ಆಟೋ ಬಿಡಿಭಾಗಗಳ ಕೊರತೆ: ಮಹೀಂದ್ರಾ ಕಾರು ಮಾರಾಟದಲ್ಲಿ ಶೇ.58ರಷ್ಟು ಕುಸಿತ
ಚೀನಾದಲ್ಲಿ ತಲೆದೊರಿರುವ ಕರೋನಾ ವೈರಸ್ ಪರಿಣಾಮದಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿನ ಆಟೋ ಉತ್ಪಾದನಾ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಆಟೋ ಬಿಡಿಭಾಗಗಳ ಆಮದು ಕುಂಠಿತಗೊಂಡಿರುವುದು ಹೊಸ ವಾಹನ ಉತ್ಪಾದನೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.

ದೇಶದ 3ನೇ ಅತಿದೊಡ್ಡ ವಾಹನ ಉತ್ಪಾದನಾ ಸಂಸ್ಥೆಯಾಗಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು ಕೂಡಾ ಫೆಬ್ರುವರಿ ಅವಧಿಯಲ್ಲಿನ ವಾಹನ ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದು, ಒಟ್ಟಾರೆ ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ಶೇ.42 ರಷ್ಟು ಕುಸಿತ ಕಂಡುಬಂದಿದೆ. ಪ್ರಯಾಣಿಕ ಕಾರುಗಳ ವಿಭಾಗದಲ್ಲಿ ಮತ್ತಷ್ಟು ಹಿನ್ನಡೆ ಅನುಭವಿಸಿರುವ ಮಹೀಂದ್ರಾ ಸಂಸ್ಥೆಯು ಕಳೆದ ವರ್ಷದ ಫೆಬ್ರುವರಿ ಅವಧಿಯ ಕಾರು ಮಾರಾಟಕ್ಕೆ ಹೋಲಿಕೆ ಮಾಡಿದ್ದಲ್ಲಿ ಶೇ.58ರಷ್ಟು ಕುಸಿತ ಕಂಡಿದೆ.

2019ರ ಫೆಬ್ರುವರಿ ಅವಧಿಯಲ್ಲಿ ಒಟ್ಟು 52,915 ವಾಹನಗಳನ್ನು ಮಾರಾಟ ಮಾಡಿದ್ದ ಮಹೀಂದ್ರಾ ಸಂಸ್ಥೆಯು ಈ ವರ್ಷದ ಫೆಬ್ರುವರಿ ಅವಧಿಯಲ್ಲಿ ಕೇವಲ 30,637 ವಾಹನಗಳನ್ನು ಮಾರಾಟ ಮಾಡಿದ್ದು, ಶೇ.42 ರಷ್ಟು ಮಾರಾಟ ಪ್ರಮಾಣ ಇಳಿಕೆಯಾಗಿದೆ.

ವಾಣಿಜ್ಯ ವಾಹನ ಮಾರಾಟ ಪ್ರಮಾಣದಲ್ಲೂ ತೀವ್ರ ಹಿನ್ನಡೆ ಅನುಭವಿಸಿರುವ ಮಹೀಂದ್ರಾ ಸಂಸ್ಥೆಯು, 2019 ರ ಫೆಬ್ರವರಿಯಲ್ಲಿ 21,154 ವಾಣಿಜ್ಯ ವಾಹನಗಳು ಮಾರಾಟ ಮಾಡಿದ್ದಲ್ಲಿ ಈ ವರ್ಷದ ಫೆಬ್ರುವರಿ ಅವಧಿಯಲ್ಲಿ 15,856 ವಾಹನಗಳ ಮಾರಾಟ ಮಾಡುವ ಶೇ.25ರಷ್ಟು ಇಳಿಕೆ ಕಂಡಿದೆ.

