ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ ಬಿಡುಗಡೆ
ದೇಶದ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಮತ್ತು ಮಾರಾಟ ಕಂಪನಿಯಾದ ಹ್ಯುಂಡೈ ತನ್ನ ಜನಪ್ರಿಯ ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯನ್ನು ಎರಡನೇ ತಲೆಮಾರಿನ ವೈಶಿಷ್ಟ್ಯತೆಯೊಂದಿಗೆ ಬಿಡುಗಡೆಗೊಳಿಸಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಯಾದ ಕಿಯಾ ಸೆಲ್ಟೊಸ್ ಆವೃತ್ತಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಭಾರೀ ಬೇಡಿಕೆಯಿದ್ದು, ಹ್ಯುಂಡೈ ಸಂಸ್ಥೆಯು ಈಗಾಗಲೇ ಕ್ರೆಟಾ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸಿದೆ. ಇದೀಗ ಮಾರುಕಟ್ಟೆಯಲ್ಲಿ ಬೇಡಿಕೆ ಅನುಸಾರವಾಗಿ ಹೊಸ ಕಾರನ್ನು ಎರಡನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದ್ದು, ಹೊಸ ಕಾರು ಈಗಾಗಲೇ 14 ಸಾವಿರ ಬುಕ್ಕಿಂಗ್ ಪಡೆದುಕೊಳ್ಳುವ ಮೂಲಕ ದಾಖಲೆಗೆ ಕಾರಣವಾಗಿದೆ.

ಹೊಸ ಕ್ರೆಟಾ ಕಾರು ದೆಹಲಿ ಎಕ್ಸ್‌ಶೋರೂಂ ಆರಂಭಿಕವಾಗಿ ರೂ. 9.99 ಲಕ್ಷ ಬೆಲೆ ಪಡೆದುಕೊಂಡಿದ್ದು, ಟಾಪ್ ಎಂಡ್ ಮಾದರಿಯು ರೂ. 17.20 ಲಕ್ಷ ಬೆಲೆ ಪಡೆದುಕೊಳ್ಳುವ ಮೂಲಕ ಕಿಯಾ ಸೆಲ್ಟೊಸ್‌ಗೆ ಸರಿಸಮನಾಗಿ ಮಾರುಕಟ್ಟೆ ಪ್ರವೇಶಿಸಿದೆ.

ಕ್ರೆಟಾ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ಹೊಸ ಎಂಜಿನ್ ಆಯ್ಕೆಯನ್ನು ಸಹೋದರ ಸಂಸ್ಥೆಯಾದ ಕಿಯಾ ಮೋಟಾರ್ಸ್‌ನಿಂದ ಎರವಲು ಪಡೆಯಲಾಗಿದ್ದು, ಸೆಲ್ಟೊಸ್ ಕಾರಿನಂತೆಯೇ ಕ್ರೆಟಾ ಬಲಿಷ್ಠ ಎಂಜಿನ್ ಹೊಂದಿರುವ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯಾಗಿದೆ. ಇದರಿಂದ ಕ್ರೆಟಾ ಆವೃತ್ತಿಯಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಅನ್ನು ತೆಗೆದುಹಾಕಲಾಗಿದ್ದು, ಸಾಮಾನ್ಯ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಖರೀದಿಸಬಹುದಾಗಿದೆ.

1.5-ಲೀಟರ್ ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಇನ್ನು 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ 140-ಬಿಎಚ್‌ಪಿ ಉತ್ಪಾದನೆ ಮಾಡಲಿದ್ದು, ಕ್ರೆಟಾ ಆವೃತ್ತಿಯಲ್ಲೇ ಇದು ಹೈ ಎಂಡ್ ಆವೃತ್ತಿಯಾಗಿ ಮಾರಾಟಗೊಳ್ಳಲಿದೆ.

ಇದರೊಂದಿಗೆ ಹೊಸ ಕ್ರೆಟಾ ಕಾರಿನಲ್ಲಿ ಈ ಬಾರಿ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಬದಲಾವಣೆಗೊಳಿಸಲಾಗಿದ್ದು, ಹೊಸದಾಗಿ ವಿನ್ಯಾಸಗೊಳಿಸಲಾದ ಕಾಸ್‌ಕ್ಲಾಡಿಂಗ್ ಗ್ರಿಲ್, ಮರುವಿನ್ಯಾಸಗೊಳಿಸಿದ ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ಸ್ ಜೊತೆ ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಫಾಗ್ ಲ್ಯಾಂಪ್ ಒಳಗೊಂಡಿರುವ ಫ್ರಂಟ್ ಬಂಪರ್ ಮತ್ತು ಬಂಪರ್ ಸುರಕ್ಷತೆಗಾಗಿ ಸಿಲ್ವರ್ ಸ್ಕಫ್ ಪ್ಲೇಟ್ ಜೋಡಿಸಲಾಗಿದೆ.

ಈ ಬಾರಿ ಹೊಸ ಕಾರಿನಲ್ಲಿ ಎತ್ತರಿಸಿದ ವೀಲ್ಹ್ ಆರ್ಚ್ ನೀಡಲಾಗಿದ್ದು, ಡೋರ್ ಲೈನ್ ಮತ್ತು ಸಿ-ಪಿಲ್ಲರ್‌ಗೆ ಹೊಂದಾಣಿಕೆಯಾಗುವಂತಹ ಸ್ಟ್ರೀಪ್ ಕ್ರೋಮ್, ಹೊಸದಾದ ಡ್ಯುಯಲ್ ಟೋನ್ ಅಯಾಲ್ ವೀಲ್ಹ್, ಎಲ್ಇಡಿ ಟೈಲ್‌ಲೈಟ್ಸ್ ಮತ್ತು ಹೊಸ ರಿಯರ್ ಬಂಪರ್ ಜೊತೆ ರಿಫ್ಲೆಕ್ಟರ್‌ಗಳನ್ನು ಬಳಸಲಾಗಿದೆ.

ಹೊಸ ಕಾರಿನಲ್ಲಿ ಹೊರಭಾಗದಲ್ಲಿನ ಬದಲಾವಣೆಯೆಂತೆ ಒಳಭಾಗದ ತಾಂತ್ರಿಕ ಸೌಲಭ್ಯಗಳಲ್ಲೂ ಸಾಕಷ್ಟು ಬದಲಾವಣೆಗಳನ್ನು ನೀಡಲಾಗಿದ್ದು, ಹೊಸ ವಿನ್ಯಾಸದ ಡ್ಯಾಶ್‌ಬೋರ್ಡ್, ಹಲವಾರು ತಾಂತ್ರಿಕ ಸೌಲಭ್ಯಗಳ ನಿಯಂತ್ರಣ ಹೊಂದಿರುವ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, 7-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆ ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಹೊಂದಿದೆ.

ಇದರೊಂದಿಗೆ ಹ್ಯುಂಡೈ ಸಂಸ್ಥೆಯು ಹೊಸ ಕಾರಿನಲ್ಲಿ 35ಕ್ಕೂ ಹೆಚ್ಚು ಫೀಚರ್ಸ್ ಒಂದೇ ಸೂರಿನಡಿ ನಿಯಂತ್ರಿಸಬಲ್ಲ ಬ್ಲ್ಯೂ ಲಿಂಕ್ ತಂತ್ರಜ್ಞಾನವನ್ನು ಜೋಡಿಸಲಾಗಿದ್ದು, ವೈರ್‌ಲೆಸ್ ಚಾರ್ಜರ್, ವೆಂಟಿಲೆಟೆಡ್ ಫ್ರಂಟ್ ಸೀಟುಗಳು, ಕೀ ಲೆಸ್ ಎಂಟ್ರಿ, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್, ಪನಾರೊಮಿಕ್ ಸನ್‌ರೂಫ್, ಆ್ಯಂಬಿಯೆಂಟ್ ಲೈಟಿಂಗ್ಸ್ ನೀಡಲಾಗಿದೆ.

ಸುರಕ್ಷಾ ಫೀಚರ್ಸ್‌ಗಳು
ಕ್ರಟಾ ಹೊಸ ಆವೃತ್ತಿಯಲ್ಲಿ ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಪ್ರಯಾಣಿಕ ಸುರಕ್ಷತೆ ಹೆಚ್ಚಿನ ಒತ್ತು ನೀಡಲಾಗಿದ್ದು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, 4 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಪೆಡಲ್ ಶಿಫ್ಟರ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸಾರ್, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೌಲಭ್ಯವಿದೆ.

ಹಾಗೆಯೇ ಹೊಸ ಕಾರಿನಲ್ಲಿ ಒಟ್ಟು 10 ಬಣ್ಣಗಳ ಆಯ್ಕೆಯನ್ನು ನೀಡಲಾಗಿದ್ದು, ಏಳು ಸಿಂಗಲ್ ಟೋನ್ ಬಣ್ಣಗಳ ಆಯ್ಕೆಯಾಗಿದ್ದಲ್ಲಿ ಮೂರು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.


Click it and Unblock the Notifications








