ಭಾರತದಲ್ಲಿ ಪಾಲಿಸೆಡ್ ಎಸ್‌ಯುವಿ ಬಿಡುಗಡೆಗೆ ಅಂತಿಮ ಹಂತದ ಸಿದ್ದತೆಯಲ್ಲಿ ಹ್ಯುಂಡೈ
ಹ್ಯುಂಡೈ ಇಂಡಿಯಾ ಕಂಪನಿಯು ಮುಂಬರುವ ದಿನಗಳಲ್ಲಿ ವಿವಿಧ ಮಾದರಿಯ ಹಲವು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಆಮದು ನೀತಿ ಅಡಿ ಐಷಾರಾಮಿ ಎಸ್‌ಯುವಿ ಮತ್ತು ಎಂಪಿವಿ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೊಸ ಕಾರುಗಳ ಮಾರಾಟದಲ್ಲಿ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಬೆಳವಣಿಗೆ ಸಾಧಿಸುತ್ತಿರುವ ಹ್ಯುಂಡೈ ಕಂಪನಿಯು ಮಧ್ಯಮ ಗಾತ್ರದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿದ್ದು, ಇದೀಗ ಮಾರುಕಟ್ಟೆ ವಿಸ್ತರಣೆಗಾಗಿ ಪ್ರೀಮಿಯಂ ಮಾದರಿಯ ಎಂಪಿವಿ ಮತ್ತು ಎಸ್‌ಯುವಿ ಕಾರುಗಳ ಮಾರಾಟದತ್ತ ಎದುರು ನೋಡುತ್ತಿದೆ. ಮಾರುಕಟ್ಟೆಯಲ್ಲಿ ಸದ್ಯ ಭಾರೀ ಜನಪ್ರಿಯತೆ ಹೊಂದಿರುವ ಟೊಯೊಟಾ ಫಾರ್ಚೂನರ್ ಮತ್ತು ಇನೋವಾ ಕ್ರಿಸ್ಟಾ ಕಾರುಗಳಿಗೆ ಪೈಪೋಟಿಯಾಗಿ ಹ್ಯುಂಡೈ ಹೊಸ ಎಸ್‌ಯುವಿವೊಂದು ಮಾರುಕಟ್ಟೆ ಪ್ರವೇಶಿಸುತ್ತಿದೆ.

ಹ್ಯುಂಡೈ ಕಂಪನಿಯು ಪ್ರೀಮಿಯಂ ಮಾದರಿಯ ಎಂಪಿವಿ ಮತ್ತು ಎಸ್‌ಯುವಿ ಕಾರುಗಳ ಬಿಡುಗಡೆಗಾಗಿ ಈಗಾಗಲೇ ಹಲವು ಸುತ್ತಿನ ಮಾರುಕಟ್ಟೆ ಅಧ್ಯಯನ ನಡೆಸಿದ್ದು, ಫುಲ್ ಸೈಜ್ ಎಸ್‌ಯುವಿ ಮತ್ತು ಎಂಪಿವಿ ಕಾರುಗಳತ್ತ ಗಮನಹರಿಸುತ್ತಿದೆ.

ಭಾರತದಲ್ಲಿ ಪ್ರೀಮಿಯಂ ಕಾರು ಆವೃತ್ತಿಗಳ ಮಾರಾಟಕ್ಕೆ ಉತ್ತಮ ಮಾರುಕಟ್ಟೆ ಇರುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಕಂಪನಿಯು, ಯುರೋಪ್ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಲ್ಲಿರುವ ಹೊಸ 7 ಸೀಟರ್ ಎಸ್‌ಯುವಿ ಮತ್ತು 9 ಸೀಟರ್ ಎಂಪಿವಿ ಕಾರನ್ನು ಪರಿಚಯಿಸುವುದಾಗಿ ಖಚಿತಪಡಿಸಿದೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಮಾಹಿತಿಗಳ ಪ್ರಕಾರ, ಐಷಾರಾಮಿ ಎಸ್‌ಯುವಿ ಮಾದರಿಯಾಗಿ ಪಾಲಿಸೆಡ್ ಮತ್ತು ಎಂಪಿವಿ ಆವೃತ್ತಿಯಾಗಿ ಸ್ಟಾರೆಕ್ಸ್ ಕಾರುಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಪಾಲಿಸೆಡ್ ಕಾರು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡಲಿದ್ದರೆ ಸ್ಟಾರೆಕ್ಸ್ ಎಂಪಿವಿ ಕಾರು ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಕಿಯಾ ಕಾರ್ನಿವಾಲ್ ಕಾರುಗಳ ನಡುವಿನ ಸ್ಥಾನದೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.

