ಬ್ರೆಝಾ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯಲ್ಲೂ ಬಿಡುಗಡೆಯಾಗಲಿದೆ ಮೈಲ್ಡ್ ಹೈಬ್ರಿಡ್ ವರ್ಷನ್..
ಮಾರುತಿ ಸುಜುಕಿ ಸಂಸ್ಥೆಯು ಕಳೆದ ತಿಂಗಳ ಹಿಂದಷ್ಟೇ ವಿಟಾರಾ ಬ್ರೆಝಾ ಆವೃತ್ತಿಯಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಮಾದರಿಯನ್ನು ಪರಿಚಯಿಸಿದ್ದು, ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಜೋಡಣೆ ಮಾಡಿದೆ. ಇದೀಗ ಮ್ಯಾನುವಲ್ ಆವೃತ್ತಿಯಲ್ಲೂ ಹೈಬ್ರಿಡ್ ತಂತ್ರಜ್ಞಾನ ಜೋಡಣೆ ಮಾಡುವ ಸುಳಿವು ನೀಡಿದ್ದು, ಮೈಲೇಜ್ ವಿಚಾರವಾಗಿ ಹೊಸ ಕಾರು ಮತ್ತಷ್ಟು ಸದ್ದು ಮಾಡಲಿದೆ.

ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆಯಿಂದಾಗಿ ಎಂಜಿನ್ ಸ್ಟಾರ್ಟ್ ಸಂದರ್ಭದಲ್ಲಿ ಎಲೆಕ್ಟ್ರಿಕ್ ಮೋಟಾರ್ ಬಳಕೆಯಾಗಲಿದ್ದು, ಎಂಜಿನ್ ಚಾಲನೆ ನಂತರ ಅದು ಪೆಟ್ರೋಲ್ ಎಂಜಿನ್ ಸಂಪರ್ಕವನ್ನು ಪಡೆದುಕೊಳ್ಳುತ್ತದೆ. ಈ ವೇಳೆ ಎಂಜಿನ್ ಸ್ಟಾರ್ಟ್ ಸಂದರ್ಭದಲ್ಲಿನ ಇಂಧನ ವ್ಯಯ ತಪ್ಪಿಸುವ ಮೈಲ್ಡ್ ಹೈಬ್ರಿಡ್ ಎಂಜಿನ್ ತಂತ್ರಜ್ಞಾನವು ಈಗಾಗಲೇ ವಿಟಾರಾ ಬ್ರೆಝಾ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಜೋಡಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮ್ಯಾನುವಲ್ ಮಾದರಿಯಲ್ಲೂ ಹೊಸ ತಂತ್ರಜ್ಞಾನ ಜೋಡಣೆ ಮಾಡಲಿದೆ.

ಸದ್ಯ ಮಾರುತಿ ಸುಜುಕಿ ನಿರ್ಮಾಣದ ಬಹುತೇಕ ಕಾರುಗಳಲ್ಲಿ SHVS(ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಬೈ ಸುಜುಕಿ) ತಂತ್ರಜ್ಞಾನವು ಬಳಕೆ ಮಾಡಲಾಗುತ್ತಿದ್ದು, ಆಟೋಮ್ಯಾಟಿಕ್ ಆವೃತ್ತಿಗಳ ನಂತರ ಇದೀಗ ಮ್ಯಾನುವಲ್ ಆವೃತ್ತಿಗಳಲ್ಲೂ ಜೋಡಣೆ ಮಾಡುತ್ತಿರುವುದು ಮಹತ್ವದ ಬದಲಾವಣೆ ಕಾರಣವಾಗಲಿದೆ.

ಹೊಸ ವಿಟಾರಾ ಬ್ರೆಝಾ ಕಾರಿನಲ್ಲಿ ಅಳವಡಿಸಲು ಉದ್ದೇಶಿಸಲಾಗಿರುವ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದಿಂದಾಗಿ ಮೈಲೇಜ್ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆಯಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್‌ಗೆ 17.03 ಕಿ.ಮೀ ಮೈಲೇಜ್ ನೀಡುತ್ತಿದೆ.

ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಜೋಡಣೆಯ ನಂತರ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯ ಮೈಲೇಜ್ ಪ್ರಮಾಣದಲ್ಲಿ 18.76ಕಿ.ಮೀ ಹೆಚ್ಚಳವಾಗಲಿದ್ದು, SHVS ಹೈಬ್ರಿಡ್ ತಂತ್ರಜ್ಞಾನವು 12ವಿ ಹೈಬ್ರಿಡ್ ಸಿಸ್ಟಂ ಜೊತೆ 1.76 ಕೆವಿ ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಳ್ಳಲಿದೆ. ಹೊಸ ಕಾರು ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆಗೊಳ್ಳಲಿದ್ದು, ಇದು ಆಟೋಮ್ಯಾಟಿಕ್ ಆವೃತ್ತಿಗಿಂತಲೂ ತುಸು ದುಬಾರಿಯಾಗಿರಲಿದೆ.

ಇನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಹೊಸ ಕಾರು ಇದೀಗ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರಿನ ಬೆಲೆಗಳು ಆಕರ್ಷಕವಾಗಿವೆ. ಹೊಸ ವಿಟಾರಾ ಬ್ರೆಝಾ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.7.34 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 11.40 ಲಕ್ಷ ಬೆಲೆ ಪಡೆದುಕೊಂಡಿದೆ.

ಹೊಸ ಪೆಟ್ರೋಲ್ ಕಾರಿನ ಬೆಲೆಯು ಈ ಹಿಂದಿನ ಡೀಸೆಲ್ ಮಾದರಿಯ ಬೆಲೆಗಳಿಗೆ ಸಮನಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ ಎಟಿ, ಜೆಡ್ಎಕ್ಸ್ಐ, ಜೆಡ್ಎಕ್ಸ್ಐ ಎಟಿ, ಜೆಡ್ಎಕ್ಸ್ಐ ಪ್ಲಸ್, ಜೆಡ್ಎಕ್ಸ್ಐ ಪ್ಲಸ್ ಎಟಿ, ಜೆಡ್ಎಕ್ಸ್ಐ ಪ್ಲಸ್ ಎಟಿ ಡ್ಯುಯಲ್ ಕಲರ್ ವೆರಿಯೆಂಟ್ ಆಯ್ಕೆ ಮಾಡಬಹುದಾಗಿದೆ.

2017ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ವಿಟಾರಾ ಬ್ರೆಝಾ ಕಾರು ಆವೃತ್ತಿಯಲ್ಲಿ ಇದುವರೆಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ಮಾರಾಟ ಮಾಡುತ್ತಿದ್ದ ಮಾರುತಿ ಸುಜುಕಿ ಇದೀಗ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪರಿಚಯಿಸಿದೆ.

ಫಿಯೆಟ್‌ನಿಂದ ಎರವಲು ಪಡೆಯಲಾಗುತ್ತಿದ್ದ 1.3-ಲೀಟರ್ ಬೂಸ್ಟರ್ ಜೆಟ್ ಡೀಸೆಲ್ ಎಂಜಿನ್‌ಗೆ ಗುಡ್‌ಬೈ ಹೇಳಲಾಗಿದ್ದು, ಇದೀಗ ತನ್ನದೇ ನಿರ್ಮಾಣದ 1.5-ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್‌ನೊಂದಿಗೆ ಹೊಸ ವಿಟಾರಾ ಬ್ರೆಝಾ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ಹೊಸ ವಿಟಾರಾ ಬ್ರೆಝಾದಲ್ಲಿ ಬಳಕೆ ಮಾಡಿರುವ 1.5-ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಮಾದರಿಯನ್ನು ಈಗಾಗಲೇ ಎರ್ಟಿಗಾ ಎಕ್ಸ್ಎಲ್6 ಮತ್ತು ಸಿಯಾಜ್ ಕಾರುಗಳಲ್ಲಿ ಬಳಕೆ ಮಾಡಲಾಗುತ್ತಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಗಳಲ್ಲಿ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ.

ಈ ಮೂಲಕ ಹೊಸ ಪೆಟ್ರೋಲ್ ಎಂಜಿನ್ ಮಾದರಿಯು 105-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಿದೆ.


Click it and Unblock the Notifications








