ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಬಿಎಸ್-6 ಮಾರುತಿ ಆಲ್ಟೋ 800 ಫೇಸ್‌ಲಿಫ್ಟ್
ಕಳೆದ 2 ದಿನಗಳ ಹಿಂದಷ್ಟೇ ಬಿಎಸ್-6 ಎಂಜಿನ್ ಪ್ರೇರಿತ ಬಲೆನೊ ಸ್ಮಾರ್ಟ್ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ್ದ ಮಾರುತಿ ಸುಜುಕಿ ಸಂಸ್ಥೆಯು ಇದೀಗ ಬಹುನೀರಿಕ್ಷಿತ ಆಲ್ಟೋ 800 ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನ ಹೊತ್ತು ಮಾರುಕಟ್ಟೆ ಪ್ರವೇಶಿಸಿದೆ.

ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ಬಿಎಸ್-6 ವೈಶಿಷ್ಟ್ಯತೆಯುಳ್ಳ ಆಲ್ಟೋ 800 ಫೇಸ್‌ಲಿಫ್ಟ್ ಆವೃತ್ತಿಯು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಮಾಲಿನ್ಯ ಪ್ರಮಾಣ ತಗ್ಗಿಸಲು ಮತ್ತು ಮೈಲೇಜ್ ಹೆಚ್ಚಿಸುವಲ್ಲಿ ಹೊಸ ಎಂಜಿನ್ ಸಾಕಷ್ಟು ಸಹಕಾರಿಯಾಗಿದೆ. ಹೀಗಾಗಿ ಸಾಮಾನ್ಯ ಆಲ್ಟೋ 800 ಆವೃತ್ತಿಗಿಂತ ಬಿಎಸ್-6 ಎಂಜಿನ್ ಪ್ರೇರಿತ ಆಲ್ಟೋ 800 ಕಾರಿನ ಬೆಲೆಯಲ್ಲಿ ತುಸು ಹೆಚ್ಚಳವಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.2.94 ಲಕ್ಷ ಬೆಲೆ ನಿಗದಿ ಮಾಡಲಾಗಿದೆ.

ಈ ಹಿಂದೆ ಕೇಂದ್ರ ಸರ್ಕಾರವು 2017 ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಬಿಎಸ್-3 ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಗೊಳಿಸಿ ಬಿಎಸ್-4 ನಿಯಮವನ್ನು ಜಾರಿಗೆ ತಂದಿತ್ತು. ಇದೀಗ ಮತ್ತೊಂದು ಸುತ್ತಿನಲ್ಲಿ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಬಿಎಸ್-6 ನತ್ತ ಮಹತ್ವದ ಹೆಜ್ಜೆಯಿಡುತ್ತಿದೆ.

2020ರ ಏಪ್ರಿಲ್ 1ರಿಂದಲೇ ಬಿಎಸ್-6 ನಿಯಮವು ಜಾರಿಯಾಗುವುದು ಬಹುತೇಕ ಖಚಿತವಾಗಿದ್ದು, ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟ ಸಂಪೂರ್ಣ ನಿಷೇಧಗೊಳ್ಳಲಿದೆ. ಹೊಸ ನಿಯಮವು ವಾಹನ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಿದ್ದು, ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯುವಲ್ಲಿ ಹೊಸ ಬಿಎಸ್-6 ಎಂಜಿನ್‌ಗಳು ಸಾಕಷ್ಟು ಸಹಕಾರಿಯಾಗಿವೆ ಎನ್ನುವುದು ಆಟೋ ತಜ್ಞರ ವಿಶ್ಲೇಷಣೆ.

ಇದರಿಂದಾಗಿ ಮಾರುತಿ ಸುಜುಕಿ ಸೇರಿದಂತೆ ದೇಶದ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಕಾರುಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಿ ಟೆಸ್ಟಿಂಗ್ ನಡೆಸುತ್ತಿದ್ದು, ಡೆಡ್‌ಲೈನ್‌ಗೂ ಮುನ್ನವೇ ಮಾರುತಿ ಸುಜುಕಿ ತನ್ನ ಬಹುಬೇಡಿಕೆಯ ಬಲೆನೊ ಮತ್ತು ಆಲ್ಟೋ 800 ಕಾರುಗಳನ್ನು ಹೊಸ ನಿಯಮದಂತೆ ಮರುಬಿಡುಗಡೆ ಮಾಡಿದೆ.

