ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ 2020ರ ಹ್ಯುಂಡೈ ಕ್ರೆಟಾ
ಮುಂದಿನ ಮಾರ್ಚ್ ತಿಂಗಳ 17ರಂದು ಹೊಸ ಹ್ಯುಂಡೈ ಕ್ರೆಟಾ ಭಾರತದಲ್ಲಿ ಬಿಡುಗಡೆಯಾಗಲಿದೆ. ಹ್ಯುಂಡೈ ಇಂಡಿಯಾ ಕಂಪನಿಯು ಇತ್ತೀಚೆಗೆ ಹೊಸ ಕ್ರೆಟಾ ಕಾರನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು.

ಹೊಸ ಹ್ಯುಂಡೈ ಕ್ರೆಟಾ ಕಾರಿನ ಎಂಜಿನ್ ಆಯ್ಕೆಗಳ ಪ್ರಮುಖ ಮಾಹಿತಿಗಳು ಆನ್‍ಲೈನ್‍ನಲ್ಲಿ ಸೋರಿಕೆಯಾಗಿದೆ. ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ 2020ರ ಹ್ಯುಂಡೈ ಕ್ರೆಟಾ ಇ, ಇಎಕ್ಸ್, ಎಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್ (ಒ) ಎಂಬ ಐದು ಮಾದರಿಯ ಎಂಜಿನ್ ಆಯ್ಕೆಗಳು ಮತ್ತು 14 ರೂಪಾಂತರವನ್ನು ಹೊಂದಿರುತ್ತದೆ. ಈ ಐದು ಮಾದರಿಯ ಎಂಜಿನ್ ಆಯ್ಕೆಯ ನಾಲ್ಕು ಮಾದರಿಗಳಲ್ಲಿ 1.5 ಲೀಟರ್‍ನ ಎಂಜಿನ್‍ಗಳನ್ನು ಅಳವಡಿಸಲಾಗಿದೆ.

ಇದರಲ್ಲಿ ಎರಡು ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್‍ಗಳು 115 ಬೆಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. 4ರಲ್ಲಿ ಎರಡು ಮಾದರಿಗಳಲ್ಲಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಮತ್ತು 6 ಸ್ಪೀಡ್ ಟಾರ್ಕ್ ಕರ್ನ್‍ವಾಟರ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಇನ್ನು ಕಿಯಾ ಸೆಲ್ಟೋಸ್ ಮಾದರಿಯ 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ 140 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ ಮ್ಯಾನುವಲ್ ಗೇರ್‍ಬಾಕ್ಸ್ ಆಯ್ಕೆಯನ್ನು ಹೊಂದಿರುವುದಿಲ್ಲ. ಇದರ ಬದಲಾಗಿ 7 ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಕಳೆದ ವರ್ಷ ಹ್ಯುಂಡೈ ಕ್ರೆಟಾ ಕಾರನ್ನು ಚೀನಾದಲ್ಲಿ ಹೊಸ ತಲೆಮಾರಿನ ಐಎಕ್ಸ್ 25 ಎಂಬ ಹೆಸರಿನಲ್ಲಿ ಅನಾವರಣಗೊಳಿಸಲಾಗಿತ್ತು. ಈ ಹೊಸ ಕ್ರೆಟಾ ಎಸ್‍ಯುವಿಯು ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್‍ನಲ್ಲಿ ಮಾತ್ರ ಬದಲಾವಣೆಗಳನ್ನು ಹೊಂದದೇ, ಎಂಜಿನ್‍ನಲ್ಲಿಯೂ ಬದಲಾವಣೆ ಹೊಂದಿದೆ.

ಹ್ಯುಂಡೈ ಕ್ರೆಟಾ ಹೊಸ ವಿನ್ಯಾಸವನ್ನು ಹೊಂದಿದೆ. ಮುಂಭಾಗದಲ್ಲಿರುವ ಹ್ಯುಂಡೈನ ಕ್ಯಾಸ್ಕೇಡಿಂಗ್ ಗ್ರಿಲ್ ಹೆಚ್ಚು ಗಮನ ಸೆಳೆದರೂ, ಹೆಡ್‍ಲೈಟ್ ಮತ್ತಷ್ಟು ಗಮನ ಸೆಳೆಯುತ್ತದೆ. ಸ್ಪ್ಲಿಟ್ ಹೆಡ್‍ಲೈಟ್ ಸ್ಲಿಟ್ ರೀತಿಯ ಎಲ್ಇಡಿ ಡಿಆರ್‍ಎಲ್ ಅನ್ನು ಹೊಂದಿದೆ.

ಹೆಡ್ಲೈಟ್ ಕ್ಲಸ್ಟರ್ ಅನ್ನು ಎಲ್ಇಡಿ ಹೆಡ್‌ಲೈಟ್‌ಗಳಿಂದ ತಯಾರಿಸಲಾಗಿದ್ದು, ಅದರ ಕೆಳಗೆ ಹೊಸ ಲುಕ್‍ನ ಫಾಗ್ ಲ್ಯಾಂಪ್‍ಗಳಿವೆ. ಬಂಪರ್‍ನ ಕೆಳಗೆ ಸ್ಕಫ್ ಪ್ಲೇಟ್‍ಗಳಿವೆ. ಸ್ಕ್ವೇರ್ ಶೇಪಿನ ವ್ಹೀಲ್ ಆರ್ಕ್‍ಗಳು ಕ್ರೆಟಾಗೆ ಹೆಚ್ಚಿನ ಲುಕ್ ನೀಡುತ್ತವೆ. ಈ ಕಾರಿಗೆ ಡ್ಯುಯಲ್-ಟೋನ್ ಪೇಂಟ್ ಬಣ್ಣವನ್ನು ನೀಡಲಾಗಿದ್ದು, ಸಿಲ್ವರ್ ಬಣ್ಣವನ್ನು ಸಿ ಪಿಲ್ಲರ್‍ವರೆಗೂ ನೀಡಲಾಗಿದೆ.

ಹೊಸ ಕ್ರೆಟಾದ ಹಿಂಭಾಗದಲ್ಲಿ ಸ್ಪ್ಲಿಟ್ ಎಲ್‍ಇಡಿ ಟೇಲ್ ಲ್ಯಾಂಪ್‍ಗಳಿವೆ. ಹೊಸ ಕ್ರೆಟಾ ಹಳೆಯ ಕ್ರೆಟಾ ಕಾರಿಗಿಂತ ದೊಡ್ಡದಾಗಿದ್ದು, ಉದ್ದವಾದ ವ್ಹೀಲ್‍ಬೇಸ್ ಹೊಂದಿದೆ. ಹ್ಯುಂಡೈ ಕಂಪನಿಯು ಕ್ರೆಟಾದ ಇಂಟಿರಿಯರ್ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಹ್ಯುಂಡೈ ಕ್ರೆಟಾದ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.10ಲಕ್ಷದಿಂದ-ರೂ.16 ಲಕ್ಷಗಳಾಗುವ ಸಾಧ್ಯತೆಗಳಿವೆ. ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕಿಯಾ ಸೆಲ್ಟೋಸ್‍ಗೆ ನೇರವಾಗಿ ಪೈಪೋಟಿ ನೀಡುತ್ತದೆ.


Click it and Unblock the Notifications