ಸ್ಯಾಂಟ್ರೋ ಟಾಪ್ ಎಂಡ್ ವೆರಿಯೆಂಟ್‌ನಲ್ಲಿ ಆಟೋಮ್ಯಾಟಿಕ್ ವರ್ಷನ್ ಪರಿಚಯಿಸಲಿದೆ ಹ್ಯುಂಡೈ
ಬಿಎಸ್-6 ಪೆಟ್ರೋಲ್ ಕಾರುಗಳ ಮಾದರಿಗಳ ಮಾರಾಟಕ್ಕೆ ಈಗಾಗಲೇ ಚಾಲನೆ ನೀಡಿರುವ ಹ್ಯುಂಡೈ ಸಂಸ್ಥೆಯು ಶೀಘ್ರದಲ್ಲೇ ತನ್ನ ಜನಪ್ರಿಯ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಮಾದರಿಯಾದ ಸ್ಯಾಂಟ್ರೋ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಕಾರು ಇದೇ ತಿಂಗಳು ಖರೀದಿಗೆ ಲಭ್ಯವಾಗಲಿದೆಯೆಂತೆ.

ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನುಸಾರ ಪ್ರಸ್ತುತ ವಾಹನ ಮಾದರಿಗಳನ್ನು ಉನ್ನತೀಕರಿಸುತ್ತಿವೆ. ಹ್ಯುಂಡೈ ಕೂಡಾ ಈಗಾಗಲೇ ಗ್ರ್ಯಾಂಡ್ ಐ10 ನಿಯೊಸ್ ಕಾರಿನ ಪೆಟ್ರೋಲ್ ಮಾದರಿಯನ್ನು ಬಿಎಸ್-6 ನಿಯಮದಂತೆ ಬಿಡುಗಡೆ ಮಾಡಿದ್ದು, ಇದೇ ತಿಂಗಳಾಂತ್ಯಕ್ಕೆ ಬಹುತೇಕ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಲಿದೆ.

ಬಿಎಸ್-6 ಎಂಜಿನ್‌ನಿಂದಾಗಿ ಹೊಸ ಕಾರಗಳ ಬೆಲೆಯಲ್ಲಿ ತುಸು ದುಬಾರಿಯಾಗಿಲಿದ್ದು, ಪೆಟ್ರೋಲ್ ಕಾರುಗಳ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತ ರೂ.10 ಸಾವಿರದಿಂದ ರೂ.30 ಸಾವಿರ ತನಕ ಮತ್ತು ಡೀಸೆಲ್ ಕಾರುಗಳ ಬೆಲೆಯು ರೂ.80 ಸಾವಿರದಿಂದ ರೂ.1.50 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆಯಲಿವೆ.

ಇದೀಗ ಬಿಡುಗಡೆಗೆ ಸಿದ್ದವಾಗಿರುವ ಸ್ಯಾಂಟ್ರೋ ಕೂಡಾ ಹೊಸ ಪೆಟ್ರೋಲ್ ಆಟೋಮ್ಯಾಟಿಕ್ ಎಂಜಿನ್‌ನೊಂದಿಗೆ ಕೆಲವು ಪ್ರೀಮಿಯಂ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದ್ದು, ಮಾಹಿತಿಗಳ ಪ್ರಕಾರ, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತಲೂ ಹೆಚ್ಚುವರಿಯಾಗಿ ರೂ.22 ಸಾವಿರದಿಂದ ರೂ.27 ಸಾವಿರ ತನಕ ಹೆಚ್ಚುವರಿ ಬೆಲೆ ಪಡೆಯಲಿದೆ ಎಂದು ಹೇಳಲಾಗಿದೆ.

ಇನ್ನು 2018ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದ ಹೊಸ ತಲೆಮಾರಿನ ಸ್ಯಾಂಟ್ರೋ ಕಾರು ಇದುವರೆಗೆ ದಾಖಲೆ ಪ್ರಮಾಣದ ಮಾರಾಟ ಕಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 4.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.5.79 ಲಕ್ಷ ಬೆಲೆ ಪಡೆದುಕೊಂಡಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಮಾತ್ರ ಹೊಂದಿರುವ ಸ್ಯಾಂಟ್ರೋ ಕಾರು ಬಿಎಸ್-6 ಎಂಜಿನ್ ನಂತರ ಎಲ್ಲಾ ಆವೃತ್ತಿಗಳಲ್ಲೂ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಟಾಪ್ ಎಂಡ್ ವೆರಿಯೆಂಟ್ ಆಸ್ಟಾದಲ್ಲಿ ಮ್ಯಾನುವಲ್ ಮಾತ್ರವಲ್ಲದೇ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದುಕೊಳ್ಳಲಿದೆ.

ಇದಲ್ಲದೇ ಹ್ಯುಂಡೈ ಸಂಸ್ಥೆಯು ಬಿಎಸ್-6 ಮಾದರಿಯನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ತನ್ನ ನೆಚ್ಚಿನ ಗ್ರಾಹಕರಿಗಾಗಿ ಆ್ಯನಿವರ್ಸರಿ ಸ್ಯಾಂಟ್ರೋ ಎಡಿಷನ್ ಬಿಡುಗಡೆ ಮಾಡಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಆ್ಯನಿವರ್ಸರಿ ಎಡಿಷನ್ ಸ್ಯಾಂಟ್ರೋ ಕಾರಿನ ಸ್ಪೋರ್ಟ್ಜ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ವರ್ಷದ ಸಂಭ್ರಮಕ್ಕಾಗಿ ಕಾರಿನ ಒಳಭಾಗದ ವಿನ್ಯಾಸಗಳಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಆಕರ್ಷಿಸುತ್ತಿದೆ.

ಕಾರಿನ ಒಳವಿನ್ಯಾಸದಲ್ಲಿ ಪ್ರಮುಖ ಬದಲಾವಣೆ ಅಂದ್ರೆ, ಸಂಪೂರ್ಣ ಕಪ್ಪು ಬಣ್ಣದ ಇಂಟಿರಿಯರ್ ಜೊತೆಗೆ ತಿಳಿನಿಲಿ ಬಣ್ಣದ ಇನ್ಸ್‌ರ್ಟ್, ಹೊಸ ಫ್ಯಾಬ್ರಿಕ್ ಆಸನಗಳನ್ನು ಪಡೆದುಕೊಂಡಿದ್ದು, ಇನ್ನುಳಿದ ತಾಂತ್ರಿಕ ಅಂಶಗಳನ್ನು ಸಾಮಾನ್ಯ ಕಾರಿನ ಮಾದರಿಯಲ್ಲೇ ಮುಂದುವರಿಸಲಾಗಿದೆ.

ಇದೀಗ ಬಿಡುಗಡೆಯಾಗುತ್ತಿರುವ ಬಿಎಸ್-6 ಸ್ಯಾಂಟ್ರೋ ಮಾದರಿಯು ಕೂಡಾ ಆ್ಯನಿವರ್ಸರಿ ಮಾದರಿಯಲ್ಲೇ ಹೊಸ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, ಹೊಸ ಎಂಜಿನ್‌ನಿಂದಾಗಿ ಕಾರಿನ ಮೈಲೇಜ್ ಹೆಚ್ಚಳವಾಗಿರುವುದಲ್ಲದೆ ಮಾಲಿನ್ಯ ಹೊರಸೂಸುವಿಕೆ ಪ್ರಮಾಣ ಕೂಡಾ ಸಾಕಷ್ಟು ಇಳಿಕೆಯಾಗಿದೆ.


Click it and Unblock the Notifications








