ಅಧಿಕ ಮೈಲೇಜ್ ಪ್ರೇರಿತ ಹೈಬ್ರಿಡ್ ಎಂಜಿನ್ ಪಡೆಯಲಿದೆ ನ್ಯೂ ಜನರೇಷನ್ ಹೋಂಡಾ ಸಿಟಿ
ದೇಶಿಯ ಮಾರುಕಟ್ಟೆ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೋಂಡಾ ಸಿಟಿ ನೆಕ್ಸ್ಟ್ ಜನರೇಷನ್ ಆವೃತ್ತಿಯು ಮೊದಲ ಹಂತವಾಗಿ ಇದೇ ತಿಂಗಳು 25ಕ್ಕೆ ಥೈಲ್ಯಾಂಡ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ತದನಂತರವಷ್ಟೇ ಭಾರತದಲ್ಲೂ ಬಿಡುಗಡೆಯಾಗಲಿರುವ ಹೊಸ ಕಾರು ಅಧಿಕ ಮೈಲೇಜ್ ಪ್ರೇರಿತ ಹೊಸ ಎಂಜಿನ್ ಆಯ್ಕೆ ಪಡೆದುಕೊಳ್ಳುತ್ತಿದೆ.

ಹೋಂಡಾ ಸಂಸ್ಥೆಯು ಭಾರತ ಸೇರಿದಂತೆ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಜನಪ್ರಿಯ ಸಿಟಿ ಸೆಡಾನ್ ಕಾರಿನ 5ನೇ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಅರಿಯಲು ಈಗಾಗಲೇ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಹೀಗಾಗಿ ಹೊಸ ಸಿಟಿ ಕಾರು ಭಾರತದಲ್ಲಿ 2020ರ ಫೆಬ್ರುವರಿ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಎಂಜಿನ್ ಆಯ್ಕೆಯಲ್ಲಿ ಹೊಸ ಕಾರು ಮಹತ್ವದ ಬದಲಾವಣೆ ಪಡೆದುಕೊಂಡಿದೆ.

ಹೋಂಡಾ ಸಂಸ್ಥೆಯು ಇದೇ ಮೊದಲ ಬಾರಿಗೆ ಸಿಟಿ ಸೆಡಾನ್‌ನಲ್ಲಿ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಮಾದರಿಯನ್ನು ಕೂಡಾ ಬಿಡುಗಡೆಗೊಳಿಸುತ್ತಿದ್ದು, ಹೈಬ್ರಿಡ್ ಎಂಜಿನ್‌ನಿಂದಾಗಿ ಹೊಸ ಕಾರಿನ ಮೈಲೇಜ್ ಪ್ರಮಾಣವು ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಶೇ.33 ರಷ್ಟು ಹೆಚ್ಚು ಮೈಲೇಜ್ ಹಿಂದಿರುಗಿಸಲಿದೆ.

ಕಳೆದ ಮಾರ್ಚ್‌ನಲ್ಲಿ ಸಿವಿಕ್ ಬಿಡುಗಡೆಯ ನಂತರ ಸಿಟಿ ಸೆಡಾನ್ ಕಾರಿನ ಮೇಲೆ ಹೆಚ್ಚಿನ ಗಮನಹರಿಸಿರುವ ಹೋಂಡಾ ಸಂಸ್ಥೆಯು 2020ರ ಫೆಬ್ರುವರಿ 7ರಿಂದ 14ರ ತನಕ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹೊಸ ಕಾರನ್ನು ಪ್ರದರ್ಶನ ಮಾಡಿದ ನಂತರವಷ್ಟೇ ಬಿಡುಗಡೆ ಮಾಡಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಿಟಿ ಕಾರಿಗಿಂತಲೂ ಹೊಸ ತಲೆಮಾರಿನ ಆವೃತ್ತಿಯು ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದ್ದು, 2014ರಲ್ಲಿ 4ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಬಿಡುಗಡೆ ಮಾಡಿದ ಬಳಿಕ ಯಾವುದೇ ಬದಲಾವಣೆ ತರದ ಹೋಂಡಾ ಸಂಸ್ಥೆಯು ಇದೇ ಮೊದಲ ಬಾರಿಗೆ ಹೈಬ್ರಿಡ್ ಎಂಜಿನ್ ಪರಿಚಯಿಸುತ್ತಿದೆ. 5ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಪ್ರಸ್ತುತ ಮಾದರಿಗಿಂತಲೂ ತುಸು ದೊಡ್ಡ ಗಾತ್ರವನ್ನು ಹೊಂದಿದ್ದು, ಬೂಟ್ ಸ್ಪೆಸ್ ಜೊತೆಗೆ ಹಿಂಬದಿಯ ಸವಾರರಿಗೆ ವಿಸ್ತರಿತ ಲೆಗ್ ರೂಂ ಮತ್ತು ಹೆಡ್ ರೂಂ ನೀಡಿರುವುದು ಮತ್ತಷ್ಟು ಆರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾಗಲಿದೆ.

