ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಆಲ್ಟೋ ಸಿಎನ್‌ಜಿ ಬಿಡುಗಡೆ
ಬಿಎಸ್-6 ಎಮಿಷನ್ ನಿಯಮ ಜಾರಿಗೆ ದಿನಗಣನೆ ಶುರುವಾಗಿದ್ದು, ಮಾರುತಿ ಸುಜುಕಿ ಸಂಸ್ಥೆಯು ಡೀಸೆಲ್ ಎಂಜಿನ್ ಕಾರುಗಳನ್ನು ಹೊರತುಪಡಿಸಿ ಬಹುತೇಕ ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಗಳನ್ನು ಹೊಸ ನಿಯಮ ಅನುಸಾರ ಉನ್ನತೀಕರಿಸಿದ್ದು, ಇದೀಗ ಆಲ್ಟೋ ಸಿಎನ್‌ಜಿ ಮಾದರಿಯನ್ನು ಸಹ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿದೆ.

ಹೊಸ ಎಮಿಷನ್ ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದ್ದು, ಮಾರುತಿ ಸುಜುಕಿ ಸಂಸ್ಥೆಯು ಎಂಟ್ರಿ ಲೆವಲ್ ಡೀಸೆಲ್ ಕಾರುಗಳ ಮಾರಾಟವನ್ನೇ ಸ್ಥಗಿತಗೊಳಿಸಲು ನಿರ್ಧರಿಸಿದೆ. ಇದಕ್ಕಾಗಿಯೇ ಡೀಸೆಲ್ ಎಂಜಿನ್ ಮಾದರಿಯಲ್ಲೇ ಮಹತ್ವದ ಬದಲಾವಣೆ ತಂದಿರುವ ಮಾರುತಿ ಸುಜುಕಿಯು ಡೀಸೆಲ್ ಎಂಜಿನ್‌ಗೆ ಬದಲಾಗಿ ಪೆಟ್ರೋಲ್, ಸ್ಮಾರ್ಟ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಮೇಲೆ ಹೆಚ್ಚು ಗಮನಹರಿಸುತ್ತಿದೆ.

ಅದರಲ್ಲೂ ಎಂಟ್ರಿ ಲೆವಲ್ ಕಾರುಗಳಲ್ಲಿ ಡೀಸೆಲ್ ಎಂಜಿನ್ ಕಾರುಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಸಿಎನ್‌ಜಿ ಕಾರುಗಳತ್ತ ಮುಖಮಾಡಿದ್ದು, ಆಲ್ಟೋ, ವ್ಯಾಗನ್ಆರ್, ಸೆಲೆರಿಯೊ ಮತ್ತು ಎರ್ಟಿಗಾ ಕಾರಿನಲ್ಲೂ ಸಿಎನ್‌ಜಿ ಎಂಜಿನ್ ಮಾರಾಟ ಮಾಡುತ್ತಿದೆ.

ಇದೀಗ ಬಿಎಸ್-6 ಎಂಜಿನ್ ಪ್ರೇರಿತ ಆಲ್ಟೊ ಸಿಎನ್‌ಜಿ ಆವೃತ್ತಿಯು ಸಹ ಮಾರುಕಟ್ಟೆಗೆ ಪ್ರವೇಶಿಸಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.33ಲಕ್ಷಕ್ಕೆ ಖರೀದಿಗೆ ಲಭ್ಯವಿರಲಿದೆ. ಹೊಸ ಕಾರು ಪೆಟ್ರೋಲ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳನ್ನು ಹೊಂದಿದೆ.

ಈ ಮೂಲಕ ಹೊಸ ಕಾರು ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಮತ್ತು ಪ್ರಯಾಣಿಕ ಸುರಕ್ಷತೆಯಲ್ಲಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, 796-ಸಿಸಿ ತ್ರಿ ಸಿಲಿಂಡರ್ ಎಂಜಿನ್ ಮೂಲಕ 40-ಬಿಎಚ್‌ಪಿ ಮತ್ತು 60-ಎನ್ಎಂ ಟಾರ್ಕ್ ಮೂಲಕ ಆಕರ್ಷಕ ಮೈಲೇಜ್ ಹಿಂದಿರುಗಿಸಲಿದೆ. ಆಲ್ಟೊ ಸಿಎನ್‌ಜಿ ಆಯ್ಕೆಯು ಎಲ್ಎಕ್ಸ್ಐ ಮತ್ತು ಎಲ್ಎಕ್ಸ್ಐ ಆಪ್ಷನ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಎಲ್ಎಕ್ಸ್ಐ ಸಿಎನ್‌ಜಿ ಬೆಲೆಯು ರೂ. 4,32,700ಕ್ಕೆ ಮತ್ತು ಎಲ್ಎಕ್ಸ್ಐ ಆಪ್ಷನ್ ಸಿಎನ್‌ಜಿ ಬೆಲೆಯು ರೂ.4,36,300ಕ್ಕೆ ನಿಗದಿಪಡಿಸಲಾಗಿದೆ.

