ಆಟೋ ಎಕ್ಸ್‌ಪೋ 2020: ಪ್ರತಿ ಚಾರ್ಜ್‌ಗೆ 520 ಕಿ.ಮೀ ಮೈಲೇಜ್ ನೀಡುತ್ತೆ ಮಹೀಂದ್ರಾ ಹೊಸ ಕಾನ್ಸೆಪ್ಟ್ ಕಾರು
ಮಹೀಂದ್ರಾ ಸಂಸ್ಥೆಯು 2020ರ ಆಟೋ ಎಕ್ಸ್‌ಪೋದಲ್ಲಿ ಕೆಯುವಿ100 ಎಲೆಕ್ಟ್ರಿಕ್ ಬಿಡುಗಡೆಯ ಜೊತೆಗೆ ಮತ್ತೆರಡು ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಅನಾವರಣಗೊಳಿಸಿದ್ದು, ಇಎಕ್ಸ್‌ಯುವಿ300 ಜೊತೆಗೆ ಫನ್‌ಸ್ಟರ್ ಎನ್ನುವ ಮತ್ತೊಂದು ವಿಶೇಷ ವಿನ್ಯಾಸದ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದೆ.

ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿ ಮಹತ್ವದ ಬದಲಾವಣೆ ತರುತ್ತಿರುವ ಮಹೀಂದ್ರಾ ಸಂಸ್ಥೆಯು ಭವಿಷ್ಯ ವಾಹನ ಮಾದರಿಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಮೈಲೇಜ್ ಜೊತೆಗೆ ಗ್ರಾಹಕರನ್ನು ಆಕರ್ಷಣೆ ಮಾಡುವ ಉದ್ದೇಶದೊಂದಿಗೆ ಕಾರಿನ ವಿನ್ಯಾಸದಲ್ಲೂ ಸಾಕಷ್ಟು ಸುಧಾರಣೆ ತರುತ್ತಿದ್ದು, ಫನ್‌ಸ್ಟರ್ ಕಾನ್ಸೆಪ್ಟ್ ಮಾದರಿಯು 2020ರ ಆಟೋ ಎಕ್ಸ್‌ಪೋದಲ್ಲಿ ಮಹೀಂದ್ರಾ ಸಂಸ್ಥೆಗೆ ಹೊಸ ಇಮೇಜ್ ತಂದುಕೊಟ್ಟಿತ್ತು ಎನ್ನಬಹುದು.

ಫನ್‌ಸ್ಟರ್ ಕಾನ್ಸೆಪ್ಟ್ ಕಾರು ಸಂಪೂರ್ಣವಾಗಿ ಎಲೆಕ್ಟ್ರಿಕ್ ಎಂಜಿನ್ ಹೊಂದಿದ್ದು, ನಾಲ್ಕು ಚಕ್ರಗಳಿಗೂ ಪ್ರತ್ಯೇಕ ಮೋಟಾರ್ ಶಕ್ತಿ ಪೂರೈಕೆಯೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುತ್ತದೆ.

ಹೊಸ ಫನ್‌ಸ್ಟರ್ ಕಾರಿನಲ್ಲಿ ಮಹೀಂದ್ರಾ ಸಂಸ್ಥೆಯು 59.1kWh ಬ್ಯಾಟರಿ ಪ್ಯಾಕ್ ಜೋಡಿಸಿದ್ದು, ಪ್ರತಿ ಚಾರ್ಜ್‌ಗೆ ಈ ಕಾರು ಗರಿಷ್ಠ 520 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಹಾಗೆಯೇ ಕೇವಲ 5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮೀ ವೇಗ ಪಡೆದುಕೊಳ್ಳುವಂತಹ ಸಾಮಾರ್ಥ್ಯವನ್ನು ಸಹ ಹೊಂದಿದೆ.

ಈ ಮೂಲಕ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ವಿಶೇಷ ಎನ್ನಿಸುವ ಫನ್‌ಸ್ಟರ್ ಕಾರು ಭವಿಷ್ಯದಲ್ಲಿ ಉತ್ಪಾದನೆಗೊಳ್ಳುವ ಸಾಧ್ಯತೆಗಳು ಕಡಿಮೆಯಿದ್ದು, ಕಾನ್ಸೆಪ್ಟ್ ಕಾರಿನ ತಾಂತ್ರಿಕ ಅಂಶಗಳನ್ನು ಎರಡನೇ ತಲೆಮಾರಿನ ಎಕ್ಸ್‌ಯುವಿ500 ಮತ್ತು ಹೊಚ್ಚ ಹೊಸ ಎಕ್ಸ್‌ಯುವಿ500 ಎಲೆಕ್ಟ್ರಿಕ್ ಆವೃತ್ತಿಯ ಅಭಿವೃದ್ದಿಗಾಗಿ ಎರವಲು ಪಡೆದುಕೊಳ್ಳಬಹುದೆಂದು ನೀರಿಕ್ಷಿಸಲಾಗಿದೆ.

ಕೆಯುವಿ100 ಎಲೆಕ್ಟ್ರಿಕ್ ನಂತರ ಇದೀಗ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದ್ದು, ಮುಂದಿನ ಹಂತದಲ್ಲಿ ಬಿಡುಗಡೆಯಾಗಲಿರುವ ಎಕ್ಸ್‌ಯುವಿ500 ಎಲೆಕ್ಟ್ರಿಕ್ ಕಾರು ಆವೃತ್ತಿಯ ಅಭಿವೃದ್ದಿ ಮಹೀಂದ್ರಾ ಸಂಸ್ಥೆಯು ಶೀಘ್ರದಲ್ಲೇ ಚಾಲನೆ ನೀಡಲಿದೆ.

ಜೊತೆಗೆ ಸಾಮಾನ್ಯ ಮಾದರಿಯ ಎಕ್ಸ್‌ಯುವಿ500 ಕೂಡಾ ಇದೇ ವರ್ಷಾಂತ್ಯದಲ್ಲಿ ಬಿಡುಗಡೆಯಾಗಬೇಕಿದ್ದು, ಹೊಸ ಕಾರು ಆವೃತ್ತಿಗಳನ್ನು ಬದಲಾವಣೆಗೊಳಿಸುವಲ್ಲಿ ಫನ್‌ಸ್ಟರ್ ಕಾನ್ಸೆಪ್ಟ್ ಫೀಚರ್ಸ್‌ಗಳು ನೆರವಾಗಲಿವೆ ಎನ್ನಬಹುದು.

ಇನ್ನು ಮಹೀಂದ್ರಾ ಸಂಸ್ಥೆಯು ಹೊಸ ಸುರಕ್ಷಾ ನಿಯಮಗಳಿಗೆ ಅನುಗುಣವಾಗಿ ತನ್ನ ಭವಿಷ್ಯ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷತೆ ನೀಡುವ ಉದ್ದೇಶದಿಂದ ಈ ಹಿಂದಿನ ಇ2ಓ ಪ್ಲಸ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿ ಹೊಸ ಕಾರು ಉತ್ಪನ್ನಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.


Click it and Unblock the Notifications