ಸದ್ಯ ಥೈಲ್ಯಾಂಡ್‌ನಲ್ಲಿ ಹೊಸ ತಲೆಮಾರಿನ ಕಾರಿನ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಹೋಂಡಾ ಸಂಸ್ಥೆಯು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಹೊಸ ಕಾರಿನ ಎಂಜಿನ್ ಅನ್ನು ಅಲ್ಲಿಯೇ ಅಭಿವೃದ್ಧಿಪಡಿಸಿದೆ.

ಥೈಲ್ಯಾಂಡ್‌ನಲ್ಲಿರುವ ಹೋಂಡಾ ಕಾರು ಉತ್ಪಾದನಾ ಘಟಕವು ಏಷ್ಯಾದ ಅತಿದೊಡ್ಡ ಕಾರು ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆ ಹೊಂದಿದ್ದು, ಇಲ್ಲಿಂದಲೇ ಹೊಸ ಸಿಟಿ ಸೆಡಾನ್ ಕಾರು ಅಂತಿಮ ರೂಪ ಪಡೆದುಕೊಂಡು ಭಾರತಕ್ಕೆ ಪ್ರವೇಶಿಸಲಿದೆ.

ಹೊಸ ಸಿಟಿ ಸೆಡಾನ್ ಕಾರಿನಲ್ಲಿ ಈ ಬಾರಿ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಮಾರುತಿ ಸುಜುಕಿ ಸಿಯಾಜ್ ಮತ್ತು ಹ್ಯುಂಡೈ ವೆರ್ನಾ ಕಾರಿಗೆ ಮಾತ್ರವಲ್ಲದೇ ಟೊಯೊಟಾ ಕರೊಲ್ಲಾ ಆಟ್ಲಿಸ್ ಕಾರಿಗೂ ಇದು ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಎಂಜಿನ್ ಸಾಮರ್ಥ್ಯ
ಹೊಸ ತಲೆಮಾರಿನ ಹೋಂಡಾ ಕಾರು ಈ ಬಾರಿ ಸಾಮಾನ್ಯ ಮಾದರಿಯ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಮಾತ್ರವಲ್ಲದೇ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯು ಪರ್ಫಾಮೆನ್ಸ್ ಪ್ರಿಯರನ್ನು ಮತ್ತಷ್ಟು ಸೆಳೆಯಲಿದೆ.

ಜೊತೆಗೆ 2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮ ಜಾರಿಗೆ ಹಿನ್ನೆಲೆಯಲ್ಲಿ ಹೊಸ ವಾಹನ ಎಂಜಿನ್‌ನಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತಿದ್ದು, ಈ ಹಿಂದಿಗಿಂತಲೂ ಶೇ.25 ರಷ್ಟು ಹೊಗೆ ಉಗುಳುವ ಪ್ರಮಾಣ ಕಡಿಮೆಯಾದಲ್ಲಿ, ಮೈಲೇಜ್ ಪ್ರಮಾಣದಲ್ಲೂ ಹೆಚ್ಚಳವಾಗಲಿದೆ.

ಹಾಗೆಯೇ ಹೊಸ ಎಂಜಿನ್ ಹೊತ್ತುಬರುತ್ತಿರುವ ಬಿಎಸ್-6 ವಾಹನ ಬೆಲೆಯಲ್ಲೂ ತುಸು ದುಬಾರಿಯಾಗಲಿದ್ದು, ಬೆಲೆಗಳಿಗೆ ಅನುಗುಣವಾಗಿ ರೂ.80 ಸಾವಿರದಿಂದ ರೂ.2 ಲಕ್ಷದ ತನಕ ಈಗಿರುವ ಬೆಲೆಗಳಿಂತಲೂ ಹೆಚ್ಚು ಬೆಲೆ ಪಡೆದುಕೊಳ್ಳಲಿವೆ. ಇವುಗಳಲ್ಲಿ ಭಾರೀ ಬದಲಾವಣೆ ಪಡೆದುಕೊಳ್ಳುತ್ತಿರುವ ಹೋಂಡಾ ಸಿಟಿ ಸಹ ಈಗಿರುವ ವಿನ್ಯಾಸಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯತೆ ಹೊಂದಲಿದ್ದು, ಬೆಲೆಯೂ ಕೂಡಾ ತುಸು ದುಬಾರಿ ಎನ್ನಿಸಲಿದೆ.


Click it and Unblock the Notifications