ಬಿಎಸ್-6 ಎಂಜಿನ್ ಪ್ರೇರಿತ ಕೆಯುವಿ100 ನೆಕ್ಸ್ಟ್ ಪೆಟ್ರೋಲ್ ವರ್ಷನ್ ಬೆಲೆ ಮಾಹಿತಿ ಬಹಿರಂಗ
ಮಹೀಂದ್ರಾ ಸಂಸ್ಥೆಯು ಈಗಾಗಲೇ ಬಿಎಸ್-6 ಪೆಟ್ರೋಲ್ ಎಂಜಿನ್ ಪ್ರೇರಿತ ಎಕ್ಸ್‌ಯುವಿ300 ಮಾರಾಟಕ್ಕೆ ಚಾಲನೆ ನೀಡಿದ್ದು, ಶೀಘ್ರದಲ್ಲೇ ಮೈಕ್ರೊ ಎಸ್‌ಯುವಿ ಮಾದರಿಯಾದ ಕೆಯುವಿ100 ನೆಕ್ಸ್ಟ್ ಕಾರನ್ನು ಸಹ ಹೊಸ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡುತ್ತಿದೆ.

ಬಿಎಸ್-6 ಎಮಿಷನ್‌ನಿಂದಾಗಿ ಕೆಯುವಿ100 ನೆಕ್ಸ್ಟ್ ಕಾರಿನಲ್ಲಿ ಈ ಬಾರಿ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿದ್ದು, ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ. ಹಾಗೆಯೇ ಹೊಸ ಕಾರು ಈಗಾಗಲೇ ಎಲೆಕ್ಟ್ರಿಕ್ ವರ್ಷನ್ ಕೂಡಾ ಪಡೆದುಕೊಂಡಿದ್ದು, ಗ್ರಾಹಕರ ಬೇಡಿಕೆ ಅನ್ವಯ ಇನ್ಮುಂದೆ 1.2-ಲೀಟರ್ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ವರ್ಷನ್ ಮಾತ್ರವೇ ಖರೀದಿಗೆ ಲಭ್ಯವಿರಲಿದೆ.

ಎಲೆಕ್ಟ್ರಿಕ್ ಕೆಯುವಿ100 ಕಾರು ಈಗಾಗಲೇ ಖರೀದಿಗೆ ಲಭ್ಯವಿದ್ದು, ಸದ್ಯ ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಪೆಟ್ರೋಲ್ ವರ್ಷನ್ ಮಾದರಿಯ ಬೆಲೆಗಳ ಮಾಹಿತಿಯು ಬಹಿರಂಗವಾಗಿದೆ.

ಈ ಮೊದಲು ಬಿಎಸ್-4 ಆವೃತ್ತಿಯಲ್ಲಿ ಒಟ್ಟು 18 ವೆರಿಯೆಂಟ್‌ಗಳನ್ನು ಹೊಂದಿದ್ದ ಕೆಯುವಿ100 ನೆಕ್ಸ್ಟ್ ಕಾರಿನಲ್ಲಿ ಈ ಬಾರಿ ಕೇವಲ ಮೂರು ವೆರಿಯೆಂಟ್ ಮಾತ್ರವೇ ನೀಡಲಾಗಿದ್ದು, ಕೆ2 ಪ್ಲಸ್, ಕೆ4 ಪ್ಲಸ್ ಮತ್ತು ಕೆ8 ವೆರಿಯೆಂಟ್‌ಗಳನ್ನು ಹೊಂದಿದೆ.

ಮಾಹಿತಿಗಳ ಪ್ರಕಾರ ಕೆಯುವಿ100 ನೆಕ್ಸ್ಟ್ ಕೆ2 ಪ್ಲಸ್ ವೆರಿಯೆಂಟ್ ಬೆಲೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.50 ಲಕ್ಷ, ಕೆ4 ಪ್ಲಸ್ ಕಾರಿನ ಬೆಲೆ ರೂ.5.96 ಲಕ್ಷ ಮತ್ತು ಕೆ8 ವೆರಿಯೆಂಟ್ ಬೆಲೆಯು ರೂ.7.12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಈ ಮೂಲಕ ಹೊಸ ಕಾರಿನಲ್ಲಿ ಬೇಡಿಕೆಯಿಲ್ಲದ ವೆರಿಯೆಂಟ್‌ಗಳನ್ನು ತೆಗೆದುಹಾಕಿರುವ ಮಹೀಂದ್ರಾ ಸಂಸ್ಥೆಯು ಬೇಡಿಕೆಗೆ ಅನುಗುಣವಾಗಿ ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಮಾತ್ರವೇ ಮುಂದುವರಿಸಲಿದೆ.

