ಆಟೋ ಎಕ್ಸ್‌ಪೋ 2020: ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರು ಪ್ರದರ್ಶನಗೊಳಿಸಿದ ಹೈಮಾ
ಭಾರತದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕಠಿಣ ಕ್ರಮಕೈಗೊಳ್ಳಲಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಮಾರಾಟದ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರ ಪರಿಣಾಮ ಚೀನಿ ಮೂಲದ ಹಲವು ಆಟೋ ಉತ್ಪಾದನಾ ಸಂಸ್ಥೆಗಳ ತಮ್ಮ ಜನಪ್ರಿಯ ಎಲೆಕ್ಟ್ರಿಕ್ ಕಾರು ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿವೆ.

ಚೀನಿ ಆಟೋ ಉತ್ಪಾದನಾ ಸಂಸ್ಥೆಯಾಗಿರುವ FAW ಮೊದಲ ಬಾರಿಗೆ ಭಾರತೀಯ ಆಟೋ ಉದ್ಯಮವನ್ನು ಪ್ರವೇಶಿಸುತ್ತಿದ್ದು, ಮೊದಲ ಹಂತದಲ್ಲೇ ವಿವಿಧ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ. FAW ಸಂಸ್ಥೆಯು ಚೀನಿ ಮಾರುಕಟ್ಟೆಯಲ್ಲಿ ಪ್ರಮುಖ ಕಾರುಗಳ ಮಾಲೀಕತ್ವವನ್ನು ಹೊಂದಿದ್ದು, ಹೈಮಾ ಕೂಡಾ ಇದೇ ಸಂಸ್ಥೆ ಅಡಿ ಕಾರ್ಯನಿರ್ವಹಣೆ ಮಾಡುತ್ತಿದೆ. ಇದೀಗ ಭಾರತದಲ್ಲಿ ಬರ್ಡ್ ಗ್ರೂಪ್ ಜೊತೆಗೂಡಿ ಭಾರತೀಯ ಗ್ರಾಹಕ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ದೆಹಲಿ ಆಟೋ ಎಕ್ಸ್‌ಪೋ ಈಗಾಗಲೇ 7ಎಕ್ಸ್ ಎನ್ನುವ ಎಂಪಿವಿ ಮಾದರಿಯೊಂದನ್ನು ಅನಾವರಣಗೊಳಿಸಿರುವ ಹೈಮಾ ಸಂಸ್ಥೆಯು ಇದೀಗ ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ಪ್ರೇರಿತ ಇ1 ಮೈಕ್ರೋ ಎಸ್‌ಯುವಿ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಪ್ರದರ್ಶನಗೊಳಿಸಿದೆ.

ಇ1 ಹೊಸ ಕಾರು ರೂ. 10 ಲಕ್ಷದೊಳಗೆ ಬಿಡುಗಡೆಯಾಗುವ ಸುಳಿವು ನೀಡಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಲೀಥಿಯಂ ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಜ್‌ಗೆ ಕನಿಷ್ಠ 302 ಕಿ.ಮೀ ಮೈಲೇಜ್ ಹಿಂದಿರುಗಿಸುವುದಾಗಿ ಹೇಳಿಕೊಂಡಿದೆ.

ಆದರೆ ಹೊಸ ಕಾರಿನ ಒಳಭಾಗದ ತಾಂತ್ರಿಕ ಅಂಶಗಳ ಕುರಿತಾಗಿ ಯಾವುದೇ ನೀಡಿಲ್ಲವಾದರೂ ಹೊಸ ಕಾರು ಬಜೆಟ್ ಬೆಲೆಯೊಂದಿಗೆ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿಲಿದ್ದು, ಮೈಲೇಜ್ ವಿಚಾರವಾಗಿ ಹೊಸ ಕಾರು ಗ್ರಾಹಕರನ್ನು ಸೆಳೆಯಲಿದೆ. ಇನ್ನು ಹೈಮಾ ಆಟೋಮೊಬೈಲ್ ಸಂಸ್ಥೆಯು 1988ರಲ್ಲೇ ಕಾರು ಮಾರಾಟವನ್ನು ಆರಂಭಿಸಿದ್ದು, ಚೀನಿ ಮಾರುಕಟ್ಟೆಯಲ್ಲಿ ಮಜ್ದಾ ಕಾರುಗಳ ರೀಬ್ಯಾಡ್ಜ್ ಮಾರಾಟ ಮೂಲಕ ಜಾಗತಿಕ ಆಟೋ ಉತ್ಪಾದನಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಜೊತೆಗೆ ಚೀನಿ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಫಾವ್ ಗ್ರೂಪ್ ಸಂಸ್ಥೆ ಅಡಿ ಕಾರ್ಯನಿರ್ವಹಣೆ ಮಾಡುತ್ತಿರುವ ಹೈಮಾ ಸಂಸ್ಥೆಯು ಹೊಸ ಕಾರುಗಳ ಅಭಿವೃದ್ದಿಗಾಗಿ ಗ್ಲೊಬಲ್ ಆರ್ಕಿಟೆಕ್ಚರ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡುತ್ತಿರುವುದು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ.

ಸದ್ಯ ಚೀನಾದಲ್ಲಿ ಮಾರಾಟವಾಗುತ್ತಿರುವ ಐಶಾಂಗ್ ಇವಿ 360 ಕಾರು ಮಾದರಿಯೇ ಭಾರತದಲ್ಲಿ ಇ1 ಇವಿ ಕಾರು ಮಾದರಿಯಾಗಿ ಮಾರಾಟವಾಗಲಿದ್ದು, ಇ3 ಸೆಡಾನ್, ಇ5 ಎಸ್‌ಯುವಿ ಮತ್ತು ಇ70 ಎನ್ನುವ ಎಲೆಕ್ಟ್ರಿಕ್ ಎಂಪಿವಿ ಕಾರು ಕೂಡಾ ಭಾರತದಲ್ಲೂ ಬಿಡುಗಡೆಯಾಗುವ ನೀರಿಕ್ಷೆಗಳಿದೆ.

ಈ ಮೂಲಕ ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯಗೊಳ್ಳುತ್ತಿರುವ ಕಿಯಾ ಮೋಟಾರ್ಸ್, ಎಂಜಿ ಮೋಟಾರ್ ಸಂಸ್ಥೆಗಳಿಗೆ ಪೈಪೋಟಿ ನೀಡಲಿರುವ ಹೈಮಾ ಆಟೋಮೊಬೈಲ್ ಸಂಸ್ಥೆಯು ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಗೆ ಪೈಪೋಟಿಯಾಗಿ ಹಲವು ಹೊಸ ಕಾರು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.


Click it and Unblock the Notifications