ಇದರೊಂದಿಗೆ ಕರೋನಾ ವೈರಸ್ ಭೀತಿಯು ಕೂಡಾ ಮಹೀಂದ್ರಾ ವಾಹನಗಳ ರಫ್ತು ಪ್ರಮಾಣದ ಮೇಲೂ ಭಾರೀ ಹೊಡೆತ ನೀಡಿದ್ದು, ಸಾಗರೋತ್ತರ ವ್ಯವಹಾರಗಳು ಕುಂಠಿತಗೊಂಡಿರುವುದು ರಫ್ತು ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಾಗೆಯೇ ವಾಹನ ಉತ್ಪಾದನೆಗೆ ಬೇಕಾದ ಪ್ರಮುಖ ಬಿಡಿಭಾಗಗಳ ಆಮದು ಇಲ್ಲದಿರುವುದು ಕೂಡಾ ಉತ್ಪಾದನಾ ಪ್ರಮಾಣದಲ್ಲಿ ಇಳಿಕೆಯಾಗಿರುವುದಕ್ಕೆ ಪ್ರಮುಖ ಕಾರಣವಾಗಿದ್ದು, ಬಿಎಸ್-6 ಜಾರಿಯಾಗುತ್ತಿರುವುದು ಕೂಡಾ ಒಂದು ಕಾರಣವಾಗಿದೆ.

ಮುಂದಿನ ತಿಂಗಳು ಏಪ್ರಿಲ್ 1ರಿಂದ ಬಿಎಸ್-6 ಎಮಿಷನ್ ನಿಯಮವು ಜಾರಿಗೆ ಬರುತ್ತಿದ್ದು, ಬಿಎಸ್-4 ವಾಹನಗಳ ಉತ್ಪಾದನೆಯನ್ನು ಗಣನೀಯವಾಗಿ ತಗ್ಗಿಸಲಾಗಿದೆ. ಆದರೆ ಬಿಎಸ್-6 ವಾಹನಗಳ ಉತ್ಪಾದನೆ ಹೆಚ್ಚಿಸಲು ಅಗತ್ಯವಾದ ಬಿಡಿಭಾಗಗಳ ಕೊರತೆ ಇದೀಗ ಆಟೋ ಉತ್ಪಾದನಾ ಸಂಸ್ಥೆಗಳನ್ನು ಕಾಡತೋಡಗಿದೆ.

ನಿಗದಿತ ಅವಧಿಯೊಳಗೆ ಬಿಡಿಭಾಗಗಳ ಪೂರೈಕೆಯಿಲ್ಲದೆ ವಾಹನ ಉತ್ಪಾದನೆಯು ತಗ್ಗುತ್ತಿದ್ದು, ಗ್ರಾಹಕರಿಂದ ಬೇಡಿಕೆಯಿದ್ದರೂ ವಾಹನಗಳನ್ನು ಪೂರೈಕೆ ಮಾಡಲು ಸಾಧ್ಯವಾಗದೆ ಪರದಾಟುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ವಿಶ್ವದ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳು ಚೀನಿ ಮಾರುಕಟ್ಟೆಯಿಂದಲೇ ಬಿಡಿಭಾಗಗಳನ್ನು ನೆಚ್ಚಿಕೊಂಡಿದ್ದು, ಇದೀಗ ಆಮದು ಕುಂಠಿತವಾಗಿರುವುದು ಚೀನಾದಲ್ಲಿ ಮಾತ್ರವಲ್ಲದೇ ಭಾರತೀಯ ಆಟೋ ಉದ್ಯಮದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಬಿಎಸ್-6 ವಾಹನಗಳ ಕಡ್ಡಾಯವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಭಾರೀ ಹೊಡೆತ ನೀಡುವ ಸಾಧ್ಯತೆಗಳಿದ್ದು, ಕರೋನಾ ವೈರಸ್ ಹತೋಟಿಗೆ ಬಂದಲ್ಲಿ ಮಾತ್ರವೇ ಬಿಡಿಭಾಗಗಳ ಆಮದು ಹೆಚ್ಚಲಿದೆ.

ಇದರ ಜೊತೆಗೆ ಚೀನಿ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ಸೈಕ್(ಎಂಜಿ ಮೋಟಾರ್ ಮಾತೃಸಂಸ್ಥೆ), ಟೊಯೊಟಾ, ಫಾವ್, ಹೈಮಾ, ಗ್ರೇಟ್ ವಾಲ್ ಮೋಟಾರ್ಸ್, ಫೋಕ್ಸ್‌ವ್ಯಾಗನ್, ಜೀಪ್ ಮತ್ತು ಹವಾಲ್ ಕಾರುಗಳ ಉತ್ಪಾದನೆಯಲ್ಲಿ ಕುಂಠಿತವಾಗಿರುವುದಲ್ಲದೇ ಮಾರಾಟ ಪ್ರಕ್ರಿಯೆಯಲ್ಲೂ ಶೇ.90 ರಷ್ಟು ಕುಸಿತ ಕಂಡಿದೆ.


Click it and Unblock the Notifications