ಕುಸಿದ ಹೊಸ ಕಾರುಗಳ ಮಾರಾಟ- ಲೀಸ್ ಕಾರುಗಳ ಉದ್ಯಮದತ್ತ ಮಾರುತಿ ಸುಜುಕಿ..!
ವೈರಸ್ ತಡೆಗಾಗಿ ಲಾಕ್‌ಡೌನ್ ಅನಿವಾರ್ಯವಾಗಿದ್ದರಿಂದ ಭಾರತೀಯ ಆಟೋ ಉದ್ಯಮವು ಈಗಲೂ ಸಹ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಆಟೋ ಕ್ಷೇತ್ರಕ್ಕೆ ವಿನಾಯ್ತಿ ನೀಡಲಾಗಿದೆಯಾದರೂ ಆರ್ಥಿಕ ಮುಗ್ಗಟ್ಟು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಹೊಸ ಸುರಕ್ಷಾ ಮಾರ್ಗಸೂಚಿತಂತೆ ಆಟೋ ಉದ್ಯಮವು ಮರು ಚಾಲನೆಗೊಂಡರು ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ವಾಹನ ಉತ್ಪಾದನಾ ಕಂಪನಿಗಳು ಪರದಾಡುತ್ತಿವೆ. ಜೊತೆಗೆ ಲಾಕ್‌ಡೌನ್‌ಗೂ ಮೊದಲು ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಇದೀಗ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಮಾರಾಟ ಮಳಿಗೆಗಳು ಪುನಾರಂಭಗೊಂಡ ನಂತರ ಹೊಸ ವಾಹನಗಳ ಖರೀದಿ ಬದಲು ಬುಕ್ಕಿಂಗ್ ಹಣ ವಾಪಸ್ ನೀಡುವಂತೆ ಬೇಡಿಕೆಯಿಡುತ್ತಿದ್ದಾರೆ.

ಸದ್ಯಕ್ಕೆ ವಾಹನ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿರುವ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿದ್ದು, ಲಾಕ್‌ಡೌನ್ ನಂತರ ವಾಹನ ಮಾರಾಟ ಯೋಜನೆಯಲ್ಲಿದ್ದ ಆಟೋ ಕಂಪನಿಗಳಿಗೆ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುವ ಮೂಲಕ ಮತ್ತೊಂದು ಶಾಕ್ ನೀಡಿದ್ದಾರೆ.

ಲಾಕ್‌ಡೌನ್‌ಗೂ ಮುನ್ನ ದೇಶಾದ್ಯಂತ ಹೊಸ ವಾಹನಗಳಿಗೆ ಬುಕ್ಕಿಂಗ್ ಮಾಡಿದ್ದ ಗ್ರಾಹಕರಲ್ಲಿ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಇದೀಗ ಬುಕ್ಕಿಂಗ್ ಹಣ ವಾಪಸ್ ನೀಡುವಂತೆ ಬೇಡಿಕೆ ಸಲ್ಲಿಸಿದ್ದು, ಇದು ಆಟೋ ಕಂಪನಿಗಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಹೀಗಾಗಿ ಕರೋನಾ ವೈರಸ್ ಅಬ್ಬರ ತಗ್ಗುವ ತನಕ ವಾಹನ ಖರೀದಿ ಯೋಜನೆಯನ್ನು ಮುಂದೂಡುವುದೇ ಉತ್ತಮ ಎನ್ನುವ ಯೋಜನೆಯಲ್ಲಿರುವ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿದ್ದಾರೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಇನ್ನು ಕೆಲವು ಗ್ರಾಹಕರು ಹೊಸ ವಾಹನಗಳ ಖರೀದಿಯ ಬದಲಾಗಿ ಲೀಸ್‌ಗೆ ಪಡೆದುಕೊಳ್ಳಲು ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವ ಪ್ರಮುಖ ಕಾರು ಕಂಪನಿಗಳು ಲೀಸ್ ಕಾರುಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿವೆ.

ಮಾರುತಿ ಸುಜುಕಿ ಕೂಡಾ ಈ ನಿಟ್ಟಿನಲ್ಲಿ ವಿವಿಧ ಕಾರ್ ಲೀಸ್ ಕಂಪನಿಗಳೊಂದಿಗೆ ಕೈಜೋಡಿಸುತ್ತಿದ್ದು, ಪ್ರಮುಖ ಕಾರು ಮಾದರಿಗಳನ್ನು ಲೀಸ್ ಕಂಪನಿಗಳಿಗೆ ಒದಗಿಸಲು ಯೋಜನೆ ರೂಪಿಸುತ್ತಿದೆ.
MOST READ: ಲಾಕ್‌ಡೌನ್ ವಿನಾಯ್ತಿ ನಂತರ ಮೊದಲ ಬಾರಿಗೆ ನೆಕ್ಸಾನ್ ಇವಿ ವಿತರಣೆ ಪುನಾರಂಭಿಸಿದ ಟಾಟಾ

ಇದು ಕಾರು ಮಾರಾಟದಷ್ಟೇ ಲಾಭದಾಯಕ ಉದ್ಯಮವಾಗಿದ್ದು, ಹಲವಾರು ಕಾರು ಕಂಪನಿಗಳು ಲೀಸ್ ವಾಹನ ಸಂಖ್ಯೆಯನ್ನು ಇದೇ ಕಾರಣಕ್ಕೆ ಹೆಚ್ಚಿಸುತ್ತ ಗಮನಹರಿಸುತ್ತಿವೆ. ಇದರ ಜೊತೆಗೆ ಗ್ರಾಹಕರಿಗೂ ಇದು ಸಾಕಷ್ಟು ಅನುಕೂಲಕರವಾಗಿದ್ದು, ಬೇಕೆಂದ ಸಂದರ್ಭಗಳಲ್ಲಿ ಮಾಲೀಕತ್ವ ಪಡೆದುಕೊಂಡು ಬೇಡವಾದಾಗ ಕಾರುಗಳನ್ನು ಹಿಂದಿರುಗಿಸಬಹುದು.


Click it and Unblock the Notifications