ಆಟೋ ಎಕ್ಸ್‌ಪೋ 2020: ಅನಾವರಣಗೊಳ್ಳಲಿದೆ ಬಿಎಸ್ 6 ಹ್ಯುಂಡೈ ವರ್ನಾ
ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟರ್, ಮುಂದಿನ ತಿಂಗಳು ನಡೆಯಲಿರುವ 2020ರ ಆಟೋ ಎಕ್ಸ್‌ಪೋದಲ್ಲಿ ತನ್ನ ಹೊಸ ಹ್ಯುಂಡೈ ವರ್ನಾ ಫೇಸ್‍ಲಿಫ್ಟ್ ಕಾರ್ ಅನ್ನು ಅನಾವರಣಗೊಳಿಸಲು ಸಜ್ಜಾಗಿದೆ.

ಆಟೋ ಎಕ್ಸ್‌ಪೋ ಶುರುವಾಗಲು ಎರಡು ವಾರಗಳು ಬಾಕಿ ಉಳಿದಿದ್ದು, ಹ್ಯುಂಡೈ ವರ್ನಾದ ಫೇಸ್‍ಲಿಫ್ಟ್ ಕಾರಿನ ಎಂಜಿನ್ ಸ್ಪೆಸಿಫಿಕೇಶನ್‍ಗಳನ್ನು ಬಹಿರಂಗಪಡಿಸಲಾಗಿದೆ. ಈ ಹೊಸ ಕಾರಿನಲ್ಲಿ ಕಿಯಾ ಮೋಟಾರ್ಸ್‍ನ 1.5 ಲೀಟರಿನ ಸಿಆರ್‍ಡಿಐ ಡೀಸೆಲ್ ಎಂಜಿನ್ ಹಾಗೂ 1.5 ಲೀಟರಿನ ಪೆಟ್ರೋಲ್ ಎಂಜಿನ್‍ಗಳನ್ನು ಅಳವಡಿಸಲಾಗಿದೆ.

ಡೀಸೆಲ್ ಎಂಜಿನ್ 113 ಬಿಹೆಚ್‍ಪಿ ಪವರ್ ಹಾಗೂ 250 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, ಪೆಟ್ರೋಲ್ ಎಂಜಿನ್ 113 ಬಿಹೆಚ್‍ಪಿ ಪವರ್ ಹಾಗೂ 144 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಮಾರುಕಟ್ಟೆಯಲ್ಲಿರುವ ವರ್ನಾ ಕಾರಿನಲ್ಲಿ 1.4 ಲೀಟರ್ ಡೀಸೆಲ್ ಹಾಗೂ 1.6 ಲೀಟರಿನ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಇದರಲ್ಲಿ ಡೀಸೆಲ್ ಎಂಜಿನ್ 89 ಬಿಹೆಚ್‍ಪಿ ಪವರ್ ಹಾಗೂ 220 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, ಪೆಟ್ರೋಲ್ ಎಂಜಿನ್ 99 ಬಿಹೆಚ್‍ಪಿ ಪವರ್ ಹಾಗೂ 132 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 1.6 ಲೀಟರಿನ ಡೀಸೆಲ್ ಎಂಜಿನ್ 126 ಬಿಹೆಚ್‍ಪಿ ಪವರ್ ಹಾಗೂ 260 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

1.6 ಲೀಟರಿನ ಪೆಟ್ರೋಲ್ ಎಂಜಿನ್ 121 ಬಿಹೆಚ್‍ಪಿ ಪವರ್ ಹಾಗೂ 151 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಬಿಎಸ್ 6 ಎಂಜಿನ್ ಹೊಂದಲಿರುವ ಹೊಸ ವರ್ನಾ ಫೇಸ್‍ಲಿಫ್ಟ್ ಕಾರಿನ ಇಂಟಿರಿಯರ್‍ನಲ್ಲಿರುವ ಅಪ್‍ಹೋಲೆಸ್ಟರಿಯನ್ನು ಅಪ್‍ಡೇಟ್ ಮಾಡುವ ಸಾಧ್ಯತೆಗಳಿವೆ. ಹೊಸ ವರ್ನಾ ಕಾರು ಹಲವಾರು ಆರಾಮದಾಯಕವಾದ ಫೀಚರ್‍ಗಳನ್ನು ಹೊಂದಿರುವ ಸಾಧ್ಯತೆಗಳಿವೆ.

ಈ ಕಾರಿನಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋಗೆ ಹೊಂದಿಕೊಳ್ಳುವ ಹೊಸ ಟಚ್‍ಸ್ಕ್ರೀನ್ ಇನ್ಫೋಟೆನ್‍ಮೆಂಟ್ ಸಿಸ್ಟಂ, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಹಾಗೂ ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್ ಅಳವಡಿಸಿರುವ ಸಾಧ್ಯತೆಗಳಿವೆ.

ಹೊಸ ವರ್ನಾ ಕಾರು ಎಲ್‍ಇಡಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್, ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಒಆರ್‍ವಿಎಂ, ಎಲೆಕ್ಟ್ರಿಕ್ ಸನ್‍ರೂಫ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ವೆಂಟಿಲೇಟೆಡ್ ಫ್ರಂಟ್ ಸೀಟ್, ವೈರ್‍ಲೆಸ್ ಚಾರ್ಜಿಂಗ್ ಹಾಗೂ ಕೂಲ್ ಬಾಕ್ಸ್ ಗಳನ್ನು ಹೊಂದಿರಲಿದೆ.

2020ರ ಹೊಸ ವರ್ನಾ ಕಾರಿನಲ್ಲಿ ಸುರಕ್ಷತೆಗಾಗಿ ಇಬಿಡಿ ಹೊಂದಿರುವ ಎಬಿಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ಸೇಫ್ಟಿ ಅಲಾರಾಂ, ಒವರ್ ಸ್ಪೀಡಿಂಗ್ ವಾರ್ನಿಂಗ್ ಸಿಸ್ಟಂ, ಡ್ಯುಯಲ್ ಫ್ರಂಟ್ ಏರ್‍ಬ್ಯಾಗ್, ಐಎಸ್‍ಒಎಫ್‍ಐಎಕ್ಸ್ ಚೈಲ್ಡ್ ಮೌಂಟ್‍ಗಳಿರಲಿವೆ.

ಮಾರುಕಟ್ಟೆಯಲ್ಲಿರುವ ಹಳೆಯ ತಲೆಮಾರಿನ ಹ್ಯುಂಡೈ ವರ್ನಾ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.18 ಲಕ್ಷದಿಂದ ರೂ.14.08 ಲಕ್ಷಗಳಾಗಿದೆ. ಬಿಎಸ್ 6 ಎಂಜಿನ್ ಹೊಂದಲಿರುವ ಹೊಸ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.10 ಲಕ್ಷದಿಂದ ರೂ.16 ಲಕ್ಷಗಳಾಗುವ ಸಾಧ್ಯತೆಗಳಿವೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಹ್ಯುಂಡೈ ಕಂಪನಿಯು ಆಟೋ ಎಕ್ಸ್‌ಪೋದಲ್ಲಿ ವರ್ನಾ ಫೇಸ್‍ಲಿಫ್ಟ್ ಕಾರ್ ಅನ್ನು ಅನಾವರಣಗೊಳಿಸುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹ್ಯುಂಡೈ ಕಂಪನಿಯು ಈ ಆಟೋ ಎಕ್ಸ್‌ಪೋದಲ್ಲಿ ಬೇರೆ ಕಂಪನಿಗಳಂತೆ ಹಲವು ಫೇಸ್‍ಲಿಫ್ಟ್ ಕಾರುಗಳನ್ನು ಹಾಗೂ ಹೊಸ ಕಾರುಗಳನ್ನು ಜೊತೆಗೆ ಕಾನ್ಸೆಪ್ಟ್ ಕಾರುಗಳನ್ನು ಸಹ ಪ್ರದರ್ಶಿಸುವ ಸಾಧ್ಯತೆಗಳಿವೆ.


Click it and Unblock the Notifications