ಹೀಗಾಗಿ ಹೊಸ ಕಾರುಗಳು ಭಾರತದಲ್ಲಿ ಪ್ರತಿಸ್ಪರ್ಧಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಕೇಂದ್ರ ಸರ್ಕಾರವು ಕಳೆದ ವರ್ಷ ಜಾರಿಗೆ ತಂದಿರುವ ಹೊಸ ಆಮದು ನೀತಿಯು ವಿದೇಶಿ ವಾಹನ ಉತ್ಪಾದನಾ ಕಂಪನಿಗಳಿಗೆ ವರದಾನವಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಆಮದು ನೀತಿ ಅಡಿಯಲ್ಲಿ ವಿದೇಶಿ ಮಾರುಕಟ್ಟೆಗಳಿಂದ ವಾಹನ ಕಂಪನಿಗಳು ತಮ್ಮದೆ ಉತ್ಪಾದನೆಯ 2500 ವಾಹನಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಬಹುದಾಗಿದ್ದು, ಇದೀಗ ಹ್ಯುಂಡೈ ಸೇರಿದಂತೆ ಹಲವು ಕಾರು ಕಂಪನಿಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಕೆಲವು ಕಾರು ಮಾದರಿಗಳನ್ನು ಸೀಮಿತ ಪ್ರಮಾಣದಲ್ಲಿ ಮಾರಾಟಕ್ಕೆ ಮುಂದಾಗಿವೆ.
MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಮಾಹಿತಿಗಳ ಪ್ರಕಾರ, ಹೊಸ ಕಾರುಗಳನ್ನು 2021-22ರ ಹಣಕಾಸು ವರ್ಷದ ಅವಧಿಯೊಳಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಕಂಪನಿಯು ಬಿಡುಗಡೆಗೂ ಮುನ್ನ ಎಂಜಿನ್ ಆಯ್ಕೆ ಮತ್ತು ಬೆಲೆ ವಿಚಾರದಲ್ಲಿ ಮಹತ್ವದ ನಿರ್ಧಾರಕ್ಕಾಗಿ ಮಾರುಕಟ್ಟೆ ಅಧ್ಯಯನ ನಡೆಸುತ್ತಿದೆ.

ಎಂಜಿನ್ ಸಾಮರ್ಥ್ಯ
ಪಾಲಿಸೆಡ್ ಎಸ್‌ಯುವಿ ಮಾದರಿಯು ವಿದೇಶಿ ಮಾರುಕಟ್ಟೆಗಳಲ್ಲಿ 3.8-ಲೀಟರ್ ವಿ-6 ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗುವಾಗ ಕಿಯಾ ಕಾರ್ನಿವಾಲ್ ಕಾರಿನಲ್ಲಿ ಬಳಕೆ ಮಾಡಲಾಗಿರುವ 200-ಬಿಎಚ್‌ಪಿ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡುವ ಸಾಧ್ಯತೆಗಳಿವೆ.
MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಈ ಮೂಲಕ ಮಾರುಕಟ್ಟಯಲ್ಲಿ ಹೊಸ ಸಂಚಲನ ಸೃಷ್ಠಿಸಲಿರುವ ಹೊಸ ಕಾರುಗಳು ಹ್ಯುಂಡೈ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಲಿದ್ದು, ಪಾಲಿಸೆಡ್ ಕಾರು ಎಕ್ಸ್‌ಶೋರೂಂ ಪ್ರಕಾರ ರೂ.28 ಲಕ್ಷದಿಂದ ರೂ.32 ಲಕ್ಷ ಬೆಲೆ ಹೊಂದಲಿದ್ದರೆ ಸ್ಟಾರೆಕ್ಸ್ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 24 ಲಕ್ಷದಿಂದ ರೂ.30 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications