ಇಂಡಸ್‌ಇಂಡ್ ಬ್ಯಾಂಕ್ ಜೊತೆಗೂಡಿ ಹೊಸ ಲೋನ್ ಆಫರ್ ಪರಿಚಯಿಸಿದ ಮಾರುತಿ ಸುಜುಕಿ
ಲಾಕ್‌ಡೌನ್ ಸಂಕಷ್ಟದಿಂದಾಗಿ ಹೊಸ ವಾಹನಗಳ ಖರೀದಿ ಯೋಜನೆಯಿಂದ ಹಿಂದೆ ಸರಿಯುತ್ತಿರುವ ಗ್ರಾಹಕರನ್ನು ಸೆಳೆಯುತ್ತಿರುವ ಮಾರುತಿ ಸುಜುಕಿ ಕಂಪನಿಯು ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವಾರು ಲೋನ್ ಸೌಲಭ್ಯಗಳನ್ನು ಘೋಷಣೆ ಮಾಡಿದೆ.

ಆಟೋ ಉದ್ಯಮ ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಕೂಡಾ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇದಕ್ಕಾಗಿಯೇ ಸಂಕಷ್ಟದಲ್ಲಿರುವ ಆಟೋ ಕಂಪನಿಗಳು ಕುಸಿದಿರುವ ಹೊಸ ವಾಹನಗಳ ಮಾರಾಟವನ್ನು ಸುಧಾರಿಸಲು ವಿವಿಧ ಮಾದರಿಯ ಲೋನ್ ಆಫರ್‌ಗಳನ್ನು ಘೋಷಿಸುತ್ತಿವೆ.

ಲಾಕ್‌ಡೌನ್‌ನಿಂದ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಅತಿ ದೊಡ್ಡ ಸಮಸ್ಯೆಯಾಗಿ ಕಾಡತೋಡಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿವೆ.

ಹೊಸ ವಾಹನ ಖರೀದಿದಾರರಿಗೆ ಇಎಂಐ ಹೊರೆ ತಗ್ಗಿಸಲು ಅತಿ ಸುಲಭವಾದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ದೇಶದ ಅತಿ ದೊಡ್ಡ ಕಾರು ಮಾರಾಟ ಕಂಪನಿ ಮಾರುತಿ ಸುಜುಕಿ ಕೂಡಾ ಆಯ್ದ ಕಾರು ಮಾದರಿಗಳ ಮೇಲೆ ವಿಶೇಷ ಲೋನ್ ಆಫರ್ ನೀಡಿದೆ.

ಇಂಡಸ್ಇಂಡ್ ಬ್ಯಾಂಕ್ ಜೊತೆಗೂಡಿ ಕನಿಷ್ಠ ಇಎಂಐ, ಸೆಟ್ ಅಪ್ ಇಎಂಐ, ಬಲೂನ್ ಇಎಂಐ ಸ್ಕೀಮ್ ಪರಿಚಯಿಸಿದ್ದು, ಆಯ್ದ ಕಾರು ಮಾದರಿಗಳ ಮೇಲೆ ಶೇ.100 ಆನ್‌ರೋಡ್ ಲೋನ್‌ಗಳನ್ನು ಪರಿಚಯಿಸಿದೆ.

ಜೊತೆಗೆ ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್‌ಗಳೊಂದಿಗೆ ಕೈಜೋಡಿಸಿರುವ ಮಾರುತಿ ಸುಜುಕಿಯು ಶೇ.100 ಆನ್‌ರೋಡ್ ಲೋನ್‌ಗಳನ್ನು ಪರಿಚಯಿಸುತ್ತಿದ್ದು, ಲಾಕ್‌ಡೌನ್ ಸಂಕಷ್ಟದಲ್ಲಿ ಮರುಪಾವತಿಗೂ ಅನುಕೂರವಾಗುವಂತೆ ಇಎಂಐ ಆಯ್ಕೆಗಳನ್ನು ಪರಿಚಯಿಸಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಫ್ಲೆಕ್ಸಿ ಇಎಂಐ, ಬಲೂನ್ ಇಎಂಐ, ಸೆಟ್ ಅಪ್ ಇಐಎಂ ಸೇರಿದಂತೆ ಹಲವಾರು ಇಎಂಐ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಿರುವ ಮಾರುತಿ ಸುಜುಕಿಯು ಕಾರು ಮಾರಾಟ ಸುಧಾರಿಸುವ ಯೋಜನೆಯಲ್ಲಿದ್ದು, ಸದ್ಯ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಸಂಪೂರ್ಣ ಆನ್‌ರೋಡ್ ಲೋನ್ ಲಭ್ಯವಾಗಲಿದೆ.

ಇದಲ್ಲದೆ ಚೋಳಮಂಡಲಂ ಇನ್ವೆಸ್ಟಮೆಂಟ್ ಅಂಡ್ ಫೈನಾನ್ಸ್ ಕಂಪನಿ ಲಿಮಿಟೆಡ್‌ನೊಂದಿಗೂ ಕೈ ಜೋಡಿಸುವ ಮೂಲಕ ಹಲವು ಹೊಸ ಲೋನ್ ಆಫರ್ ಘೋಷಿಸಿರುವ ಮಾರುತಿ ಸುಜುಕಿ ಕಂಪನಿಯು ನಿಮ್ಮ ಇಷ್ಟದ ಕಾರುಗಳನ್ನು ಈಗಲೇ ಖರೀದಿಸಿ ಮತ್ತು ಹಣವನ್ನು ಮುಂದಿನ ವರ್ಷದಿಂದ ಮರುಪಾವತಿಸುವ ಅವಕಾಶ ನೀಡುತ್ತಿದೆ.
MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಈ ಆಫರ್ ಆಯ್ದ ಕಾರು ಮಾದರಿಗಳ ಮೇಲೆ ಮಾತ್ರವೇ ಅನ್ವಯವಾಗಲಿದ್ದು, ಗರಿಷ್ಠ ಮಟ್ಟದ ಲೋನ್ ಸೌಲಭ್ಯವು ದೊರೆಯಲಿದೆ. ಇದು ಹೊಸ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಸಾಕಷ್ಟ ಸಹಕಾರಿಯಾಗಲಿದ್ದು, ಹೊಸ ಲೋನ್ ಸೌಲಭ್ಯವು ಈ ತಿಂಗಳು ಜೂನ್ 30ರ ತನಕ ಲಭ್ಯವಿರಲಿದೆ.


Click it and Unblock the Notifications