ವಾಣಿಜ್ಯ ವಾಹನಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಹಿಂದಿಕ್ಕಿದ ಮಹೀಂದ್ರಾ
ಕೋವಿಡ್-19 ಪರಿಣಾಮ ನೆಲಕಚ್ಚಿದ್ದ ದೇಶಿಯ ಆಟೋ ಉದ್ಯಮವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಮೇ, ಜೂನ್ ಮತ್ತು ಜುಲೈ ಅವಧಿಗಿಂತಲೂ ಅಗಸ್ಟ್ ಅವಧಿಯಲ್ಲಿನ ಹೊಸ ವಾಹನ ಮಾರಾಟವು ಸಾಕಷ್ಟು ಸುಧಾರಣೆ ಕಾಣುತ್ತಿದೆ.

ಹೊಸ ವಾಹನಗಳ ನೋಂದಣಿಯು 2020ರ ಅಗಸ್ಟ್ ಅವಧಿಯಲ್ಲಿ ಸುಮಾರು ಶೇ. 26.81ರಷ್ಟು ಕುಸಿತ ಕಂಡುಬಂದಿದ್ದು, ಪ್ಯಾಸೆಂಜರ್ ಕಾರುಗಳು, ದ್ವಿಚಕ್ರ ವಾಹನಗಳು, ತ್ರಿ ಚಕ್ರ ವಾಹನಗಳು, ವಾಣಿಜ್ಯ ವಾಹನಗಳು ಮತ್ತು ಟ್ರ್ಯಾಕ್ಟರ್ ಮಾರಾಟವು ಒಟ್ಟಾರೆಯಾಗಿ 11,88,087 ಯುನಿಟ್ ಮಾರಾಟ ದಾಖಲಿಸಿವೆ. ಇದರಲ್ಲಿ ಟ್ರ್ಯಾಕ್ಟರ್ ಮಾರಾಟವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಯ ವಾಹನಗಳ ಮಾರಾಟದಲ್ಲೂ ಕುಸಿತ ಕಂಡುಬಂದಿದೆ.

2019ರ ಅಗಸ್ಟ್ ಅವಧಿಯಲ್ಲಿ ಒಟ್ಟು 16,23,218 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಈ ಬಾರಿ ಶೇ.26.81ರಷ್ಟು ಕುಸಿತ ಅನುಭವಿಸಿದ್ದು, ಮೇ, ಜೂನ್ ಮತ್ತು ಜುಲೈ ಅವಧಿಗಿಂತಲೂ ಅಗಸ್ಟ್ ಅವಧಿಯಲ್ಲಿನ ವಾಹನ ಮಾರಾಟವು ತುಸು ಹೆಚ್ಚಳವಾಗಿದೆ ಎನ್ನಬಹುದು.

ಮೇ, ಜೂನ್ ಮತ್ತು ಜುಲೈ ಅವಧಿಯಲ್ಲಿ ಶೇ. 40ರಿಂದ ಶೇ.65ರಷ್ಟು ಅನುಭವಿಸಿದ್ದ ಆಟೋ ಕಂಪನಿಗಳು ಇದೀಗ ಹೊಸ ವಾಹನ ಮಾರಾಟದಲ್ಲಿ ಬೆಳವಣಿಗೆ ಕಾಣುತ್ತಿದ್ದು, ವಾಣಿಜ್ಯ ವಾಹನಗಳ ಮಾರಾಟದಲ್ಲಿ ಇದೇ ಮೊದಲ ಬಾರಿಗೆ ಟಾಟಾ ಮೋಟಾರ್ಸ್ ಕಂಪನಿಯು ಮೊದಲ ಸ್ಥಾನದಿಂದ ಕುಸಿತ ಕಂಡಿದೆ.

ವಿವಿಧ ಮಾದರಿಯ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಕಂಪನಿಗೆ ಸರಿಸಮನಾದ ವಿವಿಧ ವಾಹನ ಉತ್ಪನ್ನಗಳನ್ನು ಹೊಂದಿರುವ ಮಹೀಂದ್ರಾ ಕಂಪನಿಯ ಅಗಸ್ಟ್ ಅವಧಿಯಲ್ಲಿ ಮೊದಲ ಸ್ಥಾನಕ್ಕೇರಿದ್ದು, ದೇಶಿಯ ಮಾರುಕಟ್ಟೆಯಲ್ಲಿ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಈ ಎರಡು ಕಂಪನಿಗಳು ಅಗ್ರಸ್ಥಾನದಲ್ಲಿವೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

2020ರ ಅಗಸ್ಟ್‌ನಲ್ಲಿ ವಿವಿಧ ವಾಣಿಜ್ಯ ವಾಹನ ಉತ್ಪಾದನಾ ಕಂಪನಿಗಳು ಒಟ್ಟು 26,536 ಯುನಿಟ್ ಮಾರಾಟ ಮಾಡಿದ್ದು, ಇದರಲ್ಲಿ ಮಹೀಂದ್ರಾ ಕಂಪನಿಯು 10,648 ಯನಿಟ್, ಟಾಟಾ ಕಂಪನಿಯು 7,115 ಯುನಿಟ್, ಅಶೋಕ್ ಲೇಲ್ಯಾಂಡ್ ಕಂಪನಿಯು 2,834 ಯುನಿಟ್ ಮತ್ತು ಮಾರುತಿ ಕಂಪನಿಯು 1,776 ಯುನಿಟ್ ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದೆ.

2019ರ ಅಗಸ್ಟ್‌ನಲ್ಲಿ 26,586 ಯುನಿಟ್ ಮಾರಾಟ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಈ ವರ್ಷದ ಅಗಸ್ಟ್‌ನಲ್ಲಿ ಕೇವಲ 7,115 ಯುನಿಟ್ ಮಾರಾಟ ಮಾಡುವ ಮೂಲಕ ಶೇ. 73.24ರಷ್ಟು ಕುಸಿತ ಕಂಡಿದ್ದು, ಮಹೀಂದ್ರಾ ಕಂಪನಿಯು ಇದೇ ಅಗಸ್ಟ್‌ನಲ್ಲಿ 10,648 ಯುನಿಟ್ ಮೂಲಕ ಶೇ. 26.48ರಷ್ಟು ಕುಸಿತ ಕಂಡಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಇದರಲ್ಲಿ ಅಶೋಕ್ ಲೇಲ್ಯಾಂಡ್ ಕಂಪನಿಯು ಕೂಡಾ ಶೇ.70.49 ರಷ್ಟು ಕುಸಿತ ಕಂಡಿದ್ದರೆ ಮಾರುತಿ ಕಂಪನಿಯು ಶೇ. 12.60 ರಷ್ಟು ಕುಸಿತ ಕಂಡಿದ್ದು, ಬಹುತೇಕ ವಾಣಿಜ್ಯ ವಾಹನ ಮಾರಾಟದಲ್ಲಿ ಕುಸಿತ ಕಂಡಿದೆ ಎನ್ನಬಹುದು.
| ರ‍್ಯಾಂಕ್ | ಬ್ರಾಂಡ್ | ಅಗಸ್ಟ್-20 | ಅಗಸ್ಟ್-19 | ಮಾರಾಟ ಪ್ರಮಾಣ (%) |
| 1 | ಮಹೀಂದ್ರಾ | 10,795 | 14,684 | -26.48 |
| 2 | ಟಾಟಾ | 7,115 | 26,586 | -73.24 |
| 3 | ಅಶೋಕ್ ಲೇಲ್ಯಾಂಡ್ | 2,834 | 9,602 | -70.49 |
| 4 | ಮಾರುತಿ | 1,776 | 2,032 | -12.60 |
| 5 | ವಿಇಸಿವಿ | 1,058 | 3,479 | -69.59 |
| 6 | ಡ್ಲೈಮರ್ | 341 | 1,221 | -72.07 |
| 7 | ಫೋರ್ಸ್ | 276 | 1,057 | -73.89 |
| 8 | ಎಸ್ಎಂಎಲ್ ಇಸುಝು | 163 | 933 | -82.53 |
| 9 | ಇತರೆ | 2,178 | 2,676 | -18.61 |

ಸದ್ಯ ವೈರಸ್ ಭೀತಿ ಹೆಚ್ಚಳದ ನಡುವೆಯೂ ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ವ್ಯಾಪಾರ ವಹಿವಾಟು ಕೈಗೊಂಡಿರುವ ಆಟೋ ಕಂಪನಿಗಳು ಕನಿಷ್ಠ ಪ್ರಮಾಣದ ವಾಹನ ಮಾರಾಟ ಪ್ರಮಾಣವನ್ನು ದಾಖಲಿಸಿದ್ದು, ಆಟೋ ಉದ್ಯಮ ಸುಧಾರಣೆಗಾಗಿ ತಾತ್ಕಾಲಿಕ ಪರಿಹಾರ ನೀಡುವಂತೆ ಆಟೋ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿವೆ.


Click it and Unblock the Notifications








