ಭಾರತೀಯ ಸೇನೆಗಾಗಿ ಮತ್ತೆ ಆರಂಭವಾದ ಮಾರುತಿ ಜಿಪ್ಸಿ ಉತ್ಪಾದನೆ
ಭಾರತೀಯ ರಸ್ತೆಯಲ್ಲಿ 34 ವರ್ಷಗಳ ಕಾಲ ರಾಜನಾಗಿ ಮೆರೆದಿದ್ದ ಮಾರುತಿ ಸುಜುಕಿ ಜಿಪ್ಸಿಯನ್ನು ಕಳೆದ ವರ್ಷದ ಆರಂಭದಲ್ಲಿ ಸ್ಥಗಿತಗೊಳಿಸಲಾಗಿತ್ತು. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯ ಈ ಜಿಪ್ಸಿ ಆಫ್‍ರೋಡ್ ಪ್ರಿಯರ ಮೆಚ್ಚಿನ ಮಿನಿ ಎಸ್‍ಯುವಿಯಾಗಿತ್ತು.

ಅಪಘಾತಗಳು ಸಂಭವಿಸಿದಾಗ ಹೆಚ್ಚಿನ ಪ್ರಕರಣದಲ್ಲಿ ಪ್ರಾಣ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ವಾಹನಗಳು ಕನಿಷ್ಠ ಸುರಕ್ಷತಾ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಕಾರು ಉತ್ಪಾದಕಾ ಕಂಪನಿಗಳಿಗೆ ಸೂಚಿಸಿತು. ಕಳೆದ ವರ್ಷದ ಏಪ್ರಿಲ್ ಹೊಸ ಸುರಕ್ಷತಾ ಮಾನದಂಡವನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿತು.

ಕನಿಷ್ಠ ಸುರಕ್ಷತಾ ಮಾನದಂಡ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಜಿಪ್ಸಿ ಕಾರನ್ನು ಮಾರುತಿ ಸುಜುಕಿ ಕಂಪನಿ ಕೆಲವೊಂದು ಬದಲಾವಣೆ ಮಾಡಿ ರಸ್ತೆಗೆ ಇಳಿಸಲು ಪ್ರಯತ್ನ ನಡೆಸಿತ್ತು. ಆದರೆ ಹೊಸ ರಕ್ಷಣೆ ಮತ್ತು ಕ್ರ್ಯಾಶ್ ಟೆಸ್ಟ್ ನಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಜಿಪ್ಸಿ ಕಾರಿನ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತು.

1985ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿ ಬಿಡುಗಡೆಯಾಗಿತ್ತು. ಬಿಡುಗಡೆಯಾದಾಗಿನಿಂದಲೂ ಮಾರುತಿ ಸುಜುಕಿ ಜಿಪ್ಸಿ ತನ್ನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ 34 ವರ್ಷಗಳ ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಕಮಾಲ್ ಮಾಡಿತ್ತು.

ಮಾರುತಿ ಜಿಪ್ಸಿಯನ್ನು ಅತಿ ಹೆಚ್ಚು ಖರೀದಿಸುತ್ತಿದ್ದ ಭಾರತೀಯ ಸೇನೆಯು ಅದನ್ನು ಬದಲಾಯಿಸಿ ಟಾಟಾ ಸಫಾರಿ ಸ್ಟಾರ್ಮ್ ಅನ್ನು ಖರೀದಿಸುತ್ತಿದ್ದರು. ಆದರೆ ಇದೀಗ ಭಾರತೀಯ ಸೇನೆಯು ಹೊಸದಾಗಿ ಜಿಪ್ಸಿಯನ್ನು ಖರೀದಿಸಲು ಮುಂದಾಗಿದೆ.

ಮಾರುತಿ ಸುಜುಕಿ ಕಂಪನಿಯು ಭಾರತದ ಸೇನೆಯಿಂದ ಜಿಪ್ಸಿಯ ಆರ್ಡರ್ ಪಡೆದಿರುವುದಕ್ಕೆ ಶೀಘ್ರದಲ್ಲೇ ಜಿಪ್ಸಿಯ ಉತ್ಪಾದನೆಯನ್ನು ಪ್ರಾರಂಭಿಸಲಿದೆ. ಆದರೆ ಈ ಐಕಾನಿಕ್ ಆಫ್ ರೋಡರ್ ಜಿಪ್ಸಿ ಕೇವಲ ಭಾರತೀಯ ಸೇನೆಗೆ ಮಾತ್ರ ಸಿಮೀತವಾಗಿರುತ್ತದೆ. ಅದನ್ನು ಇತರ ಗ್ರಾಹಕರಿಗೆ ಮಾರಾಟ ಮಾಡಲಾಗುವುದಿಲ್ಲ.

ಮಾರುತಿ ಜಿಪ್ಸಿ ಸುರಕ್ಷತಾ ನಿಯಮಕ್ಕೆ ಅನುಸರವಾಗಿಲ್ಲ ಮತ್ತು ಜಿಪ್ಸಿ ಜಿ13, 1.3 ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸರವಾಗಿ ನವೀಕರಿಸುವಲ್ಲಿ ವಿಫಲವಾಗಿದೆ. ಆದರೆ ಈ ನಿಯಮಗಳು ಸೈನ್ಯಕ್ಕೆ ನೀಡುವ ವಾಹನದಲ್ಲಿ ಅನುಸರಿಸುವುದಿಲ್ಲ. ಯಾಕೆಂದರೆ ಈ ನಿಯಮಗಳು ಸೈನ್ಯದ ವಾಹನಗಳಿಗೆ ಅನ್ವಯವಾಗುವುದಿಲ್ಲ.

ಮಾರುತಿ ಸುಜುಕಿ ಜಿಪ್ಸಿ ಬದಲಾಗಿ ತನ್ನ ಉತ್ತರಾಧಿಕಾರಿ ಎಂದು ಕರೆಯಬಹುದಾದ ಮಾರುತಿ ಸುಜುಕಿ ಜಿಮ್ನಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಯೋಜಿಸಿದೆ. ಮಿನಿ ಆಫ್ ರೋಡರ್ ಎಸ್‍ಯುವಿಗಳಿಗೆ ಭಾರತದಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ಸೀಮಿತ ಆವೃತ್ತಿಯಾಗಿ ಬಿಡುಗಡೆಗೊಳಿಸಲು ಚಿಂತಿಸುತ್ತಿದೆ.

ಹೊಸ ತಲೆಮಾರಿನ ಸುಜುಕಿ ಜಿಮ್ನಿ 2018 ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಭಾರತೀಯ ಮಾರುಕಟ್ಟೆ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಮೆಚ್ಚುಗೆ ಪಡೆಯುವಲ್ಲಿ ಮಾರುತಿ ಸುಜುಕಿ ಜಿಮ್ನಿ ಯಶಸ್ವಿಯಾಗಿದೆ.


Click it and Unblock the Notifications