ಹೋಂಡಾ ಡಬ್ಲ್ಯುಆರ್-ವಿ ಫೇಸ್ಲಿಫ್ಟ್ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ
ಹೋಂಡಾ ಕಾರ್ಸ್ ಇಂಡಿಯಾ ತನ್ನ ಹೊಸ ಡಬ್ಲ್ಯುಆರ್-ವಿ ಫೇಸ್ಲಿಫ್ಟ್ ಆವೃತ್ತಿಯ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಹೋಂಡಾ ಕಂಪನಿಯು ಹೊಸ ಡಬ್ಲ್ಯುಆರ್-ವಿ ಫೇಸ್ಲಿಫ್ಟ್ ಆವೃತ್ತಿಯ ಬುಕ್ಕಿಂಗ್ ಅನ್ನು ಅಧಿಕೃತವಾಗಿ ಸ್ವೀಕರಿಸಲು ಪ್ರಾರಂಭಿಸಿದೆ.

ಡಬ್ಲ್ಯುಆರ್-ವಿ ಫೇಸ್ಲಿಫ್ಟ್ ಕಾರಿಗಾಗಿ ರೂ.21 ಸಾವಿರ ಪಾವತಿಸಿ ಬುಕ್ಕಿಂಗ್ ಅನ್ನು ಮಾಡಿಕೊಳ್ಳಬಹುದಾಗಿದೆ. ಶೀಘ್ರದಲ್ಲೇ ಡಬ್ಲ್ಯುಆರ್-ವಿ ಫೇಸ್ಲಿಫ್ಟ್ ಕಾರಿನ ಬೆಲೆಯನ್ನು ಘೋಷಿಸಬಹುದು. ಹೋಂಡಾ ಕಂಪನಿಯ ಹಿಂದಿನ ಡಬ್ಲ್ಯುಆರ್-ವಿ ಮಾದರಿಗೆ ಹೊಸ ಫೇಸ್ಲಿಫ್ಟ್ ಕಾರನ್ನು ಹೋಲಿಸಿದರೆ ಹಲವಾರು ಬದಲಾವಣೆಗಳಾಗಿರುವುದನ್ನು ಕಾಣಬಹುದು. ಫೇಸ್ಲಿಫ್ಟ್ ಆವೃತ್ತಿಯಲ್ಲಿ ಹೊಸ ಬಿಎಸ್ 6 ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಇದರ ಜೊತೆಗೆ ವಿನ್ಯಾಸ ಹಾಗೂ ಫೀಚರ್ಗಳನ್ನು ಸಹ ನವೀಕರಿಸಲಾಗಿದೆ.

ಹೊಸ ಕಾರಿನ ಗ್ರಿಲ್ ಹಾಗೂ ಬಂಪರ್ಗಳು ಹೊಸ ಲುಕ್ ಅನ್ನು ಹೊಂದಿದೆ. ಇದರ ಜೊತೆಗೆ ಎಲ್ಇಡಿ ಟೇಲ್ಲೈಟ್ ಹಾಗೂ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ ಹೊಂದಿರುವ ಫಾಗ್ ಲ್ಯಾಂಪ್ಗಳನ್ನು ಅಳವಡಿಸಲಾಗಿದೆ.

ಫಾಗ್ ಲ್ಯಾಂಪ್ ಹೌಸಿಂಗ್ಗಳು ಕಪ್ಪು ಬಣ್ಣವನ್ನು ಹೊಂದಿವೆ. ಇಂಟಿರಿಯರ್ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗದೇ ಇದ್ದರೂ ಫೇಸ್ಲಿಫ್ಟ್ ಆವೃತ್ತಿಯಲ್ಲಿ ಹೊಸ ಫ್ಯಾಬ್ರಿಕ್ ಸೀಟುಗಳನ್ನು ಅಳವಡಿಸಲಾಗುವುದು.

ಇವುಗಳ ಜೊತೆಗೆ ಟಚ್ಸ್ಕ್ರೀನ್ ಇನ್ಫೋಟೆನ್ಮೆಂಟ್ ಸಿಸ್ಟಂ ಹಾಗೂ ಡಿಜಿಟಲ್ ಇನ್ಸ್ ಟ್ರೂಮೆಂಟ್ಗಳನ್ನು ನೀಡಲಾಗುವುದು. ಮಾರುಕಟ್ಟೆಯಲ್ಲಿರುವ ಹಳೆಯ ತಲೆಮಾರಿನ ಹೋಂಡಾ ಡಬ್ಲ್ಯುಆರ್-ವಿಯಲ್ಲಿರುವ ಎಲೆಕ್ಟ್ರಾನಿಕ್ ಸನ್ರೂಫ್ ಹಾಗೂ ಕ್ರೂಸ್ ಕಂಟ್ರೋಲ್ಗಳನ್ನು ಫೇಸ್ಲಿಫ್ಟ್ ಆವೃತ್ತಿಯಲ್ಲಿಯೂ ಸಹ ನೀಡಲಾಗುವುದು.

ಡಬ್ಲ್ಯುಆರ್-ವಿ ಫೇಸ್ಲಿಫ್ಟ್ ಆವೃತ್ತಿಯನ್ನು 1.2 ಲೀಟರಿನ ಪೆಟ್ರೋಲ್ ಹಾಗೂ 1.5 ಲೀಟರಿನ ಡೀಸೆಲ್ ಬಿಎಸ್ 6 ಎಂಜಿನ್ನಲ್ಲಿ ಬಿಡುಗಡೆಗೊಳಿಸಲಾಗುವುದು. ಹಳೆಯ ತಲೆಮಾರಿನ ಕಾರಿನಂತೆ ಫೇಸ್ಲಿಫ್ಟ್ ಕಾರಿನಲ್ಲಿಯೂ ಸಹ 5 ಸ್ಪೀಡ್ ಹಾಗೂ 6 ಸ್ಪೀಡಿನ ಗೇರ್ಬಾಕ್ಸ್ ಆಯ್ಕೆಗಳನ್ನು ನೀಡಲಾಗುವುದು.

ಹೊಸ ಡಬ್ಲ್ಯುಆರ್-ವಿ ಫೇಸ್ಲಿಫ್ಟ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೊಸ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾತಾ ನೆಕ್ಸಾನ್, ಮಹೀಂದ್ರಾ ಎಕ್ಸ್ಯುವಿ 300, ಹ್ಯುಂಡೈ ವೆನ್ಯೂ ಮತ್ತು ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಹೋಂಡಾ ಕಂಪನಿಯು ಹೊಸ ಸಿಟಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಇದರೊಂದಿಗೆ ಶೀಘ್ರದಲ್ಲೇ ಹೊಸ ಡಬ್ಲ್ಯುಆರ್-ವಿ ಫೇಸ್ಲಿಫ್ಟ್ ಕಾರನ್ನು ಅನಾವರಣಗೊಳಿಸಿ ಬೆಲೆಯನ್ನು ಘೋಷಿಸಲಿದೆ.


Click it and Unblock the Notifications