ಆಟೋ ಎಕ್ಸ್‌ಪೋ 2020: ಹವಾಲ್ ಎಫ್5, ಎಫ್7,ಎಫ್7 ಎಕ್ಸ್ ಮತ್ತು ಹೆಚ್9 ಅನಾವರಣ
ಭಾರತದಲ್ಲಿ ಮೊದಲ ಬಾರಿಗೆ ಕಾರು ಮಾರಾಟವನ್ನು ಆರಂಭಿಸುತ್ತಿರುವ ಚೀನಿ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆ ಗ್ರೇಟ್ ವಾಲ್ ಮೋಟಾರ್ಸ್ ತನ್ನ ಅಂಗಸಂಸ್ಥೆಯಾದ ಹವಾಲ್ ಕಾರು ಮಾದರಿಗಳನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ.

ಮಧ್ಯಮ ಗಾತ್ರದ ಐಷಾರಾಮಿ ಎಸ್‌ಯುವಿ ಆವೃತ್ತಿಯಾಗಿರುವ ಹವಾಲ್ ಹೊಸ ಕಾರುಗಳು ಹೊಸ ನೀರಿಕ್ಷೆಯೊಂದಿಗೆ ದೇಶಿಯ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಎಫ್5, ಎಫ್7,ಎಫ್7 ಎಕ್ಸ್ ಮತ್ತು ಹೆಚ್9 ಎಸ್‌ಯುವಿ ಕಾರುಗಳನ್ನು ಅನಾವರಣಗೊಳಿಸಲಾಗಿದೆ. ಚೀನಾ ಮಾರುಕಟ್ಟೆಯಲ್ಲಿ ಸದ್ಯ ಭಾರೀ ಜನಪ್ರಿಯತೆ ಹೊಂದಿರುವ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಹೊಸ ಅಧ್ಯಾಯ ಶುರು ಮಾಡಲು ಸಜ್ಜಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದೆ.

ಚೀನಿ ಮಾರುಕಟ್ಟೆಯಲ್ಲಿ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಹವಾಲ್ ಸಂಸ್ಥೆಯು ವಿವಿಧ ಮಾದರಿಯ ಕಾರು ಆವೃತ್ತಿಗಳನ್ನು ಮಾರಾಟಮಾಡುತ್ತಿದ್ದು, ಇದೀಗ ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಹತ್ತಕ್ಕೂ ಹೆಚ್ಚು ಹೊಸ ಮಾದರಿಯ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿವೆ.

ಹವಾಲ್ ನಿರ್ಮಾಣದ ಎಫ್5 ಕಾನ್ಸೆಪ್ಟ್ ಆವೃತ್ತಿಯು ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಯು ಭಾರತದಲ್ಲಿ ಮೊದಲ ಹಂತದಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದ್ದು, ಎಂಜಿ ಹೆಕ್ಟರ್, ಜೀಪ್ ಕಂಪಾಸ್, ಕಿಯಾ ಸೆಲ್ಟೊಸ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ಇದು ಪೈಪೋಟಿಯಾಗಿದೆ.

ಚೀನಿ ಮಾರುಕಟ್ಟೆಯಲ್ಲಿರುವ ಎಂಜಿ ಮಾತೃಸಂಸ್ಥೆ ಸೈಕ್‌ಗೆ ಪ್ರಬಲ ಪೈಪೋಟಿಯಾಗಿರುವಂತೆ ಭಾರತದಲ್ಲೂ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಇದೀಗ ಎಂಜಿ ಸಂಸ್ಥೆಗೆ ಪೈಪೋಟಿಯಾಗಲಿದ್ದು, 2021ರ ಆರಂಭದಲ್ಲಿ ಹೊಸ ಕಾರುಗಳು ಅಧಿಕೃತವಾಗಿ ಮಾರುಕಟ್ಟೆಗೆ ಪ್ರವೇಶಿಸಲಿವೆ. ಮೊದಲ ಹಂತದಲ್ಲಿ ಹೊಸ ಕಾರುಗಳು ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರವೇ ಬಿಡುಗಡೆ ಮಾಡಲಾಗುತ್ತಿದ್ದು, ಎಫ್5, ಎಫ್7,ಎಫ್7 ಎಕ್ಸ್ ಆವೃತ್ತಿಯಲ್ಲಿ 1.5-ಲೀಟರ್ ಟರ್ಬೋ ಪೆಟ್ರೋಲ್ ಮತ್ತು ಹೆಚ್9 ಮಾದರಿಯಲ್ಲಿ 2.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದೆ.

ಇನ್ನು ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯ ಕಾರು ಉತ್ಪನ್ನಗಳ ಬಗೆಗೆ ಹೇಳುವುದಾದರೇ, ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಜನಪ್ರಿಯತೆ ಹೊಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಅಭಿವೃದ್ದಿಗೊಳಿಸಲಿದೆ.

ಮೊದಲ ಹಂತವಾಗಿ ಭಾರತದಲ್ಲಿ ವಾರ್ಷಿಕವಾಗಿ 2 ಲಕ್ಷ ಕಾರುಗಳ ಉತ್ಪಾದನಾ ಸಾಮರ್ಥ್ಯದ ಘಟಕವನ್ನು ತೆರೆಯಲು ಯೋಜಿಸಿರುವ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು, ಚೀನಾದಲ್ಲಿ ಪ್ರತಿ ಸ್ಪರ್ಧಿ ಕಾರು ಸಂಸ್ಥೆಯಾಗಿರುವ ಸೈಕ್(ಎಂಜಿ ಮೋಟಾರ್ ಮಾತೃ ಸಂಸ್ಥೆ)ಗೆ ಪೈಪೋಟಿ ನೀಡುತ್ತಿರುವಂತೆ ಭಾರತದಲ್ಲೂ ಎಂಜಿಗೆ ಪೈಪೋಟಿ ನೀಡಲು ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

ಹೊಸ ಕಾರು ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ಕಳೆದ ವರ್ಷ ಪುಣೆ ಬಳಿ 500 ಎಕರೆ ಭೂಮಿ ಖರೀದಿಗೆ ಮುಂದಾಗಿದ್ದ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಕೊನೆಯ ಹಂತದಲ್ಲಿ ತೆಲಂಗಾಣದಲ್ಲಿರುವ ಜನರಲ್ ಮೋಟಾರ್ಸ್ ಸಂಸ್ಥೆಯ ಹಳೆಯ ಕಾರು ಉತ್ಪಾದನಾ ಘಟಕವನ್ನೇ ಖರೀದಿ ಮಾಡಿ ಉನ್ನತೀಕರಿಸುತ್ತಿದೆ.

ಆಟೋ ಎಕ್ಸ್‌ಪೋ ನಂತರ ಹೊಸ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಲಿದ್ದು, 2021ರ ವೇಳೆಗೆ ಗ್ರೇಟ್ ವಾಲ್ ಮೋಟಾರ್ಸ್ ಹೊಸ ಕಾರುಗಳು ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿವೆ.

ಇಲ್ಲದೇ ಭಾರತದಿಂದಲೇ ಹೊಸ ಕಾರುಗಳನ್ನು ರಫ್ತು ಮಾಡಲು ಉದ್ದೇಶಿಸಿರುವ ಗ್ರೇಟ್ ವಾಲ್ ಸಂಸ್ಥೆಯು ಇಂಡೋನೇಷ್ಯಾ, ಆಸ್ಟ್ರೇಲಿಯಾ ಮಾರುಕಟ್ಟೆಗಳಿಗೆ ರಫ್ತು ಮಾಡುವ ಯೋಜನೆಯಲ್ಲಿದ್ದು, ಭಾರತದಲ್ಲಿ ತನ್ನ ಹೊಸ ಕಾರುಗಳ ಮಾರಾಟ ಸರಣಿಯನ್ನು ಪರಿಚಯಿಸಲು ಬರೋಬ್ಬರಿ ರೂ. 7 ಸಾವಿರ ಕೋಟಿ ಬಂಡವಾಳವನ್ನು ಹಂತಹಂತವಾಗಿ ಹೂಡಿಕೆ ಮಾಡಲಿದೆ.


Click it and Unblock the Notifications








