ಎಸ್-ಕ್ರಾಸ್ ಕಾರು ಮಾದರಿಯಲ್ಲಿ ಹೊಸದಾಗಿ ಸಿಗ್ಮಾ ಪ್ಲಸ್ ವೆರಿಯೆಂಟ್ ಬಿಡುಗಡೆ
ಮಾರುತಿ ಸುಜುಕಿ ಕಂಪನಿಯು ಬಿಎಸ್-6 ಎಸ್-ಕ್ರಾಸ್ ಎಸ್‌ಯುವಿ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹೊಸದಾಗಿ ಸಿಗ್ಮಾ ಪ್ಲಸ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 8.56 ಲಕ್ಷ ಬೆಲೆ ಹೊಂದಿದೆ.

ಎಸ್-ಕ್ರಾಸ್ ಕಾರಿನಲ್ಲಿರುವ ಸಿಗ್ಮಾ ಮತ್ತು ಡೆಲ್ಟಾ ವೆರಿಯೆಂಟ್‌ಗಳ ನಡುವಿನ ಅಂತರ ತುಂಬಲು ಸಿಗ್ಮಾ ಪ್ಲಸ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಗ್ರಾಹಕರ ಬೇಡಿಕೆ ಅನುಸಾರವಾಗಿ ಹೊಸ ವೆರಿಯೆಂಟ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಎಸ್-ಕ್ರಾಸ್ ಕಾರು ಸಿಗ್ಮಾ ಪ್ಲಸ್‌ನೊಂದಿಗೆ ಸಿಗ್ಮಾ, ಡೆಲ್ಟಾ, ಜೆಟಾ ಮತ್ತು ಅಲ್ಫಾ ವೆರಿಯೆಂಟ್ ಒಳಗೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.39 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.12.39 ಲಕ್ಷ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದೆ.

ವಿಟಾರಾ ಬ್ರೆಝಾ ನಂತರ ಎಸ್-ಕ್ರಾಸ್ ಕಾರು ಮಾದರಿಯು ಕೂಡಾ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟಗೊಳ್ಳುತ್ತಿದ್ದು, ಮಾರುತಿ ಸುಜುಕಿಯು ಬಿಎಸ್-6 ಎಮಿಷನ್ ನಿಯಮ ಅನುಸಾರವಾಗಿ ಹೊಸ ಎಂಜಿನ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದೆ.

ಆರಂಭಿಕ ಮಾದರಿಯಾಗಿ ಸಿಗ್ಮಾ ಮ್ಯಾನುವಲ್ ಮತ್ತು ಹೈ ಎಂಡ್ ಮಾದರಿಯಾಗಿ ಅಲ್ಫಾ ಆಟೋಮ್ಯಾಟಿಕ್ ಆವೃತ್ತಿಯು ಮಾರಾಟಗೊಳ್ಳುತ್ತಿದ್ದು, ಇದೀಗ ಬಿಡುಗಡೆಯಾಗಿರುವ ಹೊಸ ಪ್ಲಸ್ ವೆರಿಯೆಂಟ್ ಮಧ್ಯಮ ಕ್ರಮಾಂಕದ ಸ್ಥಾನವನ್ನು ಹೊಂದಿದೆ.

ಬಿಎಸ್-6 ಎಂಜಿನ್ ಹೊಂದಿರುವ ಎಸ್-ಕ್ರಾಸ್ ಪೆಟ್ರೋಲ್ ಮಾದರಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಣೆಯ 1.5-ಲೀಟರ್ ಕೆ15ಬಿ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿದೆ.

ಈ ಮೂಲಕ ಹೊಸ ಎಂಜಿನ್ ಮಾದರಿಯು ಮೈಲೇಜ್ ವಿಚಾರದಲ್ಲೂ ಗ್ರಾಹಕರನ್ನು ಸೆಳೆಯುತ್ತಿದ್ದು, ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್ ಗರಿಷ್ಠ 18.55ಕಿ.ಮೀ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18.43 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಎಸ್-ಕ್ರಾಸ್ ಕಾರಿನಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.3-ಲೀಟರ್ ಡೀಸೆಲ್ ಮಾದರಿಯು ಪ್ರತಿ ಲೀಟರ್‌ಗೆ 25.01 ಕಿ.ಮೀ ಮೈಲಜ್ ಹೊಂದಿತ್ತು. ಆದರೆ ಬಿಎಸ್-6 ವೈಶಿಷ್ಟ್ಯತೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲದ ಹಿನ್ನಲೆಯಲ್ಲಿ ಪೆಟ್ರೋಲ್ ಮಾದರಿಗಳ ಮೇಲೆ ಹೆಚ್ಚು ಗಮನಹರಿಸಲಾಗಿದೆ.

ಒಂದು ವೇಳೆ ಈ ಹಿಂದಿನ 1.3-ಲೀಟರ್ ಡೀಸೆಲ್ ಮಾದರಿಯನ್ನು ಹೊಸ ಎಮಿಷನ್ ನಿಯಮಗಳಿಗೆ ಉನ್ನತೀಕರಿಸಿದ್ದರೂ ಹೊಸ ಕಾರುಗಳ ಬೆಲೆಯು ಸಾಕಷ್ಟು ದುಬಾರಿಯಾಗುವ ಸಾಧ್ಯತೆಯಿತ್ತು. ಈ ಹಿನ್ನಲೆಯಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಪೂರ್ತಿಯಾಗಿ ಸ್ಥಗಿತಗೊಳಿಸಿರುವ ಮಾರುತಿ ಸುಜುಕಿಯು ಕೇವಲ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರು ಮಾದರಿಯನ್ನು ಮಾತ್ರವೇ ಮಾರಾಟ ಮಾಡುತ್ತಿದೆ.


Click it and Unblock the Notifications