ಆಟೋ ಎಕ್ಸ್‌ಪೋ 2020: ಪರ್ಫಾಮೆನ್ಸ್ ಪ್ರಿಯರಿಗಾಗಿ ಎಕ್ಸ್‌ಯುವಿ300 ಸ್ಪೋರ್ಟ್ಜ್ ಅನಾವರಣ
ಮಹೀಂದ್ರಾ ಸಂಸ್ಥೆಯು ತನ್ನ ಜನಪ್ರಿಯ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಎಕ್ಸ್‌ಯುವಿ300 ಮಾದರಿಯಲ್ಲಿ ಸ್ಪೋರ್ಟ್ಜ್ ಆವೃತ್ತಿಯನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದು, ಹೊಸ ಕಾರು ಮುಂದಿನ ಜೂನ್ ಆರಂಭದಲ್ಲಿ ಖರೀದಿಗೆ ಲಭ್ಯವಿರಲಿದೆ.

ಎಕ್ಸ್‌ಯುವಿ300 ಸ್ಪೋರ್ಟ್ಜ್ ಆವೃತ್ತಿಯನ್ನು ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ಬಿಡುಗಡೆ ಮಾಡಲಿದ್ದು, ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲೇ ಇದು ಅತಿ ಹೆಚ್ಚು ಬಿಎಚ್‌ಪಿ ಉತ್ಪಾದನಾ ಆವೃತ್ತಿಯಾಗಿರಲಿದೆ. ಹೊಸ ಸ್ಪೋರ್ಟ್ಜ್ ಆವೃತ್ತಿಯಲ್ಲಿ 1.2-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, 130-ಬಿಎಚ್‌ಪಿ ಮತ್ತು 230-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ಹೊಸ ಕಾರು ಸ್ಪೋರ್ಟ್ಜ್ ಮಾದರಿಯಾಗಿ ಗುರುತಿಸಿಕೊಳ್ಳಲು ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಸ್ಪೋರ್ಟಿ ಗ್ರಾಫಿಕ್ಸ್ ಮತ್ತು ಕಾರಿನ ಒಳಭಾಗದಲ್ಲಿ ರೆಡ್ ಲೈನ್‌ಗಳನ್ನು ಬಳಕೆ ಮಾಡಿರುವುದು ಆಕರ್ಷಣಿವಾಗಿದೆ.

ಇನ್ನುಳಿದಂತೆ ಹೊಸ ಕಾರು ಸಾಮಾನ್ಯ ಕಾರಿನ ಮಾದರಿಯಲ್ಲೇ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಸಾಮಾನ್ಯ ಪೆಟ್ರೋಲ್ ಆವೃತ್ತಿಗಿಂತ ಹೊಸ ಕಾರು ಹೆಚ್ಚುವರಿಯಾಗಿ ರೂ. 50 ಸಾವಿರದಿಂದ ರೂ.80 ಸಾವಿರ ಹೆಚ್ಚುವರಿ ಬೆಲೆ ಪಡೆಯಲಿದೆ.

ಸಾಮಾನ್ಯ ಆವೃತ್ತಿಯಲ್ಲಿ ಪೆಟ್ರೋಲ್ ಮಾದರಿಯ 1.2-ಲೀಟರ್ ಎಂಜಿನ್‍ನೊಂದಿಗೆ 110-ಬಿಎಚ್‌ಪಿ ಸಾಮರ್ಥ್ಯವನ್ನು ಹೊಂದಿದ್ದು, ಹೊಸ ಸ್ಪೋರ್ಟ್ಜ್ ಆವೃತ್ತಿಯು ಹೆಚ್ಚುವರಿಯಾಗಿ 20-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ. ಇದು ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದ್ದು, ಪ್ರತಿ ಸ್ಪರ್ಧಿ ಮಾದರಿಗಳಾದ ವಿಟಾರಾ ಬ್ರೆಝಾ ಪೆಟ್ರೋಲ್ ಮತ್ತು ವೆನ್ಯೂ ಪೆಟ್ರೋಲ್ ಟರ್ಬೋ ಆವೃತ್ತಿಗೆ ಪೈಪೋಟಿ ನೀಡುವುದಲ್ಲದೇ ಸಣ್ಣ ಗಾತ್ರದ ಎಂಜಿನ್ ಮೂಲಕ ಉತ್ತಮ ಪರ್ಫಾಮೆನ್ಸ್ ಪ್ರಿಯರ ಖರೀದಿಗೆ ಉತ್ತಮವಾಗಿದೆ.

ಇನ್ನು ಕೇಂದ್ರ ಸರ್ಕಾರವು ಮಾಲಿನ್ಯವನ್ನು ನಿಯಂತ್ರಿಸಲು ಮುಂದಿನ ವರ್ಷದ ಏಪ್ರಿಲ್ ತಿಂಗಳಿನಿಂದ ಬಿಎಸ್-6 ಮಾಲಿನ್ಯ ನಿಯಮವನ್ನು ಜಾರಿಗೊಳಿಸುತ್ತಿದೆ. ಇದರಿಂದ ಮಹೀಂದ್ರಾ ಕಂಪನಿಯು ತನ್ನ ಸರಣಿಯಲ್ಲಿರುವ ಪ್ರಮುಖ ಎಸ್‍ಯುವಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸುತ್ತಿದೆ.

ಇದರ ಭಾಗವಾಗಿ ಮಹೀಂದ್ರಾ ಕಂಪನಿಯು ತನ್ನ ಮೊದಲ ಬಿಎಸ್-6 ಎಸ್‍ಯುವಿಯಾಗಿ ಕಳೆದ ತಿಂಗಳು ಎಕ್ಸ್‌ಯುವಿ 300 ಅನ್ನು ಬಿಡುಗಡೆಗೊಳಿಸಿದ್ದು, ಈ ಎಸ್‍ಯುವಿಯು 1.2 ಲೀಟರ್ ಟರ್ಬೊಚಾರ್ಚ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಮಹೀಂದ್ರಾ ಎಕ್ಸ್ ಯುವಿ 300 ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ.8.30 ಲಕ್ಷಗಳಾಗಿದ್ದು, ಬಿಎಸ್-4 ಮಾದರಿಗಿಂತ ಹೊಸ ಎಕ್ಸ್‌ಯುವಿ 300 ಮಾದರಿಯು ರೂ.20,000 ದುಬಾರಿ ಬೆಲೆ ಪಡೆದಿದೆ.

ಶೀಘ್ರದಲ್ಲೇ ಡೀಸೆಲ್ ಆವೃತ್ತಿಯ ಕೂಡಾ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಎಮಿಷನ್ ನಿಯಮದಿಂದಾಗಿ ಎಕ್ಸ್‌ಯುವಿ300 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯು ಬಿಎಸ್-4 ಗಿಂತ ಹೆಚ್ಚುವರಿಯಾಗಿ ರೂ. 60 ಸಾವಿರ ದುಬಾರಿಯಾಗಿರಲಿದೆ ಎನ್ನಲಾಗಿದೆ.


Click it and Unblock the Notifications








