ಸುರಕ್ಷಿತ ಕಾರು ಮಾರಾಟಕ್ಕಾಗಿ ಆನ್‌ಲೈನ್ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಮಹೀಂದ್ರಾ
ಕರೋನಾ ವೈರಸ್ ಮಹಾಮಾರಿಯ ಹಾವಳಿಯ ನಡುವೆಯೂ ಆಟೋ ಉದ್ಯಮವು ಚೇತರಿಕೆ ಕಾಣುತ್ತಿದ್ದು, ಸುರಕ್ಷಿತ ವ್ಯಾಪಾರ ವಹಿವಾಟು ಹೊಸ ಸವಾಲಾಗಿ ಪರಿಣಮಿಸಿದೆ. ಹೊಸ ವಾಹನಗಳಿಗೆ ಉತ್ತಮ ಬೇಡಿಕೆ ಹರಿದುಬರುತ್ತಿದೆಯಾದರೂ ಕರೋನಾ ವೈರಸ್ ಮಾಹಾಮಾರಿಯು ವಾಹನ ಮಾರಾಟ ಸಿಬ್ಬಂದಿಯಲ್ಲಿ ಹೆಚ್ಚುತ್ತಿರುವುದು ಆಟೋ ಉತ್ಪಾದನಾ ಕಂಪನಿಗಳಿಗೆ ಚಿಂತೆಗೀಡು ಮಾಡಿದೆ.

ಈ ಹಿನ್ನಲೆಯಲ್ಲಿ ಸಂಪರ್ಕ ರಹಿತ ವಾಹನ ಖರೀದಿ ಮತ್ತು ಗ್ರಾಹಕರ ಸೇವೆಗಳಿಗೆ ಹೆಚ್ಚಿನ ಒತ್ತುನೀಡಲಾಗುತ್ತಿದ್ದು, ಗರಿಷ್ಠ ಸುರಕ್ಷತೆಯೊಂದಿಗೆ ಸಿಬ್ಬಂದಿ ಆರೋಗ್ಯ ಕಾಳಜಿಯೊಂದಿಗೆ ಗ್ರಾಹಕರ ವ್ಯವಹಾರ ಕೈಗೊಳ್ಳಲು ಆದ್ಯತೆ ನೀಡಲಾಗುತ್ತಿದೆ. ಮಹೀಂದ್ರಾ ಕಂಪನಿಯು ಕೂಡಾ ಈಗಾಗಲೇ ಪ್ರತ್ಯೇಕವಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದೆಯಾದರೂ ಗ್ರಾಹಕರು ನೇರವಾಗಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡುತ್ತಿರುವುದರಿಂದ ವೈರಸ್ ಹರಡಲು ಪ್ರಮುಖ ಕಾರಣವಾಗುತ್ತಿದೆ.

ಮುಂಬರುವ ದಸರಾ ಮತ್ತು ದೀಪಾವಳಿ ಸಂಭ್ರಮದ ಹೊತ್ತಿಗೆ ಹೊಸ ವಾಹನಗಳ ಖರೀದಿಯ ಭರಾಟೆಯಪ ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಯಿರುವುದರಿಂದ ಗ್ರಾಹಕರ ಭೇಟಿ ಸಂಖ್ಯೆ ಕೂಡಾ ಹೆಚ್ಚಿರುತ್ತದೆ.

ಇದರಿಂದಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿಗೆ ಉತ್ತೇಜಿಸಲಾಗುತ್ತಿದ್ದು, ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಖರೀದಿ ಮಾಡುವುದಕ್ಕಿಂತೂ ಅತಿ ಕಡಿಮೆ ಪತ್ರ ವ್ಯವಹಾರ ಮತ್ತು ಸರಳ ಪ್ರಕ್ರಿಯೆಗಳ ಮೂಲಕ ಆನ್‌ಪ್ಲ್ಯಾಟ್‌ಗಳಲ್ಲಿ ಹೊಸ ವಾಹನಗಳನ್ನು ಖರೀದಿ ಮಾಡಬಹುದಾಗಿದೆ.

ಆನ್‌ಲೈನ್ ಮೂಲಕ ವಾಹನ ಖರೀದಿ ಪ್ರಕ್ರಿಯೆ ಮುಗಿದ ನಂತರ ಶೋರೂಂ ಸಿಬ್ಬಂದಿಯೇ ನಿಗದಿ ಸ್ಥಳಕ್ಕೆ ವಾಹನಗಳನ್ನು ತಲುಪಿಸಲಿದ್ದು, ಈ ವೇಳೆಯೂ ನಂಜು ನಿರೋಧಕ ರಸಾಯನಿಕಗಳಿಂದ ಸ್ಯಾನಿಟೈಜ್ ಮಾಡಿಯೇ ಹೊಸ ವಾಹನವನ್ನು ಗ್ರಾಹಕರಿಗೆ ಹಸ್ತಾಂತರ ಮಾಡಲಾಗುತ್ತಿದೆ. ಜೊತೆಗೆ ಹಣಕಾಸಿನ ವ್ಯವಹಾರಗಳನ್ನು ಸಂಪೂರ್ಣವಾಗಿ ನಗದು ರಹಿತ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದ್ದು, ಹೊಸ ವಾಹನಗಳಿಗೆ ಮಾತ್ರವಲ್ಲ ಕಾರು ಸರ್ವಿಸ್ ಪ್ರಕ್ರಿಯೆಗೂ ಸಂಪರ್ಕ ರಹಿತ ವ್ಯವಹಾರ ಕೈಗೊಳ್ಳಲಾಗುತ್ತಿದೆ.

ಇನ್ನು ಕೋವಿಡ್-19 ಪರಿಣಾಮ ನೆಲಕಚ್ಚಿದ್ದ ದೇಶಿಯ ಆಟೋ ಉದ್ಯಮವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಮೇ, ಜೂನ್ ಮತ್ತು ಜುಲೈ ಅವಧಿಗಿಂತಲೂ ಅಗಸ್ಟ್ ಅವಧಿಯಲ್ಲಿನ ಹೊಸ ವಾಹನ ಮಾರಾಟವು ಸಾಕಷ್ಟು ಸುಧಾರಣೆ ಕಾಣುತ್ತಿದೆ.

ಹೊಸ ವಾಹನಗಳ ನೋಂದಣಿಯು 2020ರ ಅಗಸ್ಟ್ ಅವಧಿಯಲ್ಲಿ ಸುಮಾರು ಶೇ. 26.81ರಷ್ಟು ಕುಸಿತ ಕಂಡುಬಂದಿದ್ದು, ಪ್ಯಾಸೆಂಜರ್ ಕಾರುಗಳು, ದ್ವಿಚಕ್ರ ವಾಹನಗಳು, ತ್ರಿ ಚಕ್ರ ವಾಹನಗಳು, ವಾಣಿಜ್ಯ ವಾಹನಗಳು ಮತ್ತು ಟ್ರ್ಯಾಕ್ಟರ್ ಮಾರಾಟವು ಒಟ್ಟಾರೆಯಾಗಿ 11,88,087 ಯುನಿಟ್ ಮಾರಾಟ ದಾಖಲಿಸಿವೆ. ಇದರಲ್ಲಿ ಟ್ರ್ಯಾಕ್ಟರ್ ಮಾರಾಟವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಯ ವಾಹನಗಳ ಮಾರಾಟದಲ್ಲೂ ಕುಸಿತ ಕಂಡುಬಂದಿದೆ.

2019ರ ಅಗಸ್ಟ್ ಅವಧಿಯಲ್ಲಿ ಒಟ್ಟು 16,23,218 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಈ ಬಾರಿ ಶೇ.26.81ರಷ್ಟು ಕುಸಿತ ಅನುಭವಿಸಿದ್ದು, ಮೇ, ಜೂನ್ ಮತ್ತು ಜುಲೈ ಅವಧಿಗಿಂತಲೂ ಅಗಸ್ಟ್ ಅವಧಿಯಲ್ಲಿನ ವಾಹನ ಮಾರಾಟವು ತುಸು ಹೆಚ್ಚಳವಾಗಿದೆ ಎನ್ನಬಹುದು.

ಮೇ, ಜೂನ್ ಮತ್ತು ಜುಲೈ ಅವಧಿಯಲ್ಲಿ ಶೇ. 40ರಿಂದ ಶೇ.65ರಷ್ಟು ಅನುಭವಿಸಿದ್ದ ಆಟೋ ಕಂಪನಿಗಳು ಇದೀಗ ಹೊಸ ವಾಹನ ಮಾರಾಟದಲ್ಲಿ ಬೆಳವಣಿಗೆ ಕಾಣುತ್ತಿದ್ದು, ಮುಂಬರುವ ದಸರಾ ಮತ್ತು ದೀಪಾವಳಿ ಹೊತ್ತಿಗೆ ಹೊಸ ವಾಹನ ಮಾರಾಟವು ಹೆಚ್ಚಳವಾಗುವ ನೀರಿಕ್ಷೆಗಳಿವೆ.


Click it and Unblock the Notifications








