2020ರ ಟ್ಯುಸಾನ್ ಫೇಸ್‌ಲಿಫ್ಟ್ ಬಿಡುಗಡೆಗೊಳಿಸಿದ ಹ್ಯುಂಡೈ
ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ 2020ರ ಟ್ಯುಸಾನ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಕಾರು ದುಬಾರಿ ಬೆಲೆಯೊಂದಿಗೆ ಹಲವಾರು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಹ್ಯುಂಡೈ ಹೈ ಎಂಡ್ ಕಾರುಗಳಲ್ಲಿ ಒಂದಾಗಿರುವ ಟ್ಯುಸಾನ್ ಎಸ್‌ಯುವಿ ಆವೃತ್ತಿಯು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿದ್ದು, ಬಿಎಸ್-6 ನಿಯಮ ಅನುಸಾರವಾಗಿ ಇದೀಗ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ. ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಆರಂಭಿಕವಾಗಿ ರೂ.22.30 ಲಕ್ಷ ಬೆಲೆ ಹೊಂದಿದ್ದು, ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಜಿಎಲ್(ಒ), ಜಿಎಲ್ಎಸ್ ಮತ್ತು ಜಿಎಲ್ಎಸ್ 4ಡಬ್ಲ್ಯುಡಿ ವೆರಿಯೆಂಟ್‌ಗಳಲ್ಲಿ ಖರೀದಿ ಲಭ್ಯವಿದ್ದು, ಟಾಪ್ ಎಂಡ್ ವೆರಿಯೆಂಟ್‌ನಲ್ಲಿ ಡೀಸೆಲ್ ಎಂಜಿನ್ ಅನ್ನು ಮಾತ್ರವೇ ನೀಡಲಾಗಿದೆ.

ಇನ್ನುಳಿದ ಎರಡು ಆರಂಭಿಕ ವೆರಿಯೆಂಟ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆಯ್ಕೆಗಳು ಲಭ್ಯವಿದ್ದು, ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಗಳಲ್ಲೇ ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಎಂಜಿನ್ ಸಾಮರ್ಥ್ಯ
ಹೊಸ ಟ್ಯುಸಾನ್ ಕಾರಿನಲ್ಲಿ ಬಿಎಸ್-6 ವೈಶಿಷ್ಟ್ಯತೆಯ 2.0-ಲೀಟರ್ ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ನೀಡಲಾಗಿದ್ದು, ಪೆಟ್ರೋಲ್ ಮಾದರಿಯು 150-ಬಿಎಚ್‌ಪಿ, 192-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡೀಸೆಲ್ ಮಾದರಿಯು 180-ಬಿಎಚ್‌ಪಿ, 400-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೀಡಲಾಗಿದ್ದು, ಹೊಸದಾಗಿ ಪರಿಚಯಿಸಲಾಗಿರುವ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ದ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಇನ್ನು ಹ್ಯುಂಡೈ ಪ್ರೀಮಿಯಂ ಎಸ್‌ಯುವಿ ಕಾರಿನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, ಬಲಿಷ್ಠ ನೋಟ ಹೊಂದಿರುವ ಕಾಸ್‌ಕ್ಯಾಡಿಂಗ್ ಫ್ರಂಟ್ ಗ್ರಿಲ್, ಹೊಸ ವಿನ್ಯಾಸದ ಫ್ರಂಟ್ ಅಂಡ್ ರಿಯರ್ ಬಂಪರ್, 18-ಇಂಚಿನ ಅಲಾಯ್ ವೀಲ್ಹ್, ಎಲ್ಇಡಿ ಟೈಲ್‌ಲೈಟ್, ನಂಬರ್ ಪ್ಲೇಟ್ ಹೌಸಿಂಗ್, ಸಿಲ್ವರ್ ಸ್ಕಫ್ ಪ್ಲೇಟ್, ರೈನ್ ಸೆನ್ಸಿಂಗ್ ವೈಫರ್ ಮತ್ತು ಟ್ವಿನ್ ಎಕ್ಸಾಸ್ಟ್ ಟಿಪ್ಸ್ ಪ್ರಮುಖ ಆಕರ್ಷಣೆಯಾಗಿದೆ.

ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಮಡಿಕೆ ಮಾಡಬಹುದಾದ ಇನ್ಪೋಟೈನ್‌ಮೆಂಟ್ ಸಿಸ್ಟಂ, ಹೊಸ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 33 ಫೀಚರ್ಸ್‌ಗಳನ್ನು ಒಳಗೊಂಡ ಬ್ಲ್ಯೂ ಲಿಂಕ್ ಟೆಕ್ನಾಲಜಿಯು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಅಂಡ್ರಾಯಿಡ್ ಆಟೋ ಮತ್ತು ಕಾರ್‌ಪ್ಲೇ ಮೂಲಕ ನಿಯಂತ್ರಣ ಮಾಡಬಹುದಾದ ಬ್ಲ್ಯೂ ಲಿಂಕ್ ತಂತ್ರಜ್ಞಾನವು ಹೊಸ ಕಾರಿಗೆ ಹೆಚ್ಚಿನ ಮಟ್ಟದ ಸುರಕ್ಷತೆ ನೀಡಲಿದ್ದು, ಇನ್ನುಳಿದಂತೆ ಹೊಸ ಕಾರಿನಲ್ಲಿ ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಸ್ಟೀರಿಂಗ್ ಮೌಟೆಂಡ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕ ಮತ್ತು ಪ್ರಯಾಣಿಕರ ಆಸನಗಳು, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಸೇರಿದಂತೆ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಈ ಮೂಲಕ ಮಧ್ಯಮ ಗಾತ್ರ ಎಸ್‌ಯುವಿ ಆವೃತ್ತಿಗಳಲ್ಲೇ ವಿನೂತನ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಟ್ಯುಸಾನ್ ಕಾರು ಸ್ಕೋಡಾ ಕರೋಕ್, ಹೋಂಡಾ ಸಿಆರ್‌ವಿ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.


Click it and Unblock the Notifications