ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದ ಬಿಎಸ್-6 ಹ್ಯುಂಡೈ ಕ್ರೆಟಾ
ಹ್ಯುಂಡೈ ಕಂಪನಿಯು ತನ್ನ ಬಹುನಿರೀಕ್ಷಿತ ಕ್ರೆಟಾ ಕಾರನ್ನು ಇದೇ ತಿಂಗಳ 17ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಹ್ಯುಂಡೈ ಇಂಡಿಯಾ ಕಂಪನಿಯು ಹೊಸ ಕ್ರೆಟಾ ಕಾರನ್ನು ಇತ್ತೀಚೆಗೆ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು.

ಬಿಎಸ್-6 ಹ್ಯುಂಡೈ ಕ್ರೆಟಾ ಕಾರಿನ ಅಧಿಕೃತ ಬುಕ್ಕಿಂಗ್ ಮಾರ್ಚ್ 2ರಂದು ಪ್ರಾರಂಭವಾಗಿತ್ತು. ಈಗಾಗಲೇ ಹ್ಯುಂಡೈ ಕ್ರೆಟಾ ಕಾರಿಗಾಗಿ 10,000 ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಾಗಿದೆ. ಯಾವುದೇ ಹ್ಯುಂಡೈ ಶೋರೂಂನಲ್ಲಿ ರೂ.21,000 ಪಾವತಿಸಿ ಈ ಕಾರಿನ ಬುಕ್ಕಿಂಗ್ ಮಾಡಬಹುದಾಗಿದೆ. ಕಿಯಾ ಸೆಲ್ಟೋಸ್ ಎಸ್‍ಯುವಿಯಲ್ಲಿರುವಂತಹ ಎಂಜಿನ್ ಆಯ್ಕೆಗಳನ್ನು ಹ್ಯುಂಡೈ ಕ್ರೆಟಾ ಕಾರಿನಲ್ಲಿ ಹೊಂದಿರಲಿದೆ.

ಈ ಎಂಜಿನ್ ಅನ್ನು ಬಿಎಸ್ 6 ನಿಯಮಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗಿದೆ. ಕ್ರೆಟಾದಲ್ಲಿರುವ 1.5 ಲೀಟರಿನ ಪೆಟ್ರೋಲ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 144 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಇನ್ನು 1.5 ಲೀಟರಿನ ಡೀಸೆಲ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಮುಂಬರುವ ದಿನಗಳಲ್ಲಿ ಕಿಯಾ ಸೆಲ್ಟೋಸ್‍ನಲ್ಲಿರುವಂತಹ 1.4 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುವುದು. ಈ ಎಂಜಿನ್ 138 ಬಿಹೆಚ್‍ಪಿ ಪವರ್ ಮತ್ತು 242 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಮೂರು ವಿಧದ ಎಂಜಿನ್‍ಗಳಲ್ಲೂ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಗಳನ್ನು ನೀಡಲಾಗುವುದು. ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಎಸ್‍ಯುವಿಯಲ್ಲಿ ಹೊಸ ಇನ್ಫೋಟೇನ್‍ಮೆಂಟ್ ಸಿಸ್ಟಂ ಅಳವಡಿಸಲಾಗುವುದು.

ಈ ಸಿಸ್ಟಂನಲ್ಲಿ ವಾಯ್ಸ್ ಕಮಾಂಡ್ ಹಾಗೂ ಬ್ಲೂಲಿಂಕ್ ಕನೆಕ್ಟಿವಿಟಿ ಫೀಚರ್‍ಗಳಿರಲಿವೆ. ಈ ಎಸ್‍ಯುವಿಯಲ್ಲಿರುವ ಸನ್‍ರೂಫ್ ವಾಯ್ಸ್ ಕಮಾಂಡ್‍ನಿಂದ ಚಲಿಸಲಿದೆ. ಆಟೋಮ್ಯಾಟಿಕ್ ಮಾದರಿಗಳಲ್ಲಿ ಪ್ಯಾಡಲ್ ಶಿಫ್ಟ್, ಡ್ಯುಯಲ್ ಹೋಸ್ ಚಿಮ್ನಿ, ರಿಮೋಟ್ ಎಂಜಿನ್ ಸ್ಟಾರ್ಟ್ ಅಪ್, ಕ್ರೂಸ್ ಕಂಟ್ರೋಲ್, ಏರ್ ಪ್ಯೂರಿಫೈಯರ್ ಹಾಗೂ ವೈರ್‍ಲೆಸ್ ಚಾರ್ಜರ್‍ಗಳಿರಲಿವೆ.

ಹ್ಯುಂಡೈ ಕ್ರೆಟಾ ಹೊಸ ವಿನ್ಯಾಸವನ್ನು ಹೊಂದಿದೆ. ಮುಂಭಾಗದಲ್ಲಿರುವ ಹ್ಯುಂಡೈನ ಕ್ಯಾಸ್ಕೇಡಿಂಗ್ ಗ್ರಿಲ್ ಹೆಚ್ಚು ಗಮನ ಸೆಳೆದರೂ, ಹೆಡ್‍ಲೈಟ್ ಮತ್ತಷ್ಟು ಗಮನ ಸೆಳೆಯುತ್ತದೆ. ಸ್ಪ್ಲಿಟ್ ಹೆಡ್‍ಲೈಟ್ ಸ್ಲಿಟ್ ರೀತಿಯ ಎಲ್ಇಡಿ ಡಿಆರ್‍ಎಲ್ ಅನ್ನು ಹೊಂದಿದೆ.

ಈ ಕಾರಿನ ಹೆಡ್‌ಲೈಟ್ ಕ್ಲಸ್ಟರ್ ಕೆಳಗೆ ಹೊಸ ಲುಕ್‍ನ ಫಾಗ್ ಲ್ಯಾಂಪ್‍ಗಳಿವೆ. ಬಂಪರ್‍ನ ಕೆಳಗೆ ಸ್ಕಫ್ ಪ್ಲೇಟ್‍ಗಳಿವೆ. ಸ್ಕ್ವೇರ್ ಶೇಪಿನ ವ್ಹೀಲ್ ಆರ್ಕ್‍ಗಳು ಕ್ರೆಟಾಗೆ ಹೆಚ್ಚಿನ ಲುಕ್ ನೀಡುತ್ತವೆ. ಈ ಕಾರಿಗೆ ಡ್ಯುಯಲ್-ಟೋನ್ ಪೇಂಟ್ ಬಣ್ಣವನ್ನು ನೀಡಲಾಗಿದ್ದು, ಸಿಲ್ವರ್ ಬಣ್ಣವನ್ನು ಸಿ ಪಿಲ್ಲರ್‍ವರೆಗೂ ನೀಡಲಾಗಿದೆ.

ಬಿಎಸ್-6 ಹ್ಯುಂಡೈ ಕ್ರೆಟಾ ಕಾರು ಬಿಡುಗಡೆಯಾದ ನಂತರ ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications