ಆಟೋ ಎಕ್ಸ್‌ಪೋ 2020: ಹೊಸ ಕ್ರೆಟಾ ಅನಾವರಣಗೊಳಿಸಿದ ಹ್ಯುಂಡೈ
ಹ್ಯುಂಡೈ ಇಂಡಿಯಾ ಎರಡನೇ ತಲೆಮಾರಿನ ಕ್ರೆಟಾ ಎಸ್‌ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಕಳೆದ ವರ್ಷ ಈ ಕಾರ್ ಅನ್ನು ಚೀನಾದಲ್ಲಿ ಹೊಸ ತಲೆಮಾರಿನ ಐಎಕ್ಸ್ 25 ಎಂಬ ಹೆಸರಿನಲ್ಲಿ ಅನಾವರಣಗೊಳಿಸಲಾಗಿತ್ತು.

ಈ ಹೊಸ ಕ್ರೆಟಾ ಎಸ್‍ಯುವಿಯು ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್‍ನಲ್ಲಿ ಮಾತ್ರ ಬದಲಾವಣೆಗಳನ್ನು ಹೊಂದದೇ, ಎಂಜಿನ್‍ನಲ್ಲಿಯೂ ಬದಲಾವಣೆ ಹೊಂದಿದೆ. ಹೊಸ ಕ್ರೆಟಾ ಎಸ್‍ಯುವಿಯಲ್ಲಿ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ.

ಹ್ಯುಂಡೈ ಕ್ರೆಟಾ ಹೊಸ ವಿನ್ಯಾಸವನ್ನು ಹೊಂದಿದ್ದು, ಜನರನ್ನು ತನ್ನತ್ತ ಸೆಳೆಯುವ ಲುಕ್ ಅನ್ನು ಹೊಂದಿದೆ. ಮುಂಭಾಗದಲ್ಲಿರುವ ಹ್ಯುಂಡೈನ ಕ್ಯಾಸ್ಕೇಡಿಂಗ್ ಗ್ರಿಲ್ ಹೆಚ್ಚು ಗಮನ ಸೆಳೆದರೂ, ಹೆಡ್‍ಲೈಟ್ ಮತ್ತಷ್ಟು ಗಮನ ಸೆಳೆಯುತ್ತದೆ.

ಸ್ಪ್ಲಿಟ್ ಹೆಡ್‍ಲೈಟ್ ಸ್ಲಿಟ್ ರೀತಿಯ ಎಲ್ಇಡಿ ಡಿಆರ್‍ಎಲ್ ಅನ್ನು ಹೊಂದಿದೆ. ಹೆಡ್‌ಲೈಟ್ ಕ್ಲಸ್ಟರ್ ಅನ್ನು ಎಲ್ಇಡಿ ಹೆಡ್‌ಲೈಟ್‌ಗಳಿಂದ ತಯಾರಿಸಲಾಗಿದ್ದು, ಅದರ ಕೆಳಗೆ ಹೊಸ ಲುಕ್‍ನ ಫಾಗ್ ಲ್ಯಾಂಪ್‍ಗಳಿವೆ. ಬಂಪರ್‍ನ ಕೆಳಗೆ ಸ್ಕಫ್ ಪ್ಲೇಟ್‍ಗಳಿವೆ.

ಸ್ಕ್ವೇರ್ ಶೇಪಿನ ವ್ಹೀಲ್ ಆರ್ಕ್‍ಗಳು ಕ್ರೆಟಾಗೆ ಹೆಚ್ಚಿನ ಲುಕ್ ನೀಡುತ್ತವೆ. ಈ ಕಾರಿಗೆ ಡ್ಯುಯಲ್-ಟೋನ್ ಪೇಂಟ್ ಬಣ್ಣವನ್ನು ನೀಡಲಾಗಿದ್ದು, ಸಿಲ್ವರ್ ಬಣ್ಣವನ್ನು ಸಿ ಪಿಲ್ಲರ್‍ವರೆಗೂ ನೀಡಲಾಗಿದೆ. ಇದರಲ್ಲಿರುವ 17 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್‍ಗಳು ಗಮನ ಸೆಳೆಯುತ್ತವೆ.

ಹೊಸ ಕ್ರೆಟಾದ ಹಿಂಭಾಗದಲ್ಲಿ ಸ್ಪ್ಲಿಟ್ ಎಲ್‍ಇಡಿ ಟೇಲ್ ಲ್ಯಾಂಪ್‍ಗಳಿವೆ. ಹೊಸ ಕ್ರೆಟಾ ಹಳೆಯ ಕ್ರೆಟಾ ಕಾರಿಗಿಂತ ದೊಡ್ಡದಾಗಿದ್ದು, ಉದ್ದವಾದ ವ್ಹೀಲ್‍ಬೇಸ್ ಹೊಂದಿದೆ. ಹ್ಯುಂಡೈ ಕಂಪನಿಯು ಕ್ರೆಟಾದ ಇಂಟಿರಿಯರ್ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಚೀನಾದ ಐಎಕ್ಸ್25 ಕಾರಿನಲ್ಲಿರುವ ಕ್ಯಾಬಿನ್ ಅನ್ನು ಎಷ್ಟು ಪ್ರಮಾಣದಲ್ಲಿ ಹೊಸ ಕ್ರೆಟಾ ಕಾರಿನಲ್ಲಿ ನೀಡಲಾಗುವುದು ಎಂಬುದನ್ನು ಕಾದುನೋಡಬೇಕಿದೆ. ಚೀನಾ ಮಾರುಕಟ್ಟೆಯಲ್ಲಿರುವ ಐಎಕ್ಸ್ 25 ಟೆಸ್ಲಾ ಕಾರುಗಳಲ್ಲಿರುವಂತಹ 10.25-ಇಂಚಿನ ಪೋರ್ಟ್ ರೇಟ್ ರೀತಿಯ ಟಚ್‌ಸ್ಕ್ರೀನ್ ಹಾಗೂ ಡಿಜಿಟಲ್ ಡಯಲ್‌ಗಳನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಕ್ರೆಟಾ, ಪನೋರಾಮಿಕ್ ಸನ್‌ರೂಫ್ ಹಾಗೂ ಹ್ಯುಂಡೈನ ಬ್ಲೂಲಿಂಕ್ ಇನ್-ಕಾರ್ ಕನೆಕ್ಟಿವಿಟಿ ಹೊಂದಿರಲಿದೆ ಎಂದು ಹ್ಯುಂಡೈ ತಿಳಿಸಿದೆ. ಇದರ ಜೊತೆಗೆ ಕೂಲ್ ಸೀಟುಗಳು ಹಾಗೂ ವೈರ್‌ಲೆಸ್ ಚಾರ್ಜಿಂಗ್‌ಗಳನ್ನು ಸಹ ನಿರೀಕ್ಷಿಸಲಾಗಿದೆ.

ಹೊಸ ಕ್ರೆಟಾ ಕಾರಿನಲ್ಲಿ ಕಿಯಾ ಸೆಲ್ಟೋಸ್‍ನಲ್ಲಿರುವಂತಹ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 115 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. 1.5-ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರಲಿದೆ.

ಹ್ಯುಂಡೈ ಕಂಪನಿಯು ಸೆಲ್ಟೋಸ್ ಕಾರಿನಲ್ಲಿರುವಂತಹ 140 ಬಿಹೆಚ್‌ಪಿ ಪವರ್ ಉತ್ಪಾದಿಸುವ, 1.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಈ ಕಾರಿನಲ್ಲಿ ಅಳವಡಿಸುವ ಸಾಧ್ಯತೆಗಳಿವೆ.

ಹ್ಯುಂಡೈ ಕ್ರೆಟಾದ ಇಂಟಿರಿಯರ್ ಹಾಗೂ ಉಳಿದ ವಿವರಗಳನ್ನು ಬಿಡುಗಡೆಗೂ ಮುನ್ನ ಬಹಿರಂಗಗೊಳಿಸಲಾಗುವುದು. ಈ ಹೊಸ ಕಾರ್ ಅನ್ನು ಮಾರ್ಚ್ ಮಧ್ಯಭಾಗದಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.10ಲಕ್ಷದಿಂದ-ರೂ.16 ಲಕ್ಷಗಳಾಗುವ ಸಾಧ್ಯತೆಗಳಿವೆ.


Click it and Unblock the Notifications








