ಹ್ಯುಂಡೈ ಬಿಡುಗಡೆಗೊಳಿಸಲಿದೆ ಕೈಗೆಟುಕುವ ಬೆಲೆಯ ಹೊಸ ಎಲೆಕ್ಟ್ರಿಕ್ ಕಾರು
ಡೀಸೆಲ್ ಹಾಗೂ ಪೆಟ್ರೋಲ್ ಕಾರುಗಳಿಂದಾಗಿ ವಾಯು ಮಾಲಿನ್ಯವು ವಿಪರೀತವಾಗಿ ಏರಿಕೆಯಾಗುತ್ತಿರುವ ಕಾರಣ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಬೇಡಿಕೆಯುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್ಟ್ ಅಪ್ ಕಂಪನಿಗಳಿಂದ ಹಿಡಿದು ಜನಪ್ರಿಯ ಕಂಪನಿಗಳವರೆಗೆ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ.

ಹ್ಯುಂಡೈ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ನಂತರದ ಸ್ಥಾನದಲ್ಲಿದೆ. ಹ್ಯುಂಡೈ ಕಂಪನಿಯು ಕಳೆದ ವರ್ಷ ಜುಲೈನಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಆದ ಕೋನಾವನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ರೂ.23.70 ಲಕ್ಷ ಬೆಲೆಯ ಈ ಎಲೆಕ್ಟ್ರಿಕ್ ಕಾರು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.

ಈ ಕಾರು ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರತಿಕ್ರಿಯೆಯನ್ನು ಪಡೆದಿದ್ದರೂ ಸಹ, ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಭಾರತೀಯ ಗ್ರಾಹಕರು ನಿರಾಶಾರಾಗಿರುವುದು ನಿಜ.

ಎಂಜಿ ಕಂಪನಿಯ ಝಡ್ಎಸ್ ಹಾಗೂ ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ಕಾರುಗಳು ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡುತ್ತಿವೆ. ಈಗ ಹ್ಯುಂಡೈ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರಿನ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಈ ಬಗ್ಗೆ ಆಟೋ ಕಾರ್ ಪ್ರೊ ಜೊತೆಗೆ ಮಾತನಾಡಿರುವ, ಹುಂಡೈ ಕಂಪನಿಯ ಎಂಡಿ ಹಾಗೂ ಸಿಇಒ ಎಸ್ ಎಸ್ ಕಿಮ್ ಭಾರತಕ್ಕಾಗಿ ಕೈಗೆಟಕುವ ಬೆಲೆಯ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ತಿಳಿಸಿದ್ದಾರೆ.

ಈ ಕಾರು ಭಾರತೀಯರಿಗೆ ಕೈಗೆಟುಕುವ ದರದಲ್ಲಿ ದೊರೆಯಲಿದೆ. ಈ ಕಾರ್ ಅನ್ನು ಭಾರತಕ್ಕಾಗಿ ತಯಾರಿಸಲಾಗುವುದು ಹಾಗೂ ಭಾರತದಲ್ಲಿಯೇ ತಯಾರಿಸಲಾಗುವುದು.

ಮುಂದಿನ ಎರಡು ವರ್ಷಗಳಲ್ಲಿ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಇಲ್ಲಿಂದಲೇ ಬೇರೆ ದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಕಿಮ್ ಹೇಳಿದ್ದಾರೆ.

ಹ್ಯುಂಡೈನ ಈ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದಾಗ 200ರಿಂದ 300 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಈ ಎಲೆಕ್ಟ್ರಿಕ್ ಕಾರು ಟಾಟಾ ನೆಕ್ಸಾನ್, ಮಹೀಂದ್ರಾದ ಎಸ್‌ಯುವಿ 300 ಕಾರುಗಳಿಗೆ ಪೈಪೋಟಿ ನೀಡಲಿದೆ. ಈ ಹೊಸ ಕಾರಿನ ಬೆಲೆ ರೂ.10 ಲಕ್ಷದಿಂದ 15 ಲಕ್ಷಗಳಾಗುವ ಸಾಧ್ಯತೆಗಳಿವೆ.

ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರು 2022ರ ಮಧ್ಯಭಾಗದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಹ್ಯುಂಡೈ ಕೋನಾದಂತೆ, ಈ ಹೊಸ ಎಲೆಕ್ಟ್ರಿಕ್ ಕಾರು ಸಹ ಭಾರಿ ಪ್ರತಿಕ್ರಿಯೆಯನ್ನು ಪಡೆಯುವ ನಿರೀಕ್ಷೆಗಳಿವೆ.
ಸೂಚನೆ: ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.


Click it and Unblock the Notifications