ಇನ್ನು ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮ ಜಾರಿಗೆ ಬರುವ ಮುನ್ನವೇ ಹೊಸ ಎಂಜಿನ್ ಪ್ರೇರಿತ ಕಾರುಗಳ ಮಾರಾಟದಲ್ಲಿ ದಾಖಲೆಗೆ ಕಾರಣವಾಗಿದ್ದು, ಕಳೆದ 10 ತಿಂಗಳ ಅವಧಿಯಲ್ಲಿ ಬರೋಬ್ಬರಿ 5 ಲಕ್ಷ ಹೊಸ ಎಂಜಿನ್ ಪ್ರೇರಿತ ಕಾರುಗಳನ್ನು ಮಾರಾಟ ಮಾಡಿದೆ.

ಸದ್ಯಕ್ಕೆ ಬಿಎಸ್-6 ಪೆಟ್ರೋಲ್ ಎಂಜಿನ್ ಪ್ರೇರಿತ ಕಾರುಗಳನ್ನು ಮಾತ್ರವೇ ಮಾಡುತ್ತಿರುವ ಮಾರುತಿ ಸುಜುಕಿಯು ಡೀಸೆಲ್ ಕಾರುಗಳನ್ನು ಬಿಎಸ್-4 ಎಂಜಿನ್‌ನೊಂದಿಗೆ ಮಾರಾಟ ಮುಂದುವರಿಸಿದ್ದು, ಶೀಘ್ರದಲ್ಲೇ ಬಿಎಸ್-6 ಎಂಜಿನ್ ಪ್ರೇರಿತ ಡೀಸೆಲ್ ಕಾರುಗಳನ್ನು ಮಾರಾಟ ಮಾಡಲಿದೆ.

ಇನ್ನು ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವುದೇ ಈ ಬದಲಾವಣೆಗೆ ಪ್ರಮುಖ ಕಾರಣವಾಗಿದ್ದು, ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಎಂಟ್ರಿ ಲೆವಲ್ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿವೆ.

ಎಂಟ್ರಿ ಲೆವಲ್ ಕಾರುಗಳಲ್ಲಿ ಡೀಸೆಲ್ ಎಂಜಿನ್ ಬದಲಿಗೆ ಪೆಟ್ರೋಲ್ ಮತ್ತು ಸಿಎನ್‌ಜಿ ಕಾರುಗಳ ಆಯ್ಕೆಯನ್ನು ಹೆಚ್ಚಿಸುತ್ತಿರುವ ಮಾರುತಿ ಸುಜುಕಿಯು ಹೈ ಎಂಡ್ ಕಾರು ಮಾದರಿಗಳಲ್ಲಿ ಮಾತ್ರವೇ ಡೀಸೆಲ್ ಎಂಜಿನ್ ಆಯ್ಕೆ ನೀಡುವ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಒಂದು ವೇಳೆ ಎಂಟ್ರಿ ಲೆವಲ್ ಕಾರುಗಳ ಡೀಸೆಲ್ ಮಾದರಿಗಳನ್ನು ಉನ್ನತೀಕರಿಸಿದರೂ ಸಹ ಕಾರುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದ್ದು, ಈ ಕಾರಣಕ್ಕಾಗಿಯೇ ಮಾರುತಿ ಸುಜುಕಿಯು ರೂ.10 ಲಕ್ಷದೊಳಗಿನ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯ ಬಗೆಗೆ ಹೆಚ್ಚು ತೆಲೆಕೆಡಿಸಿಕೊಳ್ಳದೇ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳಿಗೆ ವಿಶೇಷ ಗಮನಹರಿಸುತ್ತಿದೆ.

ಇದರಿಂದ ಮಾರುತಿ ಸುಜುಕಿ ನಿರ್ಮಾಣದ ಎಂಟ್ರಿ ಲೆವಲ್ ಕಾರುಗಳಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರವೇ ಸಿಗಲಿದ್ದು, ಹೈ ಎಂಡ್ ಮಾದರಿಗಳಲ್ಲಿ ಮಾತ್ರವೇ 1.5-ಲೀಟರ್, 1.6-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಬಿಡುಗಡೆ ಮಾಡುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಂತರ ಬೆಲೆ ಹೆಚ್ಚಿದರೂ ಕೂಡಾ ಹೊಸ ಬದಲಾವಣೆಯೊಂದಿಗೆ ಕಾರು ಮಾರಾಟದಲ್ಲಿ ಕುಸಿಯದಂತೆ ಎಂಜಿನ್ ಆಯ್ಕೆಗಳನ್ನು ಸಿದ್ದಪಡಿಸುತ್ತಿದೆ.


Click it and Unblock the Notifications








