ಭಾರತೀಯ ಸೇನೆಗಾಗಿ ಜಿಪ್ಸಿ ವಿತರಣೆಯನ್ನು ಆರಂಭಿಸಿದ ಮಾರುತಿ ಸುಜುಕಿ
ಭಾರತದ ರಸ್ತೆಯಲ್ಲಿ 34 ವರ್ಷಗಳ ಕಾಲ ರಾಜನಾಗಿ ಮೆರೆದಿದ್ದ ಮಾರುತಿ ಸುಜುಕಿ ಜಿಪ್ಸಿಯನ್ನು ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯ ಈ ಜಿಪ್ಸಿ ಆಫ್‍ರೋಡ್ ಪ್ರಿಯರ ಮೆಚ್ಚಿನ ಮಿನಿ ಎಸ್‍ಯುವಿಯಾಗಿತ್ತು.

ಅಪಘಾತಗಳು ಸಂಭವಿಸಿದಾಗ ಹೆಚ್ಚಿನ ಪ್ರಕರಣದಲ್ಲಿ ಪ್ರಾಣ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ವಾಹನಗಳು ಕನಿಷ್ಠ ಸುರಕ್ಷತಾ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಕಾರು ಉತ್ಪಾದಕಾ ಕಂಪನಿಗಳಿಗೆ ಸೂಚಿಸಿತು. ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಹೊಸ ಸುರಕ್ಷತಾ ಮಾನದಂಡವನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿತು.

ಕನಿಷ್ಠ ಸುರಕ್ಷತಾ ಮಾನದಂಡ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಜಿಪ್ಸಿ ಕಾರನ್ನು ಮಾರುತಿ ಸುಜುಕಿ ಕಂಪನಿ ಕೆಲವೊಂದು ಬದಲಾವಣೆ ಮಾಡಿ ರಸ್ತೆಗೆ ಇಳಿಸಲು ಪ್ರಯತ್ನ ನಡೆಸಿತ್ತು. ಆದರೆ ಹೊಸ ರಕ್ಷಣೆ ಮತ್ತು ಕ್ರ್ಯಾಶ್ ಟೆಸ್ಟ್ ನಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಜಿಪ್ಸಿ ಕಾರಿನ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತು.

1985ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿ ಬಿಡುಗಡೆಯಾಗಿತ್ತು. ಬಿಡುಗಡೆಯಾದಾಗಿನಿಂದಲೂ ಮಾರುತಿ ಸುಜುಕಿ ಜಿಪ್ಸಿ ತನ್ನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ 34 ವರ್ಷಗಳ ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಕಮಾಲ್ ಮಾಡಿತ್ತು.

ಮಾರುತಿ ಜಿಪ್ಸಿಯನ್ನು ಅತಿ ಹೆಚ್ಚು ಖರೀದಿಸುತ್ತಿದ್ದ ಭಾರತೀಯ ಸೇನೆಯು ಅದನ್ನು ಬದಲಾಯಿಸಿ ಟಾಟಾ ಸಫಾರಿ ಸ್ಟಾರ್ಮ್ ಅನ್ನು ಖರೀದಿಸುತ್ತಿದ್ದರು. ಆದರೆ ಇದೀಗ ಭಾರತೀಯ ಸೇನೆಯು ಹೊಸದಾಗಿ 3,051 ಜಿಪ್ಸಿಯನ್ನು ಖರೀದಿಸಲು ಮುಂದಾಗಿದೆ.

ಮಾರುತಿ ಸುಜುಕಿ ಕಂಪನಿಯು ಭಾರತದ ಸೇನೆಯಿಂದ ಜಿಪ್ಸಿಯ ಆರ್ಡರ್ ಪಡೆದಿರುವುದಕ್ಕೆ ಜಿಪ್ಸಿಯ ಉತ್ಪಾದನೆಯನ್ನು ಪ್ರಾರಂಭಿಸಿದೆ. ಜಿಪ್ಸಿಯನ್ನು ಮಾರುತಿ ಸುಜುಕಿ ಕಂಪನಿಯು ಭಾರತೀಯ ಸೇನೆಗೆ ಹಂತ ಹಂತವಾಗಿ ವಿತರಿಸುತ್ತದೆ.

ಇದರ ಭಾಗವಾಗಿ ಮೊದಲ ಹಂತದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಜಿಪ್ಸಿ 70 ಯುನಿಟ್‍ಗಳನ್ನು ವಿತರಿಸಿದೆ. ಆದರೆ ಈ ಐಕಾನಿಕ್ ಆಫ್ ರೋಡರ್ ಜಿಪ್ಸಿ ಕೇವಲ ಭಾರತೀಯ ಸೇನೆಗೆ ಮಾತ್ರ ಸಿಮೀತವಾಗಿರುತ್ತದೆ. ಅದನ್ನು ಇತರ ಗ್ರಾಹಕರಿಗೆ ಮಾರಾಟ ಮಾಡಲಾಗುವುದಿಲ್ಲ.

ಮಾರುತಿ ಜಿಪ್ಸಿ ಸುರಕ್ಷತಾ ನಿಯಮಕ್ಕೆ ಅನುಸರವಾಗಿಲ್ಲ ಮತ್ತು ಜಿಪ್ಸಿ ಜಿ13, 1.3 ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸರವಾಗಿ ನವೀಕರಿಸುವಲ್ಲಿ ವಿಫಲವಾಗಿದೆ. ಆದರೆ ಈ ನಿಯಮಗಳು ಸೈನ್ಯಕ್ಕೆ ನೀಡುವ ವಾಹನದಲ್ಲಿ ಅನುಸರಿಸುವುದಿಲ್ಲ. ಯಾಕೆಂದರೆ ಈ ನಿಯಮಗಳು ಸೈನ್ಯದ ವಾಹನಗಳಿಗೆ ಅನ್ವಯವಾಗುವುದಿಲ್ಲ.

ಮಾರುತಿ ಸುಜುಕಿ ಜಿಪ್ಸಿ ಬದಲಾಗಿ ತನ್ನ ಉತ್ತರಾಧಿಕಾರಿ ಎಂದು ಕರೆಯಬಹುದಾದ ಮಾರುತಿ ಸುಜುಕಿ ಜಿಮ್ನಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಯೋಜಿಸಿದೆ. ಮಾರುತಿ ಸುಜುಕಿ ಕಂಪನಿಯು ಜಿಮ್ನಿ ಮಿನಿ-ಎಸ್‌ಯುವಿಯನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ಪೋದಲ್ಲಿ ಅನಾವಣಗೊಳಿಸಿದ್ದರು. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಭಾರತದಲ್ಲಿ ತಯಾರಾಗುತ್ತಿರುವ ಮಾರುತಿ ಸುಜುಕಿ ಜಿಮ್ನಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸಬಹುದು ಮತ್ತು ಇದು ಮಿನಿ ಎಸ್‍ಯುವಿ ವಿಭಾಗದಲ್ಲಿ ಅತ್ಯಂತ ಆಕರ್ಷಕ ಕೊಡುಗೆಯಾಗಿ ಹೊರಹೊಮ್ಮಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಮೆಚ್ಚುಗೆ ಪಡೆಯುವಲ್ಲಿ ಮಾರುತಿ ಸುಜುಕಿ ಜಿಮ್ನಿ ಯಶಸ್ವಿಯಾಗಿದೆ.


Click it and Unblock the Notifications