ಈ ಕುರಿತಂತೆ ಮಾತನಾಡಿರುವ ಮಾರುತಿ ಸುಜುಕಿ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ನಿರ್ದೇಶಕ ಆರ್‌ಎಸ್ ಕಲ್ಸಿಯವರು, ಕಳೆದ 15 ವರ್ಷಗಳಿಂದ ಕಾರು ಮಾರಾಟ ಅಗ್ರಸ್ಥಾನದಲ್ಲಿರುವ ಆಲ್ಟೋ 800 ಮಾದರಿಯು ಲಕ್ಷಾಂತರ ಜನರ ಕಾರು ಖರೀದಿಯ ಕನಸನ್ನು ನನಸು ಮಾಡಿದ್ದು, ಇದೀಗ ಹೊಸ ನಿಯಮದಂತೆ ಮತ್ತಷ್ಟು ಆಕರ್ಷಕ ಹಾಗೂ ಸದೃಡ ಆವೃತ್ತಿಯಾಗಿ ಗ್ರಾಹಕರ ಆಯ್ಕೆ ಲಭ್ಯವಾಗಿದೆ ಎಂದಿದ್ದಾರೆ.

ಮಾಹಿತಿಗಳ ಪ್ರಕಾರ, ಬಿಎಸ್-6 ಎಂಜಿನ್ ಹೊಂದಿರುವ ಹೊಸ ಆಲ್ಟೋ ಕಾರು ಈ ಹಿಂದಿನ ಆವೃತ್ತಿಗಿಂತ ಶೇ.25ರಷ್ಟು ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಜೊತೆಗೆ ಸುಧಾರಿತ ತಂತ್ರಜ್ಞಾನದೊಂದಿಗೆ ಕಾರಿನ ಎಂಜಿನ್ ದಕ್ಷತೆ ಮತ್ತು ಮೈಲೇಜ್ ಹೆಚ್ಚಳವಾಗಿರುವುದರಿಂದ ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿದೆಯೆಂತೆ.

ಜೊತೆಗೆ ಈ ಹಿಂದಿಗಿಂತಲೂ ಅತ್ಯುತ್ತಮ ಸುರಕ್ಷಾ ಸೌಲಭ್ಯಗಳನ್ನು ಹೊತ್ತುಬಂದಿರುವ ಆಲ್ಟೋ 800 ಫೇಸ್‌ಲಿಫ್ಟ್ ಮಾದರಿಯಲ್ಲಿ ಎಬಿಸ್, ಡ್ರೈವರ್ ಸೈಡ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಹೈ ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಆಯ್ಕೆ ರೂಪದಲ್ಲಿ ಪ್ರಯಾಣಿಕರ ಆಸದ ಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಇನ್ನು ಕಾರಿನ ಇಂಟಿರಿಯರ್ ವಿಭಾಗವು ಈ ಹಿಂದಿನ ಮಾದರಿಯಂತೆ ಕೆಲವೊಂದು ತಾಂತ್ರಿಕ ಸೌಲಭ್ಯಗಳನ್ನು ಇಲ್ಲೂ ಮುಂದುವರಿಸಲಾಗಿದ್ದು, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಡಬಲ್ ಡೀನ್ ಇನ್ಪೋಟೈನ್‌ಮೆಂಟ್, ಯುಎಸ್‌ಬಿ, ಬ್ಲ್ಯೂಟೂಥ್ ಮತ್ತು ಆಕ್ಸ್ ಇನ್ ಸೌಲಭ್ಯವನ್ನು ಹೊಂದಿದೆ.

ಎಂಜಿನ್ ಸಾಮರ್ಥ್ಯ
ಆಲ್ಟೋ 800 ಮಾದರಿಯು ಈ ಹಿಂದಿನಂತೆಯೇ 796 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಹೊಸ ಎಂಜಿನ್ ಮಾದರಿಯು ಈ ಬಾರಿ ಪರ್ಫಾಮೆನ್ಸ್ ವಿಚಾರದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಫೈವ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 48-ಬಿಎಚ್‌ಪಿ ಮತ್ತು 69-ಎನ್ಎಂ ಟಾರ್ಕ್ ಉತ್ಪಾದಿಸಿ ಉತ್ತಮ ಮೈಲೇಜ್ ಹಿಂದಿರುಗಿಸುತ್ತೆ.

ಸದ್ಯ ಮಾರುಕಟ್ಟೆಯಲ್ಲಿ ಆಲ್ಟೋ 800 ಫೇಸ್‌ಲಿಫ್ಟ್ ಕಾರು ಒಟ್ಟು ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಹೈ ಎಂಡ್ ಆವೃತ್ತಿಯಾಗಿ ಮಾರಾಟಗೊಳ್ಳಲಿರುವ ವಿಎಕ್ಸ್‌ಐ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.3.72 ಲಕ್ಷ ಬೆಲೆಯೊಂದಿಗೆ ಉತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.


Click it and Unblock the Notifications