ಬಲೆನೊ 1.3-ಲೀಟರ್ ಡೀಸೆಲ್ ಎಂಜಿನ್ ಆವೃತ್ತಿಯನ್ನು ಬಂದ್ ಮಾಡಿದ ಮಾರುತಿ ಸುಜುಕಿ
ಮಾರುತಿ ಸುಜುಕಿ ಸಂಸ್ಥೆಯು ಈಗಾಗಲೇ ತನ್ನ ಜನಪ್ರಿಯ 1.3-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಬಿಎಸ್-6 ನಿಯಮ ಅನುಸಾರವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದು, ವಿಟಾರಾ ಬ್ರೆಝಾ ನಂತರ ಇದೀಗ ಎಸ್-ಕ್ರಾಸ್ ಮತ್ತು ಬಲೆನೊ ಡೀಸೆಲ್ ಮಾದರಿಯನ್ನು ಸ್ಥಗಿತಗೊಳಿಸಿ ಪೆಟ್ರೋಲ್ ಆವೃತ್ತಿಯಲ್ಲಿ ಮಾರಾಟ ಮಾಡಲು ಸಿದ್ದತೆ ನಡೆಸಿದೆ.

ಹೊಸ ಎಮಿಷನ್ ಪ್ರಕಾರ, ಡೀಸೆಲ್ ಕಾರುಗಳ ಮಾರಾಟದಲ್ಲಿ ಮಹತ್ವದ ತಂದಿರುವ ಮಾರುತಿ ಸುಜುಕಿ ಸಂಸ್ಥೆಯು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳಿಗೆ ಗುಡ್‌ಬೈ ಹೇಳಿದ್ದು, ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯಾಗಿರುವ ವಿಟಾರಾ ಬ್ರೆಝಾ ಮತ್ತು ಎಸ್‌ಯುವಿ ಆವೃತ್ತಿಯಾದ ಎಸ್-ಕ್ರಾಸ್ ಕಾರುಗಳನ್ನು ಪೆಟ್ರೋಲ್ ಎಂಜಿನ್‌ನೊಂದಿಗೆ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದಲ್ಲದೆ ವಿಟಾರಾ ಬ್ರೆಝಾ ಕಾರನ್ನು ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ.

ಇದೀಗ ಎಸ್-ಕ್ರಾಸ್ ಕಾರಿನಲ್ಲಿ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸುತ್ತಿರುವ ಮಾರುತಿ ಸುಜುಕಿಯು ಬಲೆನೊ ಡೀಸೆಲ್ ಮಾದರಿಯನ್ನು ಸ್ಥಗಿತಗೊಳಿಸಿದ್ದು, ಬಹುತೇಕ ಎಂಟ್ರಿ ಲೆವಲ್ ಕಾರುಗಳಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ನೀಡಲು ನಿರ್ಧರಿಸಿದೆ.

ಬಲೆನೊ ಆವೃತ್ತಿಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಮಾದರಿಯನ್ನು ಮಾರಾಟ ಮಾಡುತ್ತಿದ್ದ ಮಾರುತಿ ಸುಜುಕಿಯು ಪೆಟ್ರೋಲ್ ಆವೃತ್ತಿಯನ್ನು ಈಗಾಗಲೇ ಬಿಎಸ್-6 ನಿಯಮದೊಂದಿಗೆ ಬಿಡುಗಡೆಗೊಳಿಸಿದ್ದು, 1.3-ಲೀಟರ್ ಡೀಸೆಲ್ ಎಂಜಿನ್ ಅನ್ನು ಸಂಪೂರ್ಣವಾಗಿ ಕೈಬಿಟ್ಟಿದೆ.

ಆದರೆ ಬಲೆನೊ ಆವೃತ್ತಿಯಲ್ಲಿ ಹೊಸ ಡೀಸೆಲ್ ಎಂಜಿನ್ ಆಯ್ಕೆ ನೀಡುವ ಸಾಧ್ಯತೆಗಳು ಕಡಿಮೆ ಇದ್ದು, ಇನ್ಮುಂದೆ ಹೊಸ ಬಲೆನೊದಲ್ಲಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮಾತ್ರವೇ ಖರೀದಿಗೆ ಲಭ್ಯವಿದೆ. ಹಾಗೆಯೇ ಹೊಸ ಕಾರಿನಲ್ಲಿ ಸಿಎನ್‌ಜಿ ಆವೃತ್ತಿಯನ್ನು ಪರಿಚಯಿಸುವ ಸಾಧ್ಯತೆಗಳಿದ್ದು, ಒಂದು ವೇಳೆ ಹೊಸ ಕಾರಿನಲ್ಲಿ ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಡೀಸೆಲ್ ಎಂಜಿನ್ ನೀಡಿದರು ಕಾರಿನ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವುದೇ ಡೀಸೆಲ್ ಎಂಜಿನ್ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ನಿರ್ಮಾಣದ ಬಿಎಸ್-4 ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತೀಕರಣವು ಅಸಾಧ್ಯ ಎನ್ನಲಾಗುತ್ತಿದ್ದು, ಆರ್ಥಿಕವಾಗಿ ಹೊರೆಯಾಗಲಿರುವ ಉನ್ನತೀಕರಣ ಪ್ರಕ್ರಿಯೆಯಿಂದ ಹಿಂದೆ ಸರಿದಿವೆ.

ಮಾರುತಿ ಸುಜುಕಿಯು ಡೀಸೆಲ್ ಎಂಜಿನ್‌ಗೆ ಪರ್ಯಾಯವಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಆಯ್ಕೆಯನ್ನು ಹೆಚ್ಚಿಸುತ್ತಿದ್ದು, ಡೀಸೆಲ್ ಮಾದರಿಯಲ್ಲಿನ ಮೈಲೇಜ್ ಪ್ರಮಾಣವನ್ನೇ ಪೆಟ್ರೋಲ್ ಹೈಬ್ರಿಡ್ ಮಾದರಿಯಲ್ಲಿ ನೀಡುತ್ತಿದೆ.

ಒಂದು ವೇಳೆ ಕಡಿಮೆ ಸಾಮರ್ಥ್ಯದ ಡೀಸೆಲ್ ಎಂಜಿನ್‌ಗಳನ್ನು ಉನ್ನತೀಕರಿಸಿದರೂ ಬೆಲೆ ಹೆಚ್ಚಳದಿಂದ ಗ್ರಾಹಕರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದ್ದು, ಇದಕ್ಕಾಗಿಯೇ ಮಾರುತಿ ಸುಜುಕಿಯು ರೂ.10 ಲಕ್ಷದೊಳಗಿನ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯ ಬಗೆಗೆ ಹೆಚ್ಚು ತೆಲೆಕೆಡಿಸಿಕೊಳ್ಳದೇ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳ ಮೇಲೆ ಹೆಚ್ಚು ಗಮನಹರಿಸಲು ನಿರ್ಧರಿಸಿದೆ.


Click it and Unblock the Notifications