ಇದಲ್ಲದೆ ಎಲ್ಲಾ ವೆರಿಯೆಂಟ್‌ಗಳಲ್ಲೂ ಹಲವು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡಲಾಗಿದೆ. ಜೊತೆಗೆ ಹೊಸ ಕಾರಿನ ಬೆಲೆ ಏರಿಕೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದ್ದು, ಬಿಎಸ್-6 ಎಂಜಿನ್ ಹೊರತುಪಡಿಸಿ ಇನ್ನುಳಿದ ಬಹುತೇಕ ಫೀಚರ್ಸ್‌ಗಳು ಈ ಹಿಂದಿನಂತೆಯೇ ಮುಂದುವರಿಸಲಾಗಿದೆ.

ಎಂಜಿನ್ ಪರ್ಫಾಮೆನ್ಸ್
ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಕೆಯುವಿ100 ನೆಕ್ಸ್ಟ್ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 83-ಬಿಎಚ್‌ಪಿ ಮತ್ತು 115-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

ಇನ್ನುಳಿದಂತೆ ಹೊಸ ಕಾರಿನಲ್ಲಿ ಈ ಹಿಂದಿನಂತೆಯೇ ಗ್ರಿಲ್ ಡಿಸೈನ್, ಫ್ರಂಟ್ ಆ್ಯಂಡ್ ರಿಯರ್ ಬಂಪರ್, ಫ್ಲಕ್ಸ್ ಸ್ಕೀಡ್ ಪ್ಲೇಟ್, 15-ಇಂಚಿನ್ ಅಲಾಯ್ ವೀಲ್ಹ್ ಮತ್ತು ಕಾರಿನ ಒಳಭಾಗದಲ್ಲಿ ಜಿಪಿಎಸ್ ಒಳಗೊಂಡಿರುವ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಸ್ಟಿರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್ ನೀಡಲಾಗಿದೆ.

ಹಾಗೆಯೇ ಹೋಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಸೀಟು, ಕೂಲ್ಡ್ ಗ್ಲೋ ಬಾಕ್ಸ್ ಸೇರಿದಂತೆ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಸೇರಿ ಹಲವು ಹೊಸ ಫೀಚರ್ಸ್‌ಗಳಿವೆ.

ಇನ್ನು ಹೊಸ ಕಾರಿನಲ್ಲಿ 5 ಸೀಟರ್ ಆವೃತ್ತಿಯನ್ನು ಮಾತ್ರವೇ ಬಿಡುಗಡೆ ಮಾಡಲಾಗುತ್ತಿದ್ದು, ಈ ಹಿಂದಿನ 6 ಸೀಟರ್ ಮಾದರಿಯನ್ನು ಸದ್ಯಕ್ಕೆ ಬಿಡುಗಡೆ ಮಾಡುತ್ತಿಲ್ಲ. 6 ಸೀಟರ್ ಮಾದರಿಯು ಮುಂಭಾಗದ ಕ್ಯಾಪ್ಟನ್ ಸೀಟಿನಲ್ಲಿಯೇ ಎರಡು ಆಸನವನ್ನು ಹೊಂದಿದೆ. ಆದರೆ 6 ಸೀಟರ್ ಮಾದರಿಗೆ ಗ್ರಾಹಕರ ಬೇಡಿಕೆ ಕಡಿಮೆ ಇದ್ದು, 5 ಸೀಟರ್ ಮಾದರಿಯನ್ನು ಮಾತ್ರವೇ ಬಿಎಸ್-6 ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.


Click it and Unblock the Notifications








