ಶೀಘ್ರದಲ್ಲೇ ಸಿಎನ್‌ಜಿ ಆಯ್ಕೆ ಪಡೆದುಕೊಳ್ಳಲಿವೆ ಮಾರುತಿ ಸ್ವಿಫ್ಟ್, ಇಗ್ನಿಸ್ ಮತ್ತು ಸಿಯಾಜ್
ದೇಶದ ಮುಂಚೂಣಿ ಕಾರು ಮಾರಾಟ ಕಂಪನಿಯದ ಮಾರುತಿ ಸುಜುಕಿಯು ಈಗಾಗಲೇ ಹಲವಾರು ಬದಲಾವಣೆಗಳೊಂದಿಗೆ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಬಿಎಸ್-6 ಜಾರಿ ನಂತರ ಹೊಸ ಕಾರುಗಳ ಎಂಜಿನ್ ಜೋಡಣೆಯಲ್ಲಿ ಭಾರೀ ಬದಲಾವಣೆ ತಂದಿದೆ.

ಬಿಎಸ್-6 ಎಮಿಷನ್ ಪ್ರಕಾರ ಡೀಸೆಲ್ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆ ತಂದಿರುವ ಮಾರುತಿ ಸುಜುಕಿ ಕಂಪನಿಯು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟಕ್ಕೆ ಈಗಾಗಲೇ ಗುಡ್‌ಬೈ ಹೇಳಿದ್ದು, ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಹಲವು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವುದೇ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಲು ಪ್ರಮುಖ ಕಾರಣವಾಗಿದೆ.

ಮಾರುತಿ ಸುಜುಕಿ ಮಾತ್ರವಲ್ಲದೆ ಬಹುತೇಕ ಕಾರು ಉತ್ಪಾದನಾ ಕಂಪನಿಗಳು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಮಾರಾಟವನ್ನು ಹೆಚ್ಚಿಸಿವೆ.

ಸದ್ಯ ಮಾರುತಿ ಸುಜುಕಿ ಕಾರುಗಳಲ್ಲಿ ಡೀಸೆಲ್ ಎಂಜಿನ್ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಹೈ ಎಂಡ್ ಮಾದರಿಗಳಾದ ಎರ್ಟಿಗಾ, ಎರ್ಟಿಗಾ ಎಕ್ಸ್6, ವಿಟಾರಾ ಬ್ರೆಝಾ, ಎಸ್-ಕ್ರಾಸ್ ಮತ್ತು ಸಿಯಾಜ್ ಕಾರುಗಳಿಗೆ ಮಾತ್ರವೇ ಮುಂಬರುವ ದಿನಗಳಲ್ಲಿ ಹೊಸದಾಗಿ ಅಭಿವೃದ್ದಿಗೊಳಿಸಲಾಗಿ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಬಹುದಾದ ಸಾಧ್ಯತೆಗಳಿವೆ.

ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಾರುಗಳು ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಯಲ್ಲಿ ಮಾತ್ರವೇ ಮಾರಾಟಕ್ಕೆ ಲಭ್ಯವಿದ್ದು, ಜನಪ್ರಿಯ ಕಾರು ಮಾದರಿಗಳಾದ ಆಲ್ಟೊ, ವ್ಯಾಗನ್‌ಆರ್, ಸೆಲೆರಿಯೊ ಮತ್ತು ಎರ್ಟಿಗಾ ಮಾದರಿಯಲ್ಲಿ ಸಿಎನ್‌ಜಿ ಮಾದರಿಗಳು ಖರೀದಿಗೆ ಲಭ್ಯವಿವೆ.

ಮುಂಬರುವ ಕೆಲವೇ ದಿನಗಳಲ್ಲಿ ಸ್ವಿಫ್ಟ್, ಇಗ್ನಿಸ್ ಮತ್ತು ಸಿಯಾಜ್ ಸೆಡಾನ್ ಕಾರುಗಳಲ್ಲೂ ಸಿಎನ್‌ಜಿ ಆವವೃತ್ತಿಯನ್ನು ಪರಿಚಯಿಸಲು ಸಜ್ಜಾಗುತ್ತಿರುವ ಮಾರುತಿ ಸುಜುಕಿ ಪರಿಸರ ಸ್ನೇಹಿ ವಾಹನಗಳ ಅಭಿವೃದ್ದಿಯತ್ತ ಹೆಚ್ಚು ಗಮನಹರಿಸಿದ್ದು, ಸಣ್ಣ ಗಾತ್ರದ ಕಾರಗಳಲ್ಲಿ ಯಾವುದೇ ಕಾರಣಕ್ಕೂ ಡೀಸೆಲ್ ಎಂಜಿನ್ ಮರಳಿ ಪರಿಚಯಿಸದಿರಲು ನಿರ್ಧರಿಸಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

1.3-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಸ್ಥಗಿತದ ಮಾರುತಿ ಸುಜುಕಿ ಸಿಎನ್‌ಜಿ ಕಾರುಗಳಿಗೆ ಉತ್ತಮ ಬೇಡಿಕೆ ಕಂಡುಬರುತ್ತಿದ್ದು, 2019-20ರ ಆರ್ಥಿಕ ವರ್ಷದಲ್ಲಿ ಸಿಎನ್‌ಜಿ ಕಾರುಗಳ ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿಯು 1 ವರ್ಷದ ಅವಧಿಯಲ್ಲಿ 1,06,443 ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡಿದೆ.

ಇದಕ್ಕಾಗಿಯೇ ಹಂತಹಂತವಾಗಿ ಎಲ್ಲಾ ಕಾರು ಮಾದರಿಗಳಲ್ಲೂ ಅಧಿಕ ಮೈಲೇಜ್ ಪ್ರೇರಿತ ಸಿಎನ್‌ಜಿ ಆಯ್ಕೆಯನ್ನು ನೀಡುತ್ತಿರುವ ಮಾರುತಿ ಸುಜುಕಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಸಿಎನ್‌ಜಿ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ಸಿಎನ್‌ಜಿ ಕಾರುಗಳು ಅತಿ ಕಡಿಮೆ ಮಾಲಿನ್ಯದೊಂದಿಗೆ ಉತ್ತಮ ಮೈಲೇಜ್ ಹಿಂದಿರುಗಿಸುತ್ತವೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಸದ್ಯ ಮಾರುತಿ ಸುಜುಕಿಯು ಸಿಎನ್‌ಜಿ ಎಂಜಿನ್ ಪ್ರೇರಿತ ಆಲ್ಟೊ ಮಾದರಿಯನ್ನು ರೂ.4.11 ಲಕ್ಷಕ್ಕೆ, ಸೆಲೆರಿಯೊ ಮಾದರಿಯನ್ನು ರೂ.5.33 ಲಕ್ಷಕ್ಕೆ, ವ್ಯಾಗನ್‌ಆರ್ ಮಾದರಿಯನ್ನು ರೂ.4.99 ಲಕ್ಷಕ್ಕೆ ಮತ್ತು ಎರ್ಟಿಗಾ ಮಾದರಿಯನ್ನು 8.87 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದು, ಬಿಡುಗಡೆಯಾಗಲಿರುವ ಹೊಸ ಸಿಎನ್‌ಜಿ ಕಾರುಗಳು ಸಹ ಉತ್ತಮ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ.


Click it and Unblock the Notifications