.20 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಿದ್ದು, 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಬಿಆರ್-ವಿ ಖರೀದಿಗೆ ಲಭ್ಯವಿದೆ. ರೂ. 1.20 ಲಕ್ಷ ಡಿಸ್ಕೌಂಟ್ ಅಲ್ಲದೇ ಆಯ್ದ ಡೀಲರ್ಸ್‌ಗಳಲ್ಲಿ ಬಿಆರ್-ವಿ ಖರೀದಿ ಮೇಲೆ ರೂ.36 ಸಾವಿರ ಮೌಲ್ಯ ಆಕ್ಸೆರಿಸ್‌ಗಳನ್ನು ಸಹ ಉಚಿತವಾಗಿ ಪಡೆದುಕೊಳ್ಳಬಹುದು.

ಸಿ ಸೆಗ್ಮೆಂಟ್‌ನಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಸಿಟಿ ಸೆಡಾನ್ ಮಾದರಿಯ ಮೇಲೆ ಹೋಂಡಾ ಸಂಸ್ಥೆಯು ರೂ.70 ಸಾವಿರ ಡಿಸ್ಕೌಂಟ್ ಘೋಷಿಸಲಾಗಿದ್ದು, 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಿಟಿ ಕಾರು ಹೊಸ ಸುರಕ್ಷಾ ನೀತಿ ಅನುಸಾರವಾಗಿ ಇದೀಗ ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.


Click it and Unblock the